ಲೋಕಸಭೆಗೆ ಪತ್ನಿ ಡಾ.ಪ್ರಭಾ ಸ್ಪರ್ಧೆ ಚರ್ಚೆ ಆಗಿಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಪಕ್ಷದಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
ದಾವಣಗೆರೆ (ಸೆ.28): ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಪಕ್ಷದಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕಾಗಿ ದುಡಿದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ಅಭ್ಯರ್ಥಿಯನ್ನೇ ಲೋಕಸಭೆಗೆ ಕಾಂಗ್ರೆಸ್ಸಿನಿಂದ ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್ ಗಾಗಿ ಮೊದಲಿನಿಂದ ಹೋರಾಡಿಕೊಂಡು ಬಂದವರಿಗೆ ಟಿಕೆಟ್ ಸಿಗುತ್ತದೆ. ಡಾ.ಪ್ರಭಾ ಮಲ್ಲಿಕಾರ್ಜುನರ ಸ್ಪರ್ಧೆ ಬಗ್ಗೆ ನಿರ್ಧರಿಸಲು ಇನ್ನೂ ಸಮಯ ಇದೆ. ಮುಂದೆ ಏನಾಗುತ್ತದೋ ಕಾದು ನೋಡೋಣ. ಮಾಜಿ ಸಂಸದ ಚನ್ನಯ್ಯ ಒಡೆಯರ್‌ರ ಪುತ್ರ, ಮೊಮ್ಮಗ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸೇರಿ ಅನೇಕರು ಟಿಕೆಟ್ ಕೇಳಿದ್ದಾರೆ ಎಂದು ತಿಳಿಸಿದರು.
ಬಂದ್ ಹೆಸರಲ್ಲಿ ಜನರಿಗೆ ತೊಂದರೆ ಮಾಡಿದರೆ ಕ್ರಮ: ಡಿ.ಕೆ.ಶಿವಕುಮಾರ್
ಸಮಾಲೋಚನೆ ನಂತರ ಅಭ್ಯರ್ಥಿ ಆಯ್ಕೆ: ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ಗಮನಿಸಿ, ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ, ಒಳ್ಳೆಯ ಕೆಲಸ ಯಾರು ಮಾಡಿದ್ದಾರೆಂಬುದೂ ಸೇರಿ ಎಲ್ಲಾ ವಿಚಾರದ ಬಗ್ಗೆ ಸಮಾಲೋಚಿಸಿದ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ ಬೀರದು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೂ, ಯಾವುದೇ ಪ್ರಯೋಜನವೂ ಆಗಿರಲಿಲ್ಲ. ಈಗ ಬಿಜೆಪಿ ಜೊತೆಗೆ ಮಾಡಿಕೊಂಡಿದೆಯಷ್ಟೇ ಎಂದರು. ಜನವರಿ ವೇಳೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆಂಬ ಮಾಹಿತಿ ಇದೆ. ಡಿಕೆಶಿ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂಬ ಬಗ್ಗೆ ಚನ್ನಗಿರಿ ಶಾಸಕರು ಹೇಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಕೆಶಿಗೆ ಸಿಎಂ ಆಗುವಾಸೆ ಇದೆ. ಅಂತಹ ಆಸೆ ಎಲ್ಲರಿಗೂ ಇರುತ್ತದೆ. ಸಿಎಂ ಆಗಬೇಕೆಂಬ ಆಸೆ ಯಾರಿಗೆ ಇಲ್ಲ ಹೇಳಿ ಎಂದು ಎಸ್ಸೆಸ್ ಮಲ್ಲಿಕಾರ್ಜುನ ಮಾಧ್ಯಮದವರಿಗೆ ಪ್ರಶ್ನಿಸಿದರು.
ಕಾನೂನು ಬಾಹಿರ ಲೇಔಟ್‌ಗೆ ಎನ್‌ಒಸಿ ಇಲ್ಲ: ದಾವಣಗೆರೆಯಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಕಾನೂನು ಪ್ರಕಾರ ಎಲ್ಲವೂ ಸರಿ ಇದ್ದರೆ ಮಾತ್ರವೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಎನ್‌ಒಸಿ ನೀಡುತ್ತದೆ. ಕಾನೂನು ಉಲ್ಲಂಘಿಸಿದ್ದರೆ ಯಾವುದೇ ಕಾರಣಕ್ಕೂ ಪ್ರಾಧಿಕಾರ ಎನ್‌ಒಸಿ ನೀಡುವುದಿಲ್ಲ. ಈ ಹಿಂದೆ ಕೆಲವರಿಗೆ ಹಣ ಪಡೆದು, ಎನ್‌ಒಸಿ ನೀಡಿರುವುದೂ ಇದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ದೇವೇಗೌಡರ ಬಗ್ಗೆ ಹೇಳಿಕೆ: ರಾಜಣ್ಣ, ಬಸವರಾಜು ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಮುಂಬರುವ ಲೋಕಸಭೆ ಚುನಾವಣೆಗೆ ಹಾವೇರಿ ಕ್ಷೇತ್ರದ ಉಸ್ತುವಾರಿಯಾಗಿ ನನಗೆ ನೇಮಿಸಲಾಗಿದೆ. ಅಲ್ಲಿನ ಮುಖಂಡರು, ಕಾರ್ಯಕರ್ತರ ಸಭೆ ಕರೆದು, ಸೂಕ್ತ ಅಭ್ಯ ರ್ಥಿ ಆಯ್ಕೆ ಮಾಡುತ್ತೇವೆ. ಹೈಕಮಾಂಡ್‌ಗೂ ಕೇಳುತ್ತೇವೆ. ನಮ್ಮ ಉದ್ದೇಶವಂತೂ ಸ್ಪಷ್ಟವಾಗಿದೆ. ಗೆಲ್ಲುವ ಅಭ್ಯರ್ಥಿಗಳನ್ನೇ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಲಾಗುವುದು.
-ಎಸ್.ಎಸ್.ಮಲ್ಲಿಕಾರ್ಜುನ, ಗಣಿ, ಭೂ ವಿಜ್ಞಾನ, ತೋಟಗಾರಿಕೆ ಸಚಿವ