ಬೆಂಗಳೂರು (ಜೂ.10):  ನಾನೇ ಮುಂದಿನ ಮುಖ್ಯಮಂತ್ರಿ, ನಾಳೆಯೇ ನಾಯಕತ್ವದಲ್ಲಿ ಬದಲಾವಣೆ ಎಂದುಕೊಂಡವರೆಲ್ಲ ಪಂಕ್ಚರ್‌ ಆಗಿರುವ ಬಸ್ಸಿನ ಸೀಟಿಗೆ ಟವೆಲ್‌ ಹಾಕಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಮ್ಮ ನಾಯಕರು. ಪಕ್ಷದ ರಾಷ್ಟ್ರೀಯ ಘಟಕ ಕೂಡ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೂ ಕೆಲವರು ಸುಮ್ಮನೆ ಇರದೆ ಪಂಕ್ಚರ್‌ ಆಗಿರುವ ಬಸ್ಸಿನ ಸೀಟಿಗೆ ಟವಲ್ ಹಾಕಿದ್ದಾರೆ. ಅದರಿಂದ ಪ್ರಯೋಜನವಿಲ್ಲ. ಪೆಟ್ರೋಲ್ ಇಲ್ಲದ, ಮುಂದೆ ಹೋಗದಂಥ ಬಸ್‌ ಹತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಯಾವುದೇ ಸಂದರ್ಭದಲ್ಲಿ ಎಲೆಕ್ಷನ್ ನಡೆದ್ರೆ ಕಾಂಗ್ರೆಸ್ ಗೆಲುವು ಖಚಿತ: ಸಿದ್ದರಾಮಯ್ಯ ..

ನೀವು ಕೂಡ ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೀರಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ರೇಸ್‌ ಕುದುರೆಯಂತೆ ಓಡಲು ಇಷ್ಟವಿಲ್ಲ. ಈಗ ಯಾವುದೇ ಬದಲಾವಣೆ ಇಲ್ಲದೆ ಮುಖ್ಯಮಂತ್ರಿಗಳು ಮುಂದುವರೆಯುತ್ತಾರೆ. ಮುಂದಿನ ಭವಿಷ್ಯ ಹೇಳುವುದಕ್ಕೆ ನಾನು ಜ್ಯೋತಿಷಿ ಅಲ್ಲ. ಯಾರಾರ‍ಯರ ಹಣೆ ಬರಹ ಏನಿರುತ್ತದೆಯೋ ಅದೇ ಆಗುತ್ತದೆ. ಹಣೆ ಬರಹ ತಪ್ಪಿಸಲು ಆಗುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆ ಬಗ್ಗೆ ಪ್ರಸ್ತಾಪಿಸಿದ ಸಚಿವ ಅಶೋಕ್‌, ನಮ್ಮ ಪಕ್ಷದ ವಿಚಾರ ಸಿದ್ದರಾಮಯ್ಯ ಅವರಿಗೆ ಬೇಕಾಗಿಲ್ಲ. ಇದು ಪಕ್ಷದ ಆಂತರಿಕ ವಿಚಾರ. ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲ. ಹೀಗಾಗಿ, ನಮ್ಮ ಪಕ್ಷದ ಬಗ್ಗೆ ಚಿಂತೆ ಬೇಡ ಎಂದು ತಿರುಗೇಟು ನೀಡಿದರು.