ನಾಲ್ಕೂ ಶಾಸಕರಿಗೆ ಮಂತ್ರಿ ಭಾಗ್ಯ ಫಿಕ್ಸ್: ಹೆಸರು ಹೇಳಿದ BSY
ತೀವ್ರ ಕುತೂಹಲ ಮೂಡಿಸಿದ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಂತಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನೂತನ ಸಚಿವರಾಗುವ ಕೆಲವು ಶಾಸಕರುಗಳ ಹೆಸರುಗಳನ್ನು ಘೋಷಿಸಿದ್ದಾರೆ.
ಬೆಳಗಾವಿ, (ಜ.29): ಸಂಪುಟ ವಿಸ್ತರಣೆ ಸಂಕಟದ ನಡುವೆಯೂ ವಿವಿಧ ಕಾಮಗಾರಿಗಳ ಉದ್ಘಾಟನೆಗೆಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಬೆಳಗಾವಿ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಇಂದು (ಬುಧವಾರ) ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬೆಳಗಾವಿಯ ನಾಲ್ವರು ಶಾಸಕರಿಗೆ ಸಿಹಿ ಸುದ್ದಿ ನೀಡಿದರು. ರಮೇಶ್ ಜಾರಿಕೊಳಿ, ಶ್ರೀಮಂತ ಪಾಟೀಲ್, ಮಹೇಶ್ ಕುಮಟ್ಟಳ್ಳಿಗೆ ಸಚಿವ ಸ್ಥಾನ ಖಚಿತ ಎಂದು ಯಡಿಯೂರಪ್ಪ ಘೋಷಿಸಿದರು.
"
ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ
ಅಷ್ಟೇ ಅಲ್ಲದೇ ಇವರುಗಳ ಜತೆಗೆ ಹಿರಿಯ ಶಾಸಕರಾದ ಉಮೇಶ್ ಕತ್ತಿಗೂ ಸಹ ಸಚಿವ ಸ್ಥಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಇನ್ನು ಯಾವುದೇ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು ಶ್ರೀರಾಮುಲುಗೆ ಶಾಕ್ ನೀಡಿದರು.
ಬೆಳಗಾವಿ ಜಿಲ್ಲೆಯ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಿರುವ ಯಡಿಯೂರಪ್ಪ ಕೊನೆಯಲ್ಲಿ ಇವರುಗಳ ಹೆಸರುಗಳನ್ನು ಪಟ್ಟಿ ಮಾಡಿಕೊಂಡು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚೆ ಮಾಡುತ್ತೇನೆ. ಒಂದು ವೇಳೆ ಇದಕ್ಕೆ ಅವರು ಓಕೆ ಅಂದ್ರೆ ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೇ ಎಂದು ಹೇಳಿದರು.
"
ಈಗಾಗಲೇ ಬೆಳಗಾವಿಯ ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ ಸಂಪುಟದಲ್ಲಿದ್ದು, ಇದೀಗ ಗೆದ್ದ ಮೂರು ಜೊತೆಗೆ ಉಮೇಶ್ ಕತ್ತಿಗೂ ಸಚಿವ ಸ್ಥಾನ ನೀಡುವುದಾಗಿ ಬಿಎಸ್‌ವೈ ಹೇಳಿದ್ದಾರೆ.
ಒಂದೇ ಜಿಲ್ಲೆಗೆ ಆರು ಜನರಿಗೆ ಸಚಿವ ಸ್ಥಾನ ಕೊಟ್ರೇ ಹೇಗೆ ಎನ್ನುವ ಪ್ರಶ್ನೆ ಎದುರಾಗಿದ್ದ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಜತೆಗೆ ರಮೇಶ್ ಜಾರಕಿಹೊಳಿ ಅವರಿಗೆ ಪ್ರಮುಖ ಹುದ್ದೆ ನೀಡಿ, ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ನಿಗಮ ಮಂಡಳಿ ಕೊಡುವ ಬಗ್ಗೆ ಚರ್ಚೆಗಳು ನಡೆದಿವೆ.
ಆದ್ರೆ, ಇದೀಗ ಬಿಎಸ್‌ವೈ ಜಿಲ್ಲೆಯ ನಾಲ್ವರಿಗೂ ಸಚಿವ ಸ್ಥಾನ ಪಕ್ಕಾ ಎಂದು ಹೇಳಿರುವುದು ಸಚಿವಾಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಆದರೂ ಬಿಎಸ್‌ವೈ, ಹೈಕಮಾಂಡ್‌ನತ್ತ ಬೊಟ್ಟು ಮಾಡಿರುವುದು ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್‌ಗೆ ಢವಢವ ಶುರುವಾಗಿದೆ.
ಒಟ್ಟಿನಲ್ಲಿ ಯಡಿಯೂರಪ್ಪ ಅವರಿಗೆ ತಾವು ನೀಡಿದ ಮಾತನ್ನು ಉಳಿಸಿಕೊಳ್ಳಲು 11 ನೂತನ ಶಾಸಕರುಗಳಿಗೆ ಮಂತ್ರಿ ನೀಡಲು ತೀರ್ಮಾನಿಸಿದ್ದಾರೆ. ಆದ್ರೆ, ಇದರಲ್ಲಿ ಹೈಕಮಾಂಡ್ ಹೇಗೆ ಮಾಡುತ್ತೋ ಎನ್ನುವುದು ಬಿಎಸ್‌ವೈ ದೆಹಲಿಗೆ ಹೋಗಿ ಬಂದ ಬಳಿಕ ತಿಳಿಯಲಿದೆ.
ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ