- ವಿಜಯ್‌ ಮಲಗಿಹಾಳ

‘ಸವಾಲುಗಳನ್ನು ಎದುರಿಸುವುದು ನನಗೆ ರಕ್ತಗತವಾಗಿ ಬಂದಿದೆ. ಈ ಸವಾಲುಗಳನ್ನು ಎದುರಿಸುವ ಮೂಲಕ ನಾನು ಇನ್ನಷ್ಟುಗಟ್ಟಿಯಾಗುತ್ತ ಹೋಗುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಂಥ ಉತ್ಸಾಹ ಹೆಚ್ಚುತ್ತಿದೆ’.

- ಇದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಖಡಕ್‌ ಮಾತು.

ತಮ್ಮ ನೇತ್ವತ್ವದ ಬಿಜೆಪಿ ಸರ್ಕಾರ ಭಾನುವಾರ ತನ್ನ ಮೊದಲ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ಯಡಿಯೂರಪ್ಪ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಸಂದರ್ಶನದ ಆಯ್ದ ಪ್ರಮುಖ ಭಾಗ ಹೀಗಿದೆ...

* ನಿಮ್ಮ ನೇತೃತ್ವದ ಸರ್ಕಾರ ಮೊದಲ ಒಂದು ವರ್ಷ ಪೂರೈಸುತ್ತಿದ್ದೀರಿ?

ಅನೇಕ ಸವಾಲುಗಳ ಮಧ್ಯೆ ಮೊದಲ ವರ್ಷ ಕಳೆದಿದೆ. ‘ಸುಭದ್ರ ಸರ್ಕಾರ ಮತ್ತು ಸಮಗ್ರ ಅಭಿವೃದ್ಧಿ’ ಎಂಬ ಘೋಷ ವಾಕ್ಯದೊಂದಿಗೆ ಮುಂದಿನ ಮೂರು ವರ್ಷಕ್ಕೆ ಭದ್ರ ಬುನಾದಿ ಹಾಕುವ ಗುರಿ ಹೊಂದಿದ್ದೇನೆ.

* ನೀವು ಅಧಿಕಾರದ ಚುಕ್ಕಾಣಿ ಹಿಡಿದಾಗಲೆಲ್ಲ ಸವಾಲುಗಳು ಎದುರಾಗುತ್ತವೆಯಲ್ಲ?

ಪ್ರತಿ ಸಂದರ್ಭದಲ್ಲೂ ನಾನು ಸವಾಲುಗಳನ್ನು ಎದುರಿಸಿಕೊಂಡೇ ಬಂದಿದ್ದೇನೆ. ಸವಾಲುಗಳನ್ನು ಎದುರಿಸುವುದು ನನಗೆ ರಕ್ತಗತವಾಗಿ ಬಂದಿದೆ. ಈ ಸವಾಲುಗಳನ್ನು ಎದುರಿಸುವ ಮೂಲಕ ನಾನು ಇನ್ನಷ್ಟುಗಟ್ಟಿಯಾಗುತ್ತ ಹೋಗುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಂಥ ಉತ್ಸಾಹ ಹೆಚ್ಚುತ್ತಿದೆ. ಮೊದಲು ಪ್ರವಾಹ. ನಂತರ ವಿವಿಧ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ. ಇದೀಗ ಕೊರೋನಾ ಸೋಂಕು. ಹೀಗೆ ಒಂದಲ್ಲ ಒಂದು ರೀತಿ ಸಂಕಷ್ಟಗಳು ಸವಾಲಿನ ರೂಪದಲ್ಲಿ ಎದುರಾದವು.

* ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ತೀವ್ರ ಪ್ರವಾಹ ಉಂಟಾಯಿತು? ಅದನ್ನೆಲ್ಲ ಏಕಾಂಗಿಯಾಗಿ ಹೇಗೆ ಎದುರಿಸಿದಿರಿ?

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಮಂಡಲದ ಅಧಿವೇಶನ ನಡೆಯುತ್ತಿತ್ತು. ಪ್ರವಾಹ ಪರಿಸ್ಥಿತಿ ವಿಪರೀತಕ್ಕೆ ಹೋದ ಹಿನ್ನೆಲೆಯಲ್ಲಿ ಅಧಿವೇಶನವನ್ನೇ ಮೊಟಕುಗೊಳಿಸಿ ಪರಿಶೀಲನೆಗೆ ತೆರಳಿದೆ. ಆಗಿನ್ನೂ ಸಂಪುಟದ ವಿಸ್ತರಣೆ ಆಗಿರಲಿಲ್ಲ. ನಾನೊಬ್ಬನೇ ಏಕಾಂಗಿಯಾಗಿದ್ದೆ. ಪ್ರವಾಹ ಪರಿಸ್ಥಿತಿ ಎದುರಾದಾಗ ನನಗೆ ನಿಜವಾಗಿಯೂ ಅಗ್ನಿ ಪರೀಕ್ಷೆ. ಆ ಸಂದರ್ಭದಲ್ಲಿ ನನಗೆ ಹಗಲು ಯಾವುದು, ರಾತ್ರಿ ಯಾವುದು ಎಂಬುದು ಗೊತ್ತಾಗುತ್ತಿರಲಿಲ್ಲ. ಜಲಾವೃತಗೊಂಡ ಗ್ರಾಮಗಳ ಜನರನ್ನು ಸಂತೈಸಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಸಣ್ಣದಾಗಿರಲಿಲ್ಲ. ಆದರೂ ಎದೆಗುಂದದೆ ಇಡೀ ರಾಜ್ಯಾದ್ಯಂತ ಮೂರ್ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಸಂಚರಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಸ್ಥಿತಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಹಾಯ ಹಾಗೂ ಸಹಕಾರದೊಂದಿಗೆ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಲು ಸಾಧ್ಯವಾಯಿತು. ನನಗೂ ಆ ಕೆಲಸ ತೃಪ್ತಿ ತಂದಿದೆ.

* ಮುಖ್ಯಮಂತ್ರಿಯಾಗಿ ನೀವು ವಯಸ್ಸನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೀರಿ. ಆದರೆ, ನಿಮ್ಮ ಸಂಪುಟದ ಎಲ್ಲ ಸಚಿವರೂ ಆ ರೀತಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ?

ಇಲ್ಲ..ಇಲ್ಲ. ನಾವೆಲ್ಲ ಸಚಿವರು ಹಾಗೂ ಶಾಸಕರು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಒಬ್ಬನಾಗಿ ನಾನು ಕೆಲಸ ಮಾಡುತ್ತಿಲ್ಲ. ಕೋವಿಡ್‌ 19 ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ಪ್ರಯತ್ನದಲ್ಲಿ ನಮ್ಮ ಸರ್ಕಾರ ನಿರತವಾಗಿದೆ. ಎಲ್ಲ ಸಚಿವರೂ ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಒಬ್ಬ ಸಚಿವರೂ ಇದಕ್ಕೆ ಹೊರತಾಗಿಲ್ಲ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಹಾಗಿಲ್ಲದಿದ್ದರೆ ಕೋವಿಡ್‌ 19 ಅನ್ನು ಇಷ್ಟುಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ.

* ಕೊರೋನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರ ಅಲ್ಲವೆಂಬ ನಿಲುವಿಗೆ ಬಂದಿದ್ದು ಯಾಕೆ?

ಕೊರೋನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರ ಅಲ್ಲ. ಪ್ರತಿಯೊಬ್ಬರು ಮನೆಯಿಂದ ಹೊರಗೆ ಕಾಲಿಟ್ಟಾಗ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾದದ್ದು. ಇದು ಅತ್ಯಗತ್ಯ ಕೂಡ ಹೌದು. ಹೀಗಾಗಿಯೇ ಲಾಕ್‌ಡೌನ್‌ ಬೇಡ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಆದ್ಯತೆ ನೀಡುವುದು ಕೂಡ ಅನಿವಾರ್ಯ. ಜನರು ಕೂಡ ಇದಕ್ಕೆ ಸಹಕರಿಸಬೇಕು.

* ಪ್ರತಿ ಭಾನುವಾರದ ಲಾಕ್‌ಡೌನ್‌ ಎಲ್ಲಿವರೆಗೆ ಮುಂದುವರೆಯುತ್ತದೆ?

ಇನ್ನೊಂದೆರಡು ಭಾನುವಾರಗಳ ನಂತರ ಭಾನುವಾರದ ಲಾಕ್‌ಡೌನ್‌ ಕೂಡ ಇರುವುದಿಲ್ಲ.

* ಕೋವಿಡ್‌ನಿಂದಾಗಿ ಸರ್ಕಾರಕ್ಕೆ ತೀವ್ರ ಆರ್ಥಿಕ ಸಂಕಷ್ಟಉಂಟಾಗಿ ಅಭಿವೃದ್ಧಿಗೆ ಹೊಡೆತ ಬಿದ್ದಿದೆಯಲ್ಲ?

ಇಷ್ಟೆಲ್ಲ ಸಂಕಷ್ಟಇದ್ದರೂ ಸರ್ಕಾರಿ ನೌಕರರಿಗೆ ವೇತನ ತಡೆ ಹಿಡಿಯಲಿಲ್ಲ. ಕೆಎಸ್‌ಆರ್‌ಟಿಸಿ ಮತ್ತಿತರ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆ ಸರ್ಕಾರದಿಂದಲೇ ವೇತನ ಬಿಡುಗಡೆ ಮಾಡಲಾಗಿದೆ. ಇದರ ಮಧ್ಯೆ ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಅಭಿವೃದ್ಧಿ ಕೆಲಸಗಳಿಗೆ ತಡೆ ಹಾಕಿಲ್ಲ. ಸರ್ಕಾರದ ಯಾವುದೇ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿಲ್ಲ. ಅವುಗಳ ವೇಗ ಕಡಮೆಯಾಗಿರಬಹುದು. ಆದರೆ, ನಿರಂತರವಾಗಿ ನಡೆಯುತ್ತಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ನಾವು ಸಾಲ ಪಡೆಯುವ ಪ್ರಮಾಣವನ್ನು ಹೆಚ್ಚಿಸಿದೆ. ತುರ್ತಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿಗಾಗಿ ಕಡಮೆ ಬಡ್ಡಿಗೆ ಒಂದು ಸಾವಿರ ಕೋಟಿ ರು. ಸಾಲ ಪಡೆಯಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿವರ್ಷ 500 ಕೋಟಿ ರು. ನೀಡುತ್ತದೆ. ಆದರೆ, ನಮ್ಮಲ್ಲಿ ಕಾಮಗಾರಿಗಳ ಬಿಲ್‌ಗಳು ಬಾಕಿ ಇರುವುದರಿಂದ ಸಾಲ ಪಡೆಯಲು ನಿರ್ಧರಿಸಿದ್ದೇವೆ.

* ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಸೂಕ್ತವಾಗಿ ಹರಿದುಬರುತ್ತಿಲ್ಲ ಎಂಬ ಕೂಗಿದೆ?

ಕೇಂದ್ರ ಸರ್ಕಾರ ನಮಗೆ ಏನೇನು ಅನುದಾನದ ನೆರವು ಕೊಡಬೇಕಾಗಿದೆಯೊ ಅದನ್ನು ನೀಡುತ್ತಿದೆ. ಅದರಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಕೇಂದ್ರದಿಂದ ಪೂರ್ಣ ಸಹಕಾರವಿದೆ.

* ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ? ಕಾಂಗ್ರೆಸ್‌ ನಾಯಕರು ದಾಖಲೆಗಳನ್ನು ಮುಂದಿಟ್ಟು ಆಪಾದನೆ ಮಾಡುತ್ತಿದ್ದಾರೆ?

ಪ್ರತಿಪಕ್ಷಗಳಿಗೆ ಏನಾಗಿದೆಯೆಂದರೆ ದಿಕ್ಕು ತೋಚುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಆರ್ಭಟ ಮಾಡಬೇಕು ಎಂದುಕೊಂಡರೂ ಅವಕಾಶ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿ ತಾವು ಏನೂ ಮಾಡುತ್ತಿಲ್ಲ ಎಂದು ಅನಿಸಿದೆ. ಹೀಗಾಗಿ, ಏನೂ ಇಲ್ಲದ್ದನ್ನು ಹುಡುಕಿ ಮಾಡುವ ಪ್ರಯತ್ನದಲ್ಲಿದ್ದಾರೆ. ಇದರಿಂದ ಅವರಿಗೆ ಒಳ್ಳೆಯ ಹೆಸರೇನೂ ಬರುವುದಿಲ್ಲ. ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ವಿನಾಕಾರಣ ದಾಖಲೆ ಇಲ್ಲದೆ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಜನ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಹುಟ್ಟುಹಬ್ಬದ ಆಚರಣೆಯಲ್ಲಿ ಅವರು ಬಂದು ಹಾಡಿಹೊಗಳಿದ್ದರು. ಎಲ್ಲ ರೀತಿಯ ಸಹಕಾರ ನೀಡುತ್ತಿದ್ದರು. ಈಗ ಏಕಾಏಕಿ ಮುಗಿಬೀಳುತ್ತಿದ್ದಾರೆ. ಕಾದು ನೋಡೋಣ. ಇನ್ನು ಮುಂದಾದರೂ ಸುಧಾರಿಸಿ ಸಹಕಾರ ನೀಡಲಿ ಎಂದು ಆಶಿಸುತ್ತೇನೆ. ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಕುಳಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆದು ಮಾಹಿತಿ ಕೇಳಲಿ. ಪರಿಶೀಲಿಸಲಿ. ಅದನ್ನು ಬಿಟ್ಟು ಏನೂ ಇಲ್ಲದಿರುವುದನ್ನು ಇದೆ ಎಂಬುದಾಗಿ ಬಿಂಬಿಸುವಂತೆ ಹೇಳಿಕೆ ನೀಡುವುದು ಸರಿಯಲ್ಲ.

* ಕೋವಿಡ್‌ ಸಂಕಷ್ಟದಿಂದಾಗಿ ಬಜೆಟ್‌ನಲ್ಲಿ ಘೋಷಿಸಿದ ಅನೇಕ ಕಾರ್ಯಕ್ರಮಗಳಿಗೆ ಹೊಡೆತ ಬೀಳುವುದಿಲ್ಲವೇ?

ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಪೂರ್ಣ ವಿಶ್ವಾಸವಿದೆ. ಬಜೆಟ್‌ನಲ್ಲಿ ಘೋಷಿಸಿದ ಯಾವುದೇ ಕಾರ್ಯಕ್ರಮಗಳು ನಿಲ್ಲದಂತೆ ಅಭಿವೃದ್ಧಿಗೆ ಪೂರಕವಾಗಿ ಕ್ರಮ ಕೈಗೊಳ್ಳುತ್ತೇನೆ. ಕೇವಲ ಹಣ ಇಲ್ಲ ಎಂಬ ಕಾರಣಕ್ಕೆ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಧಕ್ಕೆ ಆಗಬಾರದು ಎಂಬುದು ನನ್ನ ಅಪೇಕ್ಷೆ.