ಆರ್‌ಎಸ್‌ಎಸ್ ಕುರಿತ ತಮ್ಮ ಹೇಳಿಕೆ ಸಂಬಂಧ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದೇಶದ ಜನರ ಕ್ಷಮಾಪಣೆ ಕೇಳಬೇಕು ಎಂದು ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರು (ಜು.06): ಆರ್‌ಎಸ್‌ಎಸ್ ಕುರಿತ ತಮ್ಮ ಹೇಳಿಕೆ ಸಂಬಂಧ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದೇಶದ ಜನರ ಕ್ಷಮಾಪಣೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ನಿಷೇಧಿಸಬೇಕು ಎಂಬ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಹುಚ್ಚುತನದ್ದು ಎಂದು ಹರಿಹಾಯ್ದರು.
ಇಡೀ ದೇಶದ ಉದ್ದಗಲಕ್ಕೆ ಆರ್‌ಎಸ್‌ಎಸ್ ಗರಡಿಯಲ್ಲಿ ಪ್ರಧಾನಿ ಮೋದಿ ಸೇರಿ ನಾವೆಲ್ಲರೂ ಬೆಳೆದವರು ಎಂದು ಗಮನ ಸೆಳೆದರು. ಮೊದಲನೆಯದಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಮೋದಿಯವರೇ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಇಂಥ ಹುಚ್ಚುತನದ ಹೇಳಿಕೆ ಕೊಟ್ಟು ಜನರ ಮುಂದೆ ಹಗುರ ಆಗದಿರಿ ಎಂದು ನಾನು ಪ್ರಿಯಾಂಕ್ ಖರ್ಗೆ ಅವರಿಗೆ ಸಲಹೆ ನೀಡುತ್ತೇನೆ ಎಂದು ಹೇಳಿದರು.
ಮತ್ತೆ ಸಕ್ರಿಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾಗಿದ್ದಾರೆ. ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನ ಮತ್ತು ಜಗನ್ನಾಥ್ ರಾವ್ ಜೋಶಿ ಅವರ ಜನ್ಮದಿನದ ಪ್ರಯುಕ್ತ ಪಕ್ಷದ ಕಚೇರಿಗೆ ಭೇಟಿ ನೀಡಿ ಉಭಯ ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಬಿಜೆಪಿ ಮಾಧ್ಯಮ ವಿಭಾಗದ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಪರ ಪ್ರಚಾರ ಕುರಿತು ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯದ ಉದ್ದಗಲಕ್ಕೆ ತೆರಳಿ ಪಕ್ಷದ ಕಾರ್ಯಕರ್ತರಿಗೆ ತಿಳಿಸುವೆ. ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕೆಂಬ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಿನಿತ್ಯ ರಾಜ್ಯ ಬಿಜೆಪಿ ಕಚೇರಿಗೆ ಬರುವುದಾಗಿ ಹೇಳಿದ್ದೆ. ವಾರಕ್ಕೆ ಒಂದು ದಿನ ಒಂದೊಂದು ಜಿಲ್ಲೆಗೆ ಹೋಗುತ್ತೇನೆ. ಮುಖಂಡರು ತಿಳಿಸಿದಂತೆ ಪ್ರವಾಸ ಮಾಡುತ್ತೇನೆ.
ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರದ ಹಗರಣಗಳ ಕುರಿತು ಕಾರ್ಯಕರ್ತರ ಸಭೆಯಲ್ಲಿ ತಿಳಿಸಿ ಜಾಗೃತಗೊಳಿಸುತ್ತೇನೆ. ಆರಂಭದಲ್ಲಿ ಸಾರ್ವಜನಿಕ ಸಭೆ ಮಾಡುವುದಿಲ್ಲ ಎಂದು ತಿಳಿಸಿದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
