ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತಮ್ಮೇಶ್‌ಗೌಡನನ್ನು ಗೆಲ್ಲಿಸಿ, ಈಗ ಅವನು ಗೆಲ್ಲದೇ ಹೋದರೆ ನಾನು ತಲೆ ಎತ್ತಕೊಂಡು ಓಡಾಡುವುದಕ್ಕಾಗಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು (ಏ.12): ರಾಜ್ಯದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತಮ್ಮೇಶ್‌ಗೌಡನಿಗಾಗಿ ಮೂರ್ನಾಲ್ಕು ಬಾರಿ ಚರ್ಚೆ ಮಾಡಿ, ಕೊನೆಯ ತನಕ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದೇನೆ. ಈಗ ತಮ್ಮೇಶ್‌ಗೌಡನನ್ನು ಗೆಲ್ಲಿಸಿ, ಈಗ ಅವನು ಗೆಲ್ಲದೇ ಹೋದರೆ ನಾನು ತಲೆ ಎತ್ತಕೊಂಡು ಓಡಾಡುವುದಕ್ಕಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತಮ್ಮೇಶ್‌ಗೌಡನನ್ನು ಭೇಟಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ತಮೇಶ್ ಗೌಡ ಗೆಲ್ಲಿಸಬೇಕು. ತಮೇಶ್ ಗೌಡ ಗೆಲ್ಲದೇ ಹೋದ್ರೆ ನಾನು ತಲೆ ಎತ್ತಕೊಂಡು ಓಡಾಡುವ ಹಾಗಿಲ್ಲ. ಇವನ್ನೊಬ್ಬನಿಗಾಗಿ ಕೊನೆತನಕ ಹೋರಾಟ ಮಾಡಿ, ಮೂರ್ನಾಲ್ಕು ಬಾರಿ ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ ಕೊನೆಗೆ ಏನೋ ಮಾಡಿ ಟಕೆಟ್ ಕೊಡಿಸಿದ್ದೀನಿ. ಹಾಗಾಗಿ ನೀವು ತಮೇಶ್ ಗೌಡನ್ನ ಗೆಲ್ಲಿಸಿಕೊಂಡು ಬನ್ನಿ ಇಲ್ಲಾಂದ್ರೆ ನನಗೆ ಮರ್ಯಾದೆ ಉಳಿಯುವುದಿಲ್ಲ ಎಂದು ಹೇಳಿದರು.
ನನ್ನ ಮಗಳು ಎದೆಗೆ ಚೂರಿ ಹಾಕಿದ್ದಾಳೆ: ಅಪ್ಪ ಕಾಂಗ್ರೆಸ್- ಮಗಳು ಬಿಜೆಪಿ
ವಿಜಯೇಂದ್ರ ಮೂಲಕ ಒತ್ತಡ: ಬ್ಯಾಟರಾಯನಪುರ ಟಿಕೆಟ್ ಪಡೆಯಲು ತಮೇಶ್ ಗೌಡ, ಎ ರವಿ ಮತ್ತು ಮುನೀಂದ್ರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಆದರೆ, ಅವರನ್ನು ಗೆಲ್ಲಿಸಿ ಎಂದು ಹೇಳುವ ವೇಳೆ ತಮೇಶ್ ಗೌಡ ಪರವಾಗಿ ಲಾಬಿ ಮಾಡಿದ್ದೀನಿ ಎಂದು ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನು ಮುಖ್ಯವಾಗಿ ತಮ್ಮೇಶ್‌ಗೌಡ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರೊಂದಿಗೆ ತೀವ್ರ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರೇ ಒತ್ತಡ ಹಾಕಿ ತಮ್ಮೇಶ್ ಗೌಡಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ ಎ ರವಿ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಆರಂಭವಾಗಿದೆ. ತಮ್ಮೇಶ್ ಗೌಡಗೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಿಂದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಒಂದು ಕಡೆ ಮುನೀಂದ್ರ ಕುಮಾರ್ ಮನೆಗೆ ಕಾರ್ಯಕರ್ತರು ದೌಡಾಯಿಸಿದರೆ, ಇನ್ನೊಂದು ಕಡೆ ಎ.ರವಿ ಕಾರ್ಯಕರ್ತರಿಂದಲೂ ಪ್ರತಿಭಟನೆ ಮಾಡಲಾಗುತ್ತಿದೆ. ಎ.ರವಿ ಮನೆ ಮುಂದೆ ಸಾವಿರಾರು ಕಾರ್ಯಕರ್ತರು ಜಮಾವಣೆ ಆಗಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಎ.ರವಿ ಕಣ್ಣಿರು ಹಾಕಿದರು.
ರಾಜಕಾರಣದಲ್ಲಿ ನಾಲಿಗೆ ಹರಿಬಿಟ್ಟ ನಟಿ ಶೃತಿ ವಿರುದ್ಧ ಕೇಸ್ ದಾಖಲು
ಬಂಡಾಯವಾಗಿ ಸ್ಪರ್ಧಿಸಲು ನಿರ್ಧಾರ: ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಎ. ರವಿ 2018 ರ ಚುನಾವಣೆಯಲ್ಲಿ ಕೃಷ್ಣಬೈರೇಗೌಡ ವಿರುದ್ದ ಕೇವಲ 5 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿಯೂ ತನಗೆ ಟಿಕೆಟ್ ಸಿಗುತ್ತೆ ಗೆಲುವು ಖಚಿತ ಎಂಬ ನಿರೀಕ್ಷೆಯಲ್ಲಿದ್ದರು. ಸದ್ಯ ಟಿಕೆಟ್ ತಮ್ಮೇಶ್‌ಗೌಡಗೆ ಘೋಷಣೆಯಾಗದ ಬೆನ್ನಲ್ಲೇ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದರ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
