ಪಕ್ಷದ ಏಳ್ಗೆಗೆ ವಿಕೇಂದ್ರೀಕರಣ ಮದ್ದು, ಖರ್ಗೆ ಬೆಂಬಲಿಸಿದರೆ ಯಥಾಸ್ಥಿತಿ, ನನ್ನನ್ನು ಬೆಂಬಲಿಸಿದರೆ ಬದಲಾವಣೆ: ತರೂರ್‌

ನವದೆಹಲಿ(ಅ.01):  ಪಕ್ಷದಲ್ಲಿ ಸದ್ಯ ಕಾಣಿಸಿಕೊಂಡಿರುವ ಎಲ್ಲಾ ಅವ್ಯವಸ್ಥೆಗಳಿಗೂ, ಅಧಿಕಾರ ವಿಕೇಂದ್ರಿಕರಣವೊಂದೇ ಮದ್ದು ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಶಿ ತರೂರ್‌, ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಹೈಕಮಾಂಡ್‌ ಸಂಸ್ಕೃತಿಗೆ ಬ್ರೇಕ್‌ ಹಾಕುವುದಾಗಿ ಭರವಸೆ ನೀಡಿದ್ದಾರೆ.

ಶುಕ್ರವಾರ ಇಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ತರೂರ್‌ ‘ಕಾಂಗ್ರೆಸ್‌ ಅಧ್ಯಕ್ಷರಿಗೆ ಅಂತಿಮ ನಿರ್ಧಾರ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯ ತೆಗೆದುಕೊಳ್ಳುವ ವ್ಯವಸ್ಥೆಯನ್ನೇ ನಾವು ಮುಂದುವರೆಸಿಕೊಂಡು ಹೋಗಲಾಗದು. ಪಕ್ಷದಲ್ಲಿನ ಸದ್ಯದ ಎಲ್ಲಾ ಬಿಕ್ಕಟ್ಟಿಗೆ ಅಧಿಕಾರ ವಿಕೇಂದ್ರಿಕರಣವೊಂದೇ ಪರಿಹಾರ. ನಾನು ಆಯ್ಕೆಯಾದರೆ ಪಕ್ಷದಲ್ಲಿನ ಹೈಕಮಾಂಡ್‌ ಸಂಸ್ಕೃತಿಯನ್ನು ಕೊನೆಗಾಣಿಸುವೆ’ ಎಂದು ಹೇಳಿದರು.

ಶಶಿ ತರೂರ್‌ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯೇ ತಪ್ಪು, ಕಾಶ್ಮೀರ, ಲಡಾಖ್‌ ಪ್ರದೇಶವೇ ನಾಪತ್ತೆ!

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಗಾಂಧಿ ಕುಟುಂಬ ಬೆಂಬಲಿತ ಅಭ್ಯರ್ಥಿ’ ಎಂದು ಬಣ್ಣಿಸಿದ ತರೂರ್‌, ‘ಯಥಾಸ್ಥಿತಿಯನ್ನು ಬೆಂಬಲಿಸುವ ವ್ಯಕ್ತಿಯನ್ನು ಸ್ಥಾಪಿತ ಸಂಸ್ಥೆ ಬೆಂಬಲಿಸುವುದರ ಬಗ್ಗೆ ನನಗೆ ಅಚ್ಚರಿ ಏನಿಲ್ಲ. ಆದರೆ ನಿಮಗೆ ಬದಲಾವಣೆ ಬೇಕಿದ್ದರೆ ನನ್ನನ್ನು ಬೆಂಬಲಿಸಿ. ನಾನು ತಳಮಟ್ಟದಲ್ಲಿ ಕೆಲಸ ಮಾಡುವವರನ್ನು ಸಶಕ್ತಗೊಳಿಸುವ ಗುರಿ ಹೊಂದಿದ್ದೇನೆ’ ಎಂದರು.

‘ಜೊತೆಗೆ ಪಕ್ಷ ಸರ್ವಸಮ್ಮತ ಒಬ್ಬರೇ ವ್ಯಕ್ತಿಯನ್ನು ಕಣಕ್ಕೆ ಇಳಿಸುವ ಗುರಿಯನ್ನೇನು ಹೊಂದಿಲ್ಲ. ಈ ಬಗ್ಗೆ ನಾನು ಗಾಂಧೀ ಕುಟುಂಬದ ಮೂವರ ಜೊತೆಗೂ ಮಾತನಾಡಿದ್ದು, ಅವರು ಕೂಡಾ ಇಂಥ ಸ್ಪರ್ಧೆ ಪಕ್ಷವನ್ನು ಇನ್ನಷ್ಟುಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂದು ತರೂರ್‌ ಹೇಳಿದರು.