ಸದನದಲ್ಲಿ HDK Vs Ashwath Narayan: ರಾಜಕೀಯ ಹಗ್ಗ ಜಗ್ಗಾಟ ಜಗಜ್ಜಾಹೀರು!
ಡಾ.ಅಶ್ವತ್ ನಾರಾಯಣ್ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವಿನ BMS ಟ್ರಸ್ಟ್ ಆರೋಪ ಪ್ರತ್ಯಾರೋಪ ಸದನದ ಕಾವು ಹೆಚ್ಚಿಸಿತ್ತು ಆದರೆ ಅಶ್ವತ್ಧ್ ನಾರಾಯಣ್ ನೀಡಿದ ಖಡಕ್ ಉತ್ತರಕ್ಕೆ ಹೆಚ್‌ಡಿಕೆ ಸೈಲೆಂಟ್ ಆಗಿದ್ದಾರೆ. ಕಾಂಗ್ರೆಸ್ ನಾಯಕರು ತಕ್ಕ ಮಟ್ಟಿಗೆ ಅಶ್ವತ್ಥ್ ಮಾತನ್ನು ಬೆಂಬಲಿಸಿದರೆ, ಬಿಜೆಪಿ ನಾಯಕರು ಮಾತ್ರ ತಮ್ಮ ಪಕ್ಷದ ನಾಯಕನ ನೆರವಿಗೆ ಬರಲೇ ಇಲ್ಲ.
ರವಿ ಶಿವರಾಮ್, ಸುವರ್ಣ ನ್ಯೂಸ್ ರಾಜಕೀಯ ವರದಿಗಾರ
ಬೆಂಗಳೂರು(ಸೆ.24): ನನ್ನನ್ನು ಗಾಳಿಯಲ್ಲಿ ಗುಂಡುಹಾರಿಸುವವ ಎಂದಿದ್ದಕ್ಕೆ, ಯಾರಪ್ಪ ಕುಮಾರ ಎಂದು ನನ್ನ ವ್ಯಂಗ್ಯ ಮಾಡಿದ್ದಕ್ಕೆ ನಾನು ಈ ದಾಖಲೆ ತಂದಿದ್ದೇನೆ ಎನ್ನುತ್ತಲೇ BMS ಟ್ರಸ್ಟ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ಡಾ.ಅಶ್ವತ್ ನಾರಾಯಣ್ ವಿರುದ್ಧ ಮಾತು ಆರಂಭಸಿದರು ಹೆಚ್ ಡಿ ಕುಮಾರಸ್ವಾಮಿ. ಅಪರೂಪಕ್ಕೆ ಒಂದು ಬಾಂಬ್ ಸಿಡಿಸುತ್ತಾರೆ ಎಂದು ಮಾಧ್ಯಮದ ಪ್ರತಿನಿಧಿಗಳೆಲ್ಲಾ ತದೇಕಚಿತ್ತದಿಂದ ಕುಮಾರಸ್ವಾಮಿ ಮಾತಿಗೆ ಕಿವಿ ಆಗಿದ್ದರು. ಸಮಾನ್ಯವಾಗಿ ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯಾವುದಾದರೂ ದಾಖಲೆ ಇಟ್ಟು ವಿಷಯ ಪ್ರಸ್ತಾಪ ಮಾಡುತ್ತಾರೆ ಎಂದರೆ ಕುತೂಹಲ ಇದ್ದೆ ಇರುತ್ತದೆ. ಅದೇ ರೀತಿ ಇಂದು ಕೂಡ ಸದನದಲ್ಲಿ ಕುಮಾರಸ್ವಾಮಿ ಅವರು BMS ಕಾಲೇಜು ವಿಚಾರವನ್ನು ಪ್ರಸ್ತಾಪ ಮಾಡಿ ಸರಿ ಸುಮಾರು ಎರಡವರೆಗೂ ಹೆಚ್ಚು ತಾಸು ಸದನದಲ್ಲಿ ಬಹಳ ಅಚ್ಚುಕಟ್ಟಾಗಿ ಸ್ಟೋರಿಯನ್ನು ನರೇಟ್ ಮಾಡಿದರು. BMS ಸಂಸ್ಥೆ ಹೇಗೆ ಹುಟ್ಟಿತು, ಅದಕ್ಕೆ ಕಾರಣ ಯಾರು? ಯಾವ ವರ್ಷ ಸಂಸ್ಥೆ ಆರಂಭವಾಯಿತು? ಟ್ರಸ್ಟ್ ನ ಉದ್ದೇಶ ಏನಾಗಿತ್ತು? ಅದರಲ್ಲಿ ಸರ್ಕಾರದ ಪಾತ್ರ ಹೇಗೆ ಇರಬೇಕು ಎನ್ನುವ ಕುರಿತು ಪಿನ್ ಟು ಪಿನ್ ಮಾಹಿತಿಯನ್ನು ದಾಖಲೆ ಸಹಿತ ಸದನದ ಮುಂದೆ ಇಟ್ಟರು. ಮುಂದುವರಿದು ಮಾತನಾಡಿದ ಕುಮಾರಸ್ವಾಮಿಯವರು ತಮ್ಮ ಮಾತಿನ ಮಧ್ಯಭಾಗದಲ್ಲಿ ಡಾ. ಅಶ್ವಥ್ ನಾರಾಯಣ್ ಹೆಸರು ಪ್ರಸ್ತಾಪ ಮಾಡುತ್ತ, bms ಟ್ರಸ್ಟ್ ಖಾಸಗಿಕರಣ ಮಾಡಲು ಅಶ್ವಥ್ ನಾರಾಯಣ್ ಪಾತ್ರ ಇದೆ. ಹಾಗಾಗಿ ಅವರು ಸಚಿವ ಸ್ಥಾನದಲ್ಲಿ ಒಂದು ಕ್ಷಣವೂ ಕೂರಬಾರದು ಎಂದು ಗಟ್ಟಿದನಿಯಲ್ಲೇ ಸದನದಲ್ಲಿ ಹೇಳಿದರು. ನಾನು ಗಾಳಿಯಲ್ಲಿ ಗುಂಡು ಹೊಡೆಯುವವನು ಎಂದು ರಾಮನಗರಕ್ಕೆ ಹೋಗಿದ್ದಾಗ ಅಶ್ವಥ್ ನಾರಾಯಣ್ ದೊಡ್ಡದಾಗಿ ನನ್ನ ಮೇಲೆ ಮಾತಾಡಿದ್ದಾರೆ. ಹೀಗಾಗಿ ಈ ದಾಖಲೆ ತೆಗೆದಿದ್ದೇನೆ ಎನ್ನುವ ಮೂಲಕ ಡಾ. ಅಶೋಕ್ ಅಶ್ವಥ್ ನಾರಾಯಣ್ ರನ್ನು ವಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದೇನೆ ಎನ್ನೋದನ್ನ ಪರೋಕ್ಷವಾಗಿ ಕುಮಾರಸ್ವಾಮಿ ಹೇಳಿದಂತೆ ಇತ್ತು.
ಎಚ್‌ಡಿಕೆ ಆರೋಪ ಸುಳ್ಳು, ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನಲ್ಲಿ ಅಕ್ರಮ ಆಗಿಲ್ಲ: ಸಚಿವ ಅಶ್ವತ್ಥ್
HD ಕುಮಾರಸ್ವಾಮಿ ಆರೋಪ ಏನು?
BMS ಟ್ರಸ್ಟ್ 10 ಸಾವಿರ ಕೋಟಿ ಬೆಲೆ ಬಾಳುತ್ತದೆ. ಸಾರ್ವಜನಿಕ ಟ್ರಸ್ಟ್‌ನ್ನು ನೀವು ಖಾಸಗಿಯವರ ಕೈಗೆ ಒಪ್ಪಿಸುವ ನಿರ್ಣಯ ಮಾಡಿದ್ದೀರಿ. ದಯಾನಂದ ಪೈ ಅವರನ್ನು ಲೈಫ್ ಟೈಮ್ ಟ್ರಸ್ಟಿ ಮಾಡುವ ನಿರ್ಧಾರಕ್ಕೆ ಸಹಿ ಹಾಕಿದ್ದು ತಪ್ಪು. ಇದರ ಉದ್ದೇಶ ಏನು? ನಾಳೆ ಆ ಟ್ರಸ್ಟ್ ಜಾಗದಲ್ಲಿ ರೀಯಲ್ ಎಸ್ಟೇಟ್ ಮಾಡಿದರೆ? ಕಾಲೇಜು ಒಡೆದು ಬಿಲ್ಡಿಂಗ್ ಕಟ್ಟಿದರೆ? ಎನ್ನುವ ಕಲ್ಪನೆಯ ಮಾತುಗಳನ್ನು ಸದನದಲ್ಲಿ ಜೋರಾಗಿ ಹೇಳಿ ಎಲ್ಲವನ್ನು ಅಶ್ವಥ್ ನಾರಾಯಣ್ ಒಬ್ಬರ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದು ಸುಳ್ಳಲ್ಲ. BMS ಟ್ರಸ್ಟ್ ಕಾಯ್ದೆ ಬದಲಾಯಿಸುವಾಗ ಸರ್ಕಾರದ ಒಪ್ಪಿಗೆ ಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಫೈಲ್ ನನ್ನ ಮುಂದೆ ಬಂದಿತ್ತು ಆದರೆ ನಾನು ಸಹಿ ಮಾಡಿರಲಿಲ್ಲ. ನನ್ನ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ತನ್ನನ್ನು ತಾನೇ ಸಮರ್ಥನೆ ಮಾಡಿಕೊಳ್ಳುತ್ತಾ, ಡಾ. ಅಶ್ವಥ್ ನಾರಾಯಣ್ ಭ್ರಷ್ಟಾಚಾರ ಮಾಡಿದ್ದಾರೆ, ಸಹಿ ಮಾರಾಟ ಮಾಡಿದ್ದಾರೆ ಎನ್ನುವ ದಾಟಿಯಲ್ಲಿ ಪಿನ್ ಡ್ರಾಪ್ ಸೈಲೆಂಟ್ ಆಗಿದ್ದ ಸದನದಲ್ಲಿ ಕುಮಾರಸ್ವಾಮಿ ಅಬ್ಭರಿಸಿದರು. BMS ಟ್ರಸ್ಟ್ ಗೆ ದಯಾನಂದ ಪೈ ಲೈಫ್ ಟೈಮ್ ಟ್ರಸ್ಟಿ ಎಂದು ನೇಮಕ ಮಾಡಿದ್ದು, ಈ ಟ್ರಸ್ಟ್ ಖಾಸಗಿ ವ್ಯಕ್ತಿ ಕೈಗೆ ನೀಡಿದ್ದಾರೆ ಎಂದು ಆರೋಪಿಸಿದರು. ಹೆಚ್ ಡಿಕೆ ಇದು ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ BMS ಟ್ರಸ್ಟ್ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಒಪ್ಪಿ ಸಹಿ ಮಾಡಲಾಗಿದೆ. ಆದರೆ ಯಡಿಯೂರಪ್ಪ ಪಾಪ ನೋಡದೆ ಒಪ್ಪಿರಬಹುದು ಎನ್ನುವ ಮೂಲಕ ಯಡಿಯೂರಪ್ಪ ಮೇಲೆ ಸಾಫ್ಟ್ ಕಾರ್ನ್‌ನಲ್ಲಿ ಮಾತಾಡಿದ ಕುಮಾರಸ್ವಾಮಿ ಏಕಮುಖಕವಾಗಿ ಡಾ. ಅಶ್ವಥ್ ನಾರಾಯಣ್‌ರನ್ನು ಟಾರ್ಗೆಟ್ ಮಾಡಿ ಮಾತನಾಡಿದರು. ಕುಮಾರಸ್ವಾಮಿ ಅವರ ಸುಧೀರ್ಘ ಎರಡೂವರೆ ತಾಸುಗಳ ಮಾತಿನ ಕೊನೆಯಲ್ಲಿ ಎಲ್ಲಪ್ಪ ಕುಮಾರ ಅಂತಿದ್ರಲ್ಲ , ತಾಕತ್ತು ಧಮ್ ಎಂದು ಸರ್ಕಾರ ಮಾತಾಡ್ತಾ ಇಲ್ಲ. ಈಗ ದಾಖಲೆ ಸಾಕಾ ಬೇಕಾ ಎಂದು ತನಗೆ ತಾನೆ ಶಹಬ್ಬಾಸ್‌ಗಿರಿ ಕೊಟ್ಟುಕೊಂಡರು. ಕುಮಾರಸ್ವಾಮಿ ಮಾತು ಕೇಳಿದ ಮೇಲೆ ಡಾ.ಅಶ್ವಥ್ ನಾರಾಯಣ್ ಸಿಕ್ಕಿಬಿದ್ದರು ಎಂದು ಬಹುತೇಕರಿಗೆ ಅನಿಸಿದ್ದು ಸುಳ್ಳಲ್ಲ.
ಇಷ್ಟಪಟ್ಟು ಮತಾಂತರವಾಗಲು ಯಾವುದೇ ನಿರ್ಬಂಧ ಇಲ್ಲ: ಸಚಿವ ಅಶ್ವಥ ನಾರಾಯಣ್
ಡಾ. ಅಶ್ವಥ್ ನಾರಾಯಣ್ ಉತ್ತರ ಏನು?
ಉತ್ತರ ನೀಡಲು ಎಷ್ಟು ಸಮಯ ಬೇಕು ಎಂದು ಸ್ಪೀಕರ್ ಕಾಗೇರಿಯವರು ಡಾ. ಅಶ್ವಥ್ ನಾರಾಯಣ್ ಅವರನ್ನು ಕೇಳಿದಾಗ ನನಗೆ ಹತ್ತೆ ನಿಮಿಷ ಸಾಕು ಎಂದು ಆತ್ಮವಿಶ್ವಾಸದಿಂದ ಮಾತು ಆರಂಭಿಸಿದರು. ಕುಮಾರಸ್ವಾಮಿಯವರ ಪ್ರತಿ ಆರೋಪಕ್ಕೂ ಅಶ್ವತ್ಥ್ ನಾರಾಯಣ್ ಪಿನ್ ಟು ಪಿನ್ ಉತ್ತರ ನೀಡಿದರು. BMS ಟ್ರಸ್ಟ್ ಆರಂಭ, ಟ್ರಸ್ಟ್ ನೀತಿ ನಿಯಮ, ಕಾಲೇಜಿನ ಬೆಳವಣಿ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್, ಟ್ರಸ್ಟ್' ರೂಪಿಸುವ ಕಾಯ್ದೆಯ ಸರಿ ತಪ್ಪುಗಳನ್ನು ಮತ್ತು ಟ್ರಸ್ಟ್ ಸರ್ಕಾರದ ಮುಂದೆ ಇಡುವ ನಿಯಮಾವಳಿಗಳನ್ನು ಬದಲಿಸುವಾಗ ಸರ್ಕಾರದ ಒಪ್ಪಿಗೆ ಬೇಕು. ಅದೇ ರೀತಿ ಸರ್ಕಾರದ ಪ್ರತಿನಿಧಿ ಕೂಡ ಟ್ರಸ್ಟ್ ಸಮಿತಿಯಲ್ಲಿ ಇದ್ದಾರೆ. ದಯಾನಂದ ಪೈ ಲೈಫ್ ಟೈಮ್ ಟ್ರಸ್ಟಿ ಆದಾಕ್ಷಣ ಅದು ಖಾಸಗಿ ವ್ಯಕ್ತಿ ಕೈಗೆ ಎಲ್ಲವೂ ಹೋಯಿತು ಎಂದಲ್ಲ. ದಯಾನಂದ ಪೈ ಬಳಿಕ ಮತ್ತೆ ಅದು ಸರ್ಕಾರದ ಅಧೀನಕ್ಕೆ ಬರುತ್ತದೆ. ಸರ್ಕಾರಿ ಅನುದಾನಿತ ಟ್ರಸ್ಟ್ ಇದಾಗಿದ್ದು, ದಯಾನಂದ ಪೈ ಹತ್ತು ವರ್ಷ ಸಂಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಕಾರಣಕ್ಕೆ ಅವರನ್ನೇ ಲೈಫ್ ಟೈಮ್ ಟ್ರಸ್ಟಿ ಎಂದು ನೇಮಕ ಮಾಡಲು ಸಂಸ್ಥೆಯ ಮೂಲ ಟ್ರಸ್ಟಿ ರಾಗಿಣಿ ನಾರಾಯಣ್ ಕೂಡ ಒಪ್ಪಿಗೆ ನೀಡಿದ್ದಾರೆ. ರಾಗಿಣಿ ನಾರಾಯಣ್‌ಗೆ ಮಕ್ಕಳಿಲ್ಲದ ಕಾರಣ ದಯಾನಂದ ಪೈ ಅವರನ್ನು ಮೊದಲು ಟ್ರಸ್ಟಿ ಆಗಿ ನೇಮಕ ಮಾಡಿಕೊಂಡಿದ್ದರು. . ಅದಾದ ಬಳಿಕ ಟ್ರಸ್ಟ್ ಕಾಯ್ದೆಗೆ ತಿದ್ದುಪಡಿ ತರುವಾಗ ಟ್ರಸ್ಟ್ ಸರ್ಕಾರದ ಮುಂದೆ ಫೈಲ್ ತಂದಾಗ, ಆ ಫೈಲ್‌ನ್ನು ಕಾನೂನು ಇಲಾಖೆಗೆ ಕಳುಹಿಸಿ ಅವರು ನೀಡಿದ ಸಲಹೆ ಮೇರೆಗೆ ಸಹಿ ಮಾಡಲಾಗಿದೆ ಎಂದು ಅಶ್ವಥ್ ನಾರಾಯಣ್ ಉತ್ತರ ನೀಡಿದರು. ಅಶ್ವಥ್ ನಾರಾಯಣ್ ಸಹಿ ಮಾಡಿ ಕಳುಹಿಸಿದ್ದ ಫೈಲ್ಸ್ ಅಂದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪನವರು ಅನುಮೋದಿಸಿದ್ದರು.
ಕುಮಾರಸ್ವಾಮಿ ಆರೋಪವನ್ನು ಸಮರ್ಥವಾಗಿ ಎದುರಿಸಿದ ಅಶ್ವಥ್ ನಾರಾಯಣ್
ರಾಮನಗರದಲ್ಲಿ ಮಾಧ್ಯಮಕ್ಕೆ ಮಾತನಾಡಿದ್ದ ಡಾ. ಅಶ್ವಥ್ ನಾರಾಯಣ್ ಕುಮಾರಸ್ವಾಮಿ ಸದನಕ್ಕೆ ಬರೋದಿಲ್ಲ. ಹಿಟ್ ಆ್ಯಂಡ್ ರನ್ ಮಾಡುತ್ತಾರೆ ಎಂದರು. ಅಂದಿನಿಂದ ಕುಮಾರಸ್ವಾಮಿ ಮತ್ತು ಡಾ. ಅಶ್ವಥ್ ನಾರಾಯಣ ನಡುವೆ ವಾಕ್ಸಮರ ನಡೆಯುತ್ತಲೇ ಇತ್ತು. ಈಗ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡ ಹೆಚ್‌ಡಿಕೆ, ದಾಖಲೆ ಹಿಡಿದು ಬಂದಿದ್ದರು. ಯಾವಾಗ ಅಶ್ವಥ್ ನಾರಾಯಣ್ ಸದನದಲ್ಲಿ ಏಕಾಂಗಿಯಾಗಿ ಸದನದಲ್ಲಿ ಉತ್ತರ ನೀಡಿದ ಅಶ್ವಥ್ ರಾಜಕೀಯ ದ್ವೇಷಕ್ಕೆ ಆರೋಪ ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಲಾರಂಭಿಸಿದಾಗ, ಕುಮಾರಸ್ವಾಮಿ ಮಾತು ಬದಲಿಸಿದ್ದರು. ನಾನು ವೈಯಕ್ತಿಕ ಕಾರಣಕ್ಕೆ ದಾಖಲೆ ತಂದಿಲ್ಲ ಎನ್ನುವ ಮೂಲಕ ತಮ್ಮ ಮಾತಿನ ಆರಂಭದಲ್ಲಿ ಹೇಳಿದ್ದ "ನನ್ನ ಕೆಣಕಿದ್ದಕ್ಕೆ ದಾಖಲೆ ತಂದಿದ್ದೇನೆ" ಎಂದಿದ್ದ ಮಾತು ಮರೆತರು. ಇಂತಹ ದಾಖಲೆ ನೂರು ಬೇಕಾದರೂ ತನ್ನಿ ನನ್ನನ್ನು ಏನು ಮಾಡೋದಕ್ಕೆ ಆಗೋದಿಲ್ಲ ಎಂದು ಪ್ರತಿಸವಾಲು ಎಸೆದ ಡಾ.ಅಶ್ವಥ್ ನಾರಾಯಣ್ ಜೋರು ದನಿಯಲ್ಲಿ ಅಬ್ಭರಿಸುತ್ತಿದ್ದರೆ ಬಿಜೆಪಿ ಸದಸ್ಯರ ಪೈಕಿ ಅಶ್ವಥ್ ನಾರಾಯಣ್ ಪರ ರೇಣುಕಾಚಾರ್ಯ ಮಾತ್ರ ಸಾಥ್ ನೀಡಿದರು.
ಡಾ. ಅಶ್ವಥ್ ನಾರಾಯಣ್ ನೆರವಿಗೆ ನಿಲ್ಲದ ಬಿಜೆಪಿ ಸದಸ್ಯರು
ಕುಮಾರಸ್ವಾಮಿ BMS ಪ್ರಕರಣ ಪ್ರಾರಂಭಿಸುತ್ತಲೇ ಅದ್ಯಾಕೊ ಎನೊ ಸಿಎಂ ಬೊಮ್ಮಾಯಿ ಸಾಹೇಬರು ಎದ್ದು ಪರಿಷತ್ ಕಡೆ ಹೊರಟು ಬಿಟ್ಟರು. ಇಷ್ಟೊಂದು ಗದ್ದಲ ಅಬ್ಭರ ನಡೆಯುತ್ತಿದ್ದರೂ, ಸಿಎಂ ಕೊನೆ ತನಕ ಬರಲೇ ಇಲ್ಲ. ಇನ್ನು ಆರ್ ಅಶೋಕ್ ವಿಧಾನಸೌಧದಲ್ಲೇ ಇದ್ದರು ಸದನಕ್ಕೆ ಮಾತ್ರ ಹಾಜರಾಗಲಿಲ್ಲ. ಆರೋಪ ಮತ್ತು ಉತ್ತರ ಎರಡು ತಕ್ಕಡಿಯಲ್ಲಿ ಸಮವಾಗಿ ತೂಗಿದಂತೆ ಕಂಡರೂ, ಕಾಯ್ದೆ ಪ್ರಕಾರ ಅಶ್ವಥ್ ನಾರಾಯಣ್ ನೀಡಿದ ಉತ್ತರ ಸದನ ಒಪ್ಪುವಂತೆ ಇತ್ತು. ಸದನದ ಕಾವನ್ನು ಮತ್ತಷ್ಟು ಬೆಚ್ಚಗೆ ಮಾಡಿದ ಸದನ ಕಲಿ ರಮೇಶ್ ಕುಮಾರ್, ಕುಮಾರಸ್ವಾಮಿಯನ್ನು ಅಲ್ಲಲ್ಲಿ ಕೆಣಕಿದ್ದು ಬಹಳ ಮಜಭೂತ್ ಆಗಿತ್ತು ಬಿಡಿ. ನಿಮ್ಮನ್ನು ಗಾಳಿಯಲ್ಲಿ ಗುಂಡು ಹೊಡೆಯುವವರು ಎನ್ನುತ್ತಾರೆ ಎಂದು ನೀವೆ ಹೇಳಿದ್ದೀರಿ. ಆದ್ರೆ ಈ ಬಾರಿ ಗುಂಡು ವೇಸ್ಟ್ ಆಗೋದು ಬೇಡ ಎಂದು ಆರಂಭದಲ್ಲಿ ಕೆಣಕಿದರೆ, ಡಾ. ಅಶ್ವಥ್ ನಾರಾಯಣ ಉತ್ತರ ಮುಗಿಯುತ್ತಿದಂತೆ, ಯಡಿಯೂರಪ್ಪನವರೆ ಇಂತಹ ಒಳ್ಳೆಯ ಸಚಿವನಿಗೆ ನೀವು ಡಿಸಿಎಂ ಸ್ಥಾನ ತಪ್ಪಿಸಿ ತಪ್ಪು ಮಾಡಿದ್ದೀರಿ ಎನ್ನುವ ಮೂಲಕ ಕುಮಾರಸ್ವಾಮಿಗೆ ಮತ್ತೆ ಕೊನೆಯದಾಗಿ ಕೆಣಕಿದರು. ಆರೋಪ ಪ್ರತ್ಯಾರೋಪ ತಾರಕಕ್ಕೆ ಏರಿ ಕುಮಾರಸ್ವಾಮಿ ಮತ್ತು ಅಶ್ವಥ್ ಏಕವಚನದಲ್ಲೆ ಬೈದಾಡಿಕೊಂಡರು. ಆಡಳಿತ ಪಕ್ಷದ ಸದಸ್ಯರು ಮಾತ್ರ ಎದ್ದೇಳಲೇ ಇಲ್ಲ. ಕೊನೆಯಲ್ಲಿ ಮಾತ್ರ ರೇಣುಕಾಚಾರ್ಯ ಒಬ್ಬರೇ ಅಶ್ವಥ್ ನೆರವಿಗೆ ಬಂದಿದ್ದು ಎದ್ದು ಕಾಣುತ್ತಿತ್ತು. ಅದ್ಯಾಕೊ ಏನೋ ಡಾ. ಅಶ್ವಥ್ ನಾರಾಯಣ್ ನೋಡೊದಕ್ಕೆ ಸಾಫ್ಟ್ ಆಗಿ ಕಂಡರು, ಪಕ್ಷದ ಒಳಗೆ ಜಾಸ್ತಿ ವಿರೋಧಿಗಳನ್ನು ಕಟ್ಟಿಕೊಂಡಂತೆ, ಅಥವಾ ಅಶ್ವಥ್ ರನ್ನು ಕಂಡರೆ ಬಿಜೆಪಿಯ ಕೆಲ ಹಿರಿ ತಲೆಗಳು ಸಹಿಸಿಕೊಂಡಂತೆ ಕಾಣುತ್ತಿಲ್ಲಅನ್ನೋದು ನಿನ್ನೆಯ ಪ್ರಸಂಗದಿಂದ ಸ್ಪಷ್ಟವಾಗಿ ಕಾಣುತ್ತಿತ್ತು. ಕುಮಾರಸ್ವಾಮಿಯವರ ಜೊತೆ ಪಕ್ಷಾತೀತವಾಗಿ ಬಹುತೇಕ ನಾಯಕರು ಅಡ್ಜೆಸ್ಟ್‌ಮೆಂಟ್ ರಾಜಕೀಯ ಮಾಡುತ್ತಾರೆ ಎನ್ನುವ ಆರೋಪದ ಮಧ್ಯೆ ಡಾ. ಅಶ್ವಥ್ ನಾರಾಯಣ್ ನಡೆ ಬಿಜೆಪಿಯಲ್ಲಿ ಒಂದು ರೀತಿ ವಿಶೇಷ ಮತ್ತು ಗಟ್ಟಿ ನಡೆಯೂ ಹೌದು.