ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು, ಇದು ಕೇವಲ ಸೌಜನ್ಯ ಭೇಟಿಯಾಗಿದ್ದು, ಯಾವುದೇ ರಾಜಕೀಯ ಅಜೆಂಡಾ ಅಥವಾ ವಿಶೇಷ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು (ಜೂ.04): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು, ಇದು ಕೇವಲ ಸೌಜನ್ಯ ಭೇಟಿಯಾಗಿದ್ದು, ಯಾವುದೇ ರಾಜಕೀಯ ಅಜೆಂಡಾ ಅಥವಾ ವಿಶೇಷ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ನಡುವಿನ ಸೌಜನ್ಯ ಭೇಟಿ ಸಹಜ. ಅದೇ ರೀತಿಯ ಭೇಟಿ ಇದಾಗಿದ್ದು, ಯಾವುದೇ ವಿಶೇಷ ಅಜೆಂಡಾ ಇರಲಿಲ್ಲ" ಎಂದು ಹೇಳಿದರು.
ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಳೂರಿನ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದು, ಆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ರಾಮಲಿಂಗಾ ರೆಡ್ಡಿ ಅವರು ಪಕ್ಷದ ಹಿರಿಯ ನಾಯಕರು. ಸಚಿವ ಖಾತೆಗಳ ಹಂಚಿಕೆ ಹಾಗೂ ಆಡಳಿತಾತ್ಮಕ ನಿರ್ಧಾರಗಳು ಮುಖ್ಯಮಂತ್ರಿ ಅವರ ವ್ಯಾಪ್ತಿಗೆ ಸೇರಿವೆ. ಆ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದು ಸೂಕ್ತವಲ್ಲ" ಎಂದರು.
ಪಿಕ್ಚರ್ ಅಭಿ ಬಾಕಿ ಹೈ..
ವಿವಿಧ ರಾಜಕೀಯ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, "ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಗೂ ಉತ್ತರ ನೀಡಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಗಿ ಹೇಳಿದರು. ವಿಪಕ್ಷ ನಾಯಕ ಆರ್. ಅಶೋಕ್ ಅವರು "ಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆ" ಎಂಬ ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, "ಅವರಿಗೆ ಹೇಳಿ, ಪಿಕ್ಚರ್ ಅಭಿ ಬಾಕಿ ಹೈ... ಇದು ಕೇವಲ ಟ್ರೇಲರ್ ಮಾತ್ರ" ಎಂದು ತಿರುಗೇಟು ನೀಡಿದರು.
ರಾಜ್ಯಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಇನ್ನಿಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಕುರಿತು ಪ್ರಶ್ನೆ ಕೇಳಿದಾಗ, "ನನ್ನನ್ನು ನೇಣು ಹಾಕಿಸಬೇಕೆಂದು ಯತ್ನಿಸುತ್ತಿದ್ದೀರಾ?" ಎಂದು ಹಾಸ್ಯಮಯವಾಗಿ ಉತ್ತರಿಸಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿದರು.


