ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್‌ ಆಗಿ ಬಿಜೆಪಿಯ ಜಯಾನಂದ ಅಂಚನ್‌ ಹಾಗೂ ಉಪ ಮೇಯರ್‌ ಆಗಿ ಬಿಜೆಪಿಯ ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.

ಮಂಗಳೂರು (ಸೆ.10) : ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್‌ ಆಗಿ ಬಿಜೆಪಿಯ ಜಯಾನಂದ ಅಂಚನ್‌ ಹಾಗೂ ಉಪ ಮೇಯರ್‌ ಆಗಿ ಬಿಜೆಪಿಯ ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಮೈಸೂರು ಪ್ರಾದೇಶಿಕ ವಿಭಾಗದ ಆಯುಕ್ತ ಡಾ.ಜಿ.ಸಿ.ಪ್ರಕಾಶ್‌ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು. ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಇದ್ದರು.

ಮಂಗಳೂರು ಮೇಯರ್ ಟಿಕೆಟ್: ಕೈ ಮುಖಂಡರ ಗುದ್ದಾಟ

ಒಟ್ಟು 60 ಮಂದಿ ವಾರ್ಡ್‌ ಸದಸ್ಯರಿದ್ದು, ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಓರ್ವ ಸಂಸದ ಸೇರಿ ಒಟ್ಟು ಸದಸ್ಯ ಬಲ 65 ಇದೆ. ಬಿಜೆಪಿಯ 44 ಸದಸ್ಯರು, ಇಬ್ಬರು ಶಾಸಕರು ಹಾಗೂ ಸಂಸದ ಸೇರಿ ಒಟ್ಟು ಬಲ 47, ಕಾಂಗ್ರೆಸ್‌ನ 14 ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್‌ ಸದಸ್ಯರು ಸೇರಿ ಒಟ್ಟು 15 ಸದಸ್ಯಬಲ ಹಾಗೂ ಇಬ್ಬರು ಎಸ್‌ಡಿಪಿಐ ಸದಸ್ಯರಿದ್ದಾರೆ. ಮೇಯರ್‌ ಆಯ್ಕೆ ಚುನಾವಣೆಯಲ್ಲಿ 60 ಮಂದಿ ಸದಸ್ಯರು ಹಾಗೂ ಇಬ್ಬರು ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ.ಭರತ್‌ ಶೆಟ್ಟಿಹಾಜರಿದ್ದು, ಒಟ್ಟು 62 ಸದಸ್ಯ ಬಲ ಹೊಂದಿತ್ತು. ಇದರಲ್ಲಿ ಬಿಜೆಪಿ ಬಲ 46 ಹಾಗೂ ಕಾಂಗ್ರೆಸ್‌ 14 ಮತ್ತು ಎಸ್‌ಡಿಪಿಐ 2 ಸದಸ್ಯರು ಇದ್ದರು.

ಚುನಾವಣೆ ವೇಳೆ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ ಕದ್ರಿ ಪದವು ವಾರ್ಡ್‌ನ ಸದಸ್ಯ, ಬಿಜೆಪಿಯ ಜಯಾನಂದ ಅಂಚನ್‌ 46 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಾಜಿ ಮೇಯರ್‌ ಆಗಿದ್ದ ದೇರೆಬೈಲ್‌ (ದಕ್ಷಿಣ) ವಾರ್ಡ್‌ ಸದಸ್ಯ ಶಶಿಧರ ಹೆಗ್ಡೆ 14 ಮತಗಳನ್ನಷ್ಟೇ ಗಳಿಸಿದರು.

ಉಪ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೆಂಟ್ರಲ್‌ ಮಾರ್ಕೆಟ್‌ ವಾರ್ಡ್‌ ಸದಸ್ಯೆ ಪೂರ್ಣಿಮಾ 46 ಮತ ಪಡೆದು ಚುನಾಯಿತರಾದರು. ಅವರ ವಿರುದ್ಧ ಕಾಂಗ್ರೆಸ್‌ ನಿಂದ ಕಣಕ್ಕಿಳಿದ ಬಂದರ್‌ ವಾರ್ಡ್‌ ಸದಸ್ಯೆ ಝೀನತ್‌ ಶಂಸುದ್ದೀನ್‌ 14 ಮತ ಪಡೆದರು. ಸದಸ್ಯರು ಕೈಯೆತ್ತುವ ಮೂಲಕ ಪರ-ವಿರೋಧ ಮತ ಚಲಾಯಿಸಿದರು. ಎಸ್‌ಡಿಪಿಐ ಪಕ್ಷದ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ತಟಸ್ಥವಾಗಿದ್ದರು.

ಈ ಬಾರಿ ಮೂರನೇ ಅವಧಿಯ ಮೇಯರ್‌ ಅಭ್ಯರ್ಥಿ ಮಂಗಳೂರು ಉತ್ತರ ಕ್ಷೇತ್ರದ ಪಾಲಾಗಿದ್ದು, ಉಪ ಮೇಯರ್‌ ಸ್ಥಾನ ದಕ್ಷಿಣ ಅಭ್ಯರ್ಥಿಗೆ ನೀಡಲಾಗಿದೆ. ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪ ಮೇಯರ್‌ಗೆ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿತ್ತು. ಮೇಯರ್‌ಗೆ ಜಯಾನಂದ್‌ ಅಂಚನ್‌ ಅವರನ್ನು ಆಯ್ಕೆ ಮಾಡುವ ಮೂಲಕ ಈ ಬಾರಿ ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದು ಗಮನಾರ್ಹ.

ನಾಲ್ಕು ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ: ಇದೇ ಸಂದರ್ಭ ನಾಲ್ಕು ಸ್ಥಾಯಿ ಸಮಿತಿಗೆ ತಲಾ ಏಳು ಮಂದಿ ಸದಸ್ಯರು ಅವಿರೋಧ ಆಯ್ಕೆಯಾಗಿರುವುದನ್ನು ಪ್ರಕಟಿಸಲಾಯಿತು. ತೆರಿಗೆ, ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿ ಕಿಶೋರ್‌ ಕೊಟ್ಟಾರಿ, ಎ.ಸಿ.ವಿನಯರಾಜ್‌, ಪ್ರವೀಣ್‌, ವನಿತಾ, ಜಗದೀಶ್‌ ಶೆಟ್ಟಿ, ಸರಿತಾ, ವರುಣ್‌ ಚೌಟ. ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿಗೆ ಹೇಮಲತಾ, ಅಬ್ದುಲ್‌ ಲತೀಫ್‌, ಸುಮಿತ್ರ, ಭರತ್‌ ಕುಮಾರ್‌, ಭಾನುಮತಿ, ಜಯಶ್ರೀ, ಗಾಯತ್ರಿ. ಪಟ್ಟಣ ನಗರ ಯೋಜನಾ ಸಮಿತಿಗೆ ಶಕೀಲಾ ಕಾವ, ಭಾಸ್ಕರ್‌, ಅನಿಲ್‌ ಕುಮಾರ್‌, ಲಕ್ಷ್ಮೇ ಶೇಖರ್‌, ಸಂಗೀತಾ ನಾಯಕ್‌, ಲೋಹಿತ್‌ ಅಮೀನ್‌, ಚಂದ್ರಾವತಿ. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ನಯನಾ ಕೋಟ್ಯಾನ್‌, ಸಂಶುದ್ದೀನ್‌, ಅಬ್ದುಲ್‌ ರವೂಫ್‌, ಸುನಿತಾ ಸಂಧ್ಯಾ, ರೇವತಿ ಹಾಗೂ ಶೈಲೇಶ್‌ ಶೆಟ್ಟಿಆಯ್ಕೆಯಾದರು.

ಅಪೂರ್ಣ ಕಾಮಗಾರಿ ಪೂರ್ಣಕ್ಕೆ ಆದ್ಯತೆ: ಮೇಯರ್‌:

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾದ ಜಲಸಿರಿ, ಗೇಲ್‌ ಪೈಪ್‌ಲೈನ್‌, ರಸ್ತೆ ಕಾಮಗಾರಿ ಸೇರಿದಂತೆ ಅಪೂರ್ಣವಾಗಿರುವ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಪೂರ್ಣಗೊಳಿಸಲು ನನ್ನ ಅವಧಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ನೂತನ ಮೇಯರ್‌ ಜಯಾನಂದ ಅಂಚನ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪಕ್ಷದ ಹಿರಿಯ ಸದಸ್ಯರು, ಮೇಯರ್‌ಗಳ ಮಾರ್ಗದರ್ಶನ, ಪಕ್ಷ ಹಾಗೂ ಪ್ರತಿಪಕ್ಷದ ನಾಯಕರು, ಸದಸ್ಯರ ಸಲಹೆಯ ಮೇರೆಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜತೆಗೆ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನ ಹರಿಸುತ್ತೇನೆ ಎಂದರು.

ಅಭಿವೃದ್ಧಿ ಕಾರ್ಯಕ್ಕೆ ಒತ್ತು: ಮೇಯರ್‌ ಜತೆ ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಪಾಲಿಕೆಯ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುವುದಾಗಿ ನೂತನ ಉಪ ಮೇಯರ್‌ ಪೂರ್ಣಿಮಾ ಹೇಳಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ 39ರ ಹರೆಯದ ಪೂರ್ಣಿಮಾ ಪಾಲಿಕೆಯಲ್ಲಿ ಎರಡನೆ ಅವಧಿಗೆ ಸದಸ್ಯರಾಗಿದ್ದಾರೆ. ಚುನಾವಣೆ ಬಳಿಕ ನೂತನ ಮೇಯರ್‌ ಹಾಗೂ ಉಪ ಮೇಯರ್‌ಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. 

ಮಂಗಳೂರು ಪಾಲಿಕೆ: ಗೃಹ ಬಳಕೆ ನೀರಿನ ದರ ಇಳಿಕೆ ಆದೇಶ

ಮೇಯರ್‌ ಪರಿಚಯ: ಕದ್ರಿ (ಪದವು) ವಾರ್ಡ್‌ನ ಸದಸ್ಯರಾದ 55ರ ಹರೆಯದ ಜಯಾನಂದ್‌ ಅಂಚನ್‌ ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಕೆಪಿಟಿಯಲ್ಲಿ ಐಟಿಐ (ಎಲೆಕ್ಟ್ರಾನಿಕ್ಸ್‌) ಡಿಪ್ಲೊಮಾ ಪಡೆದಿರುವ ಇವರ ಪತ್ನಿ ವೇದಶ್ರೀ ಗೃಹಿಣಿಯಾಗಿದ್ದಾರೆ. ಹಿಂದೆ ಬಿಜೆಪಿ ವಾರ್ಡ್‌ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಜಯಾನಂದ ಅಂಚನ್‌ ಪಾಲಿಕೆಯಲ್ಲಿ ಪ್ರಸಕ್ತ ದ್ವಿತೀಯ ಅವಧಿಗೆ ಸದಸ್ಯರಾಗಿದ್ದಾರೆ.