ಬೆಂಗಳೂರು (ಅ.01): ನಗರದ ರಾಜರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಕೋರ್ ಕಮಿಟಿಯು ಶೀಘ್ರದಲ್ಲೇ ಮಾಡುತ್ತದೆ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಈ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಸ್ಪಷ್ಪಡಿಸಿದರು.

ಬೆಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಅವರು ಮಾತನಾಡಿದರು. ಕೋವಿಡ್ ಕಾರಣಕ್ಕೆ ಮನೆಯಲ್ಲೇ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಂದ ಅವರು ಗುರುವಾರ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು.

ಶಿರಾ ಜೆಡಿಎಸ್‌ ಅಭ್ಯರ್ಥಿ ಆಯ್ಕೆ : 2 ದಿನದಲ್ಲಿ ಘೋಷಣೆ .

ರಾಜರಾಜೇಶ್ವರಿ ನಗರದಲ್ಲಿ ಮಾಜಿ ಶಾಸಕ ಮುನಿರತ್ನ ಅವರಿಗೇ ಟಿಕೆಟ್ ಕೊಡಬೇಕಾ? ಬೇಡವಾ? ಎನ್ನುವುದನ್ನು ಪಕ್ಷದ ನಾಯಕತ್ವವೇ ನಿರ್ಧರಿಸುತ್ತದೆ. ಈ ವಿಷಯವನ್ನು ಬಹಿರಂಗವಾಗಿ ಚರ್ಚೆ ಮಾಡಲಾಗದು. ಪಕ್ಷದ ಮಟ್ಟದಲ್ಲಿ ಎಲ್ಲವೂ ಸಮಾಲೋಚನೆ ನಡೆಯುತ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಣೆ ಹೊರಬೀಳುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿಯೇ ಗೆಲ್ಲುತ್ತದೆ:  ಕಳೆದ ಒಂದು ವರ್ಷದಿಂದ ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡಿದೆ. ಕೋವಿಡ್‌ ನಿರ್ವಹಣೆ, ನೆರೆ ಸೇರಿ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ. ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಚುನಾವಣೆಗೆ ಪಕ್ಷ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಸಿಎಂ ತಿಳಿಸಿದರು.