ಶಿರಾ ಜೆಡಿಎಸ್ ಅಭ್ಯರ್ಥಿ ಆಯ್ಕೆ : 2 ದಿನದಲ್ಲಿ ಘೋಷಣೆ
ಈಗಾಗಲೇ ರಾಜ್ಯದಲ್ಲಿ ಚುನಾವಣೆ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಕೂಡ ಜೋರಾಗಿದೆ.
ಶಿರಾ (ಅ.01): ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶಿರಾದಲ್ಲಿ ಬುಧವಾರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಶಿರಾ ಉಪಚುನಾವಣೆ ಅಭ್ಯರ್ಥಿ ಘೋಷಣೆಯನ್ನು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡುತ್ತೇವೆ. ಸ್ಥಳೀಯ ನಾಯಕರು, ಮುಖಂಡರೊಂದಿಗೆ ಚರ್ಚೆ ನಡೆಸಿ ಅಭ್ಯರ್ಥಿ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ಶಿರಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯ ಪ್ರಕ್ರಿಯೆಯಲ್ಲಿ ಬಹಳ ವೇಗವಾಗಿ ಹೊಗುತ್ತಿದ್ದಾರೆ. ಜೆಡಿಎಸ್ ಇನ್ನೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಇದಕ್ಕೆ ಕಾರಣ ನಾನು ಶಿರಾ ಕ್ಷೇತ್ರದ ಜನರ ಮೇಲಿಟ್ಟಿರುವ ನಂಬಿಕೆÜ. ಈ ಕ್ಷೇತ್ರದ ಜನ ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.
ಹಾಲು ಕೊಡುತ್ತಿರೋ, ವಿಷ ಕೊಡುತ್ತೀರೋ!
ಶಿರಾ: ಶಿರಾ ಉಪ ಚುನಾವಣೆಯಿಂದ ಹೊಸ ರಾಜಕೀಯ ಆರಂಭವಾಗಬೇಕು. ವಿಷ ಕೊಡುತ್ತೀರೋ ಅಥವಾ ಹಾಲು ಕೊಡುತ್ತೀರೋ ಎಂಬುದು ನಿಮಗೇ ಬಿಟ್ಟಿದ್ದು ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ನುಡಿದ ಪ್ರಸಂಗ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು.
ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಶಿರಾದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಾರು 48 ನಿಮಿಷದಷ್ಟುಸುದೀರ್ಘ ಭಾಷಣ ಮಾಡಿದ ಅವರು, ಕ್ಷೇತ್ರದ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳ ಸುಳ್ಳು ಭರವಸೆಗಳನ್ನು ನಂಬದೆ ಜೆಡಿಎಸ್ ಕೈಹಿಡಿಯಬೇಕು ಎಂದರು.
ಈ ಬಾರಿಯ ಶಿರಾ ಉಪಚುನಾವಣೆ ಜೆಡಿಎಸ್ ಪಕ್ಷಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಈ ಚುನಾವಣಾ ಫಲಿತಾಂಶ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಮುನ್ಸೂಚನೆ. ಈ ಬಾರಿಯ ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿದರಷ್ಟೇ ನಾನು ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದರು.