ತುಮಕೂರು (ಅ.25):  ಶಿರಾ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜೇಶಗೌಡ ಗೆಲ್ಲುವುದು ಖಚಿತ ಎಂಬ ವಿಶ್ವಾಸವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶಿರಾ ಚುನಾವಣೆ ದೊಡ್ಡ ಸವಾಲು ನಮಗೆ ಎಂದ ಅವರು ನಮ್ಮ ಪಕ್ಷದವರೇ ನಿರೀಕ್ಷೆ ಮಾಡಿರದಷ್ಟರ ಮಟ್ಟಿಗೆ ನಾವು ಮುಂದಿದ್ದೇವೆ ಎಂದರು.

ಕಾಂಗ್ರೆಸ್‌ನ 5 ಶಾಸಕರು ಬಿಜೆಪಿಗೆ: ಡಿಸಿಎಂ ಸಿಡಿಸಿದ ಬಾಂಬ್! ...

ನಮ್ಮಲ್ಲಿ ನಾಯಕತ್ವದ ಗೊಂದಲ ಇಲ್ಲವೇ ಇಲ್ಲ. ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿರುವುದಾಗಿ ಹೇಳಿದ ಅವರು ಯುವಮೋರ್ಚಾದ ಜೊತೆಗೆ ಎಲ್ಲಾ ಮೋರ್ಚಾಗಳು ಸೇರಿ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಯುವಮೋರ್ಚಾ ನಮಗೆ ದೊಡ್ಡ ಶಕ್ತಿ, ಹಾಗಾಗಿ ಅದು ದೊಡ್ಡ ಶಕ್ತಿ ತುಂಬುತ್ತದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಗೆಲ್ಲುವ ಮೂಲಕ ಐತಿಹಾಸಿಕ ಜಯ ನಮ್ಮದಾಗಲಿದೆ ಎಂದರು.

ಕೆ.ಆರ್‌. ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವೈಫಲ್ಯಗಳನ್ನು ತೆಗೆದುಕೊಂಡು ಜನರ ಬಳಿ ಹೋದೆವು. ಹೀಗಾಗಿ ಬಿಜೆಪಿ ಆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಕೊಟ್ಟಂತಹ ಭರವಸೆಯನ್ನು ಸಹ ಈಡೇರಿಸಿದ್ದೇವೆ. ಇದು ನಿಜವಾದ ಕೆ.ಆರ್‌. ಪೇಟೆ ಮಾದರಿ ಎಂದರು.

ಶಿರಾದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಇಷ್ಟುವರ್ಷ ಆಡಳಿತ ನಡೆಸಿದ ಜೆಡಿಎಸ್‌, ಕಾಂಗ್ರೆಸ್‌ ಪಕ್ಷ ಮದಲೂರು ಕೆರೆಗೆ ನೀರು ಹರಿಸಿಲ್ಲ ಎಂದ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ 83 ಸಾವಿರ ಮತಗಳು ಈ ಕ್ಷೇತ್ರದಲ್ಲಿ ಲಭಿಸಿದೆ. ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇವೆ ಎಂದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾರುಪತ್ಯ ಇರುವ ಶಿರಾ ಕ್ಷೇತ್ರವನ್ನು ಈ ಉಪಚುನಾವಣೆಯಲ್ಲಿ ಬೇಧಿಸುವುದಾಗಿ ಅವರು ತಿಳಿಸಿದರು.