ಶಿರಾ(ಅ.25): ರಾಜ್ಯದಲ್ಲಿ ಉಪಚುನಾವಣೆ ಕಾವು ಏರುತ್ತಿರುವ ಹೊತ್ತಲ್ಲೇ ‘ಕಾಂಗ್ರೆಸ್‌ನ ಐವರು ಶಾಸಕರು ಬಿಜೆಬಿ ಸೇರಲು ಸಿದ್ಧರಿದ್ದಾರೆ. ನಾವು ಬರುತ್ತೇವೆ ನಮ್ಮನ್ನು ಕರೆದುಕೊಳ್ಳಿ ಎನ್ನುತ್ತಿದ್ದಾರೆ.’ ಎನ್ನುವ ಮೂಲಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್‌ನವರು 71 ಶಾಸಕರಿದ್ದು, ಅವರಲ್ಲಿ ಈಗ ಮತ್ತೆ 5 ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ. ನಾವು ಬರುತ್ತೇವೆ ನಮ್ಮನ್ನು ಕರೆದುಕೊಳ್ಳಿ ಎನ್ನುತ್ತಿದ್ದಾರೆ. ಬರಲು ತಯಾರಾಗಿದ್ದಾರೆ. ಇವರ ಜೊತೆಯಲ್ಲಿ ಶಿರಾ ಹಾಗೂ ಆರ್‌.ಆರ್‌.ನಗರದಿಂದ ಇಬ್ಬರು ಆಯ್ಕೆಯಾಗಿ ಬರುತ್ತಾರೆ. ನಮ್ಮ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಇನ್ನು ಎರಡೂವರೆ ವರ್ಷ ಆಡಳಿತ ಸುಗಮವಾಗಿ ನಡೆಯುತ್ತದೆ ಎಂದು ತಿಳಿಸಿದರು.

ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ನಾವು ಮುಂದಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಜೆಡಿಎಸ್‌ನವರು ನಿದ್ರಾವಸ್ಥೆಯಲ್ಲಿದ್ದಾರೆ. ಮರಾಠ ಗಾದೆಯಂತೆ ನೋಡೋಕೆ ಒಂದು ಥರ ಇದ್ದರೆ ನಿಜವಾಗಿಯೂ ಅದು ಹಾಗೆ ಇರುವುದಿಲ್ಲ ಎಂದು ಟಾಂಗ್‌ ನೀಡಿದರು.

ಇದೇವೇಳೆ ಕೆ.ಎನ್‌.ರಾಜಣ್ಣ ಅವರ ವಿಷಯ ಪ್ರಸ್ತಾಪಿಸಿದ ಸವದಿ, ರಾಜಣ್ಣ ನನಗೆ 20 ವರ್ಷದ ಸ್ನೇಹಿತರು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಣ್ಣ ಒಬ್ಬ ದೇಶಪ್ರೇಮಿಯಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸಿದರು. ದೇಶದ ಒಳಿತಿಗಾಗಿ ಮತ ನೀಡಿ ಎಂದು ಹೇಳಿದರು. ಈಗ ಒತ್ತಡಕ್ಕೆ ನಿಮ್ಮ ಬಳಿ ಬರಬಹುದು ಎಂದು ಅಭಿಪ್ರಾಯಪಟ್ಟರು.