ಹಾವೇರಿ [ನ.30]: ಉಪ ಚುನಾವಣೆ ಬಳಿಕ ಬಿಜೆಪಿ ಬಹುಮತ ಕಳೆದುಕೊಳ್ಳಲಿದೆ, ಇಂಥ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ‘ಆಪರೇಷನ್‌ ಕಮಲ’ ನಡೆಯಲಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಂಥ ಸಾಧ್ಯತೆಗಳನ್ನು ಅಲ್ಲಗಳೆದಿದ್ದಾರೆ. ಪ್ರತಿಪಕ್ಷಗಳ ಅನೇಕ ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿರುವುದು ನಿಜ. ಆದರೆ ಹೊಸದಾಗಿ ಯಾರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಲ್ಲ, ಮುಂದಿನ ಮೂರೂವರೆ ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಉಪ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರ ‘ಕನ್ನಡಪ್ರಭ’ದ ಜತೆಗೆ ಮಾತನಾಡಿ, ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿರುವುದು ನಿಜ. ಬಿಜೆಪಿಗೆ ಬರಲು ಸಿದ್ಧವಿರುವುದಾಗಿಯೂ ಅವರಲ್ಲಿ ಅನೇಕರು ಹೇಳಿದ್ದಾರೆ. ಆದರೆ, ನಮಗೆ ಬಹುಮತವಿದೆ. ಹೀಗಿದ್ದಾಗ ಹೊಸದಾಗಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮುಂದೆ ಈ ಕಾರಣಕ್ಕಾಗಿ ಉಪ ಚುನಾವಣೆ ಎದುರಾಗುವುದೂ ಇಲ್ಲ. ಸದ್ಯ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನಾವು ಹದಿನೈದಕ್ಕೆ ಹದಿನೈದೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ನಮಗೆ ಮುಂದೆ ಯಾರ ಸಹಕಾರ, ಬೆಂಬಲವೂ ಬೇಕಾಗಿಲ್ಲ. ಬಹುಮತದಿಂದ ಪೂರ್ಣಾವಧಿ ಅಧಿಕಾರ ನಡೆಸಲಿದ್ದೇವೆ ಎಂದು ಪುನರುಚ್ಚರಿಸಿದರು.

ಬಿಜೆಪಿಯದ್ದೇ ಅಲೆ: ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿ ಪರವಾಗಿ ಈ ರೀತಿಯ ಜನಸ್ಪಂದನೆ ಎಂದೂ ಕಂಡಿಲ್ಲ. ಉಪ ಚುನಾವಣೆ ನಡೆಯುತ್ತಿರುವ ಎಲ್ಲ ಕಡೆ ಬಿಜೆಪಿ ಅಲೆಯಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಉಪ ಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಬಹುತೇಕ ಎಲ್ಲ ಕಡೆ ಈಗಾಗಲೇ ಗೆದ್ದೂ ಆಗಿದೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಬೇಕು ಎಂಬುದಕ್ಕಾಗಿ ಮಾತ್ರ ಪ್ರಚಾರ ತೀವ್ರಗೊಳಿಸಿದ್ದೇವೆ. ಇದನ್ನೆಲ್ಲ ನಾನು ಕಲ್ಪನೆ ಮಾಡಿ ಹೇಳುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಓಡಾಡಿ ವಸ್ತುಸ್ಥಿತಿ ಅರಿತೇ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಡಿ.9ರ ಬಳಿಕ ನಮ್ದೇ ಸರ್ಕಾರ: ಸಿದ್ದರಾಮಯ್ಯ...

ನಾನೇ ಸಿಎಂ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮಧ್ಯಂತರ ಚುನಾವಣೆ ಬಗ್ಗೆ ವಿರೋಧಪಕ್ಷಗಳು ಮಾತನಾಡುತ್ತಿದ್ದಾರೆ. ಸದ್ಯ ನಾವು 107 ಶಾಸಕರಿದ್ದೇವೆ. ಈಗ 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಆರೇಳು ಸ್ಥಾನ ಗೆದ್ದರೂ ಬಹುಮತಕ್ಕೆ ಸಮಸ್ಯೆಯಾಗದು. ಆದ್ದರಿಂದ ಸರ್ಕಾರ ಬದಲಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿರೋಧ ಪಕ್ಷದವರಿಗೆ ಕೆಲಸವಿಲ್ಲ, ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾತನಾಡಿಕೊಳ್ಳಲಿ ಬಿಡಿ. ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರವೇ ಮುಂದುವರಿಯಲಿದೆ ಮತ್ತು ನಾನೇ ಮುಂದಿನ ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿ ಆಗಿರುತ್ತೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಇದೇ ವೇಳೆ, ಉಪ ಚುನಾವಣೆ ನಂತರದ ರಾಜ್ಯದಲ್ಲಿ ರಾಜಕೀಯ ತಿರುವಿನ ಕುರಿತ ದೇವೇಗೌಡರು-ಕುಮಾರಸ್ವಾಮಿ ಭವಿಷ್ಯದ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರು ಬೇಕಾದದ್ದು ಮಾತನಾಡಿಕೊಳ್ಳಲಿ. ದಿನಕ್ಕೊಂದು ರೀತಿ ಮಾತನಾಡುವವರ ಬಗ್ಗೆ ನಾನೇನು ಹೇಳಲಿ? ಅವರು ಬೇಕಾದ ಕನಸು ಕಾಣಲಿ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಅವರು ಹೇಳಿಕೆಯಲ್ಲಿ ಯಾವ ಅರ್ಥವೂ ಇಲ್ಲ ಎಂದು ತಿಳಿಸಿದರು.

ಎಚ್‌ಡಿಕೆ, ಡಿಕೆಶಿ ಹೇಳಿಕೆ ಆಧಾರ ರಹಿತ-ಸಿಎಂ

ಬಿಜೆಪಿಯ ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಏನು ಬೇಕಾದರೂ ಹೇಳಿಕೆ ಕೊಡಬಹುದು. ಆದರೆ, ಅದೆಕ್ಕೆಲ್ಲ ಆಧಾರ ಇರಬೇಕು. ಬಿಜೆಪಿ ಶಾಸಕರು ಪ್ರತಿಪಕ್ಷಗಳ ಸಂಪರ್ಕದಲ್ಲಿದ್ದಾರೆಂಬುದೆಲ್ಲ ಆಧಾರ ರಹಿತ. ಕಾಂಗ್ರೆಸ್‌ನವರು ಜನರಲ್ಲಿ ಗೊಂದಲ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೆ. ಇಂಥ ಹೇಳಿಕೆಗಳು ಮುಖ್ಯಮಂತ್ರಿಯಾದವರಿಗೆ, ನಾಯಕರಿಗೆ ಶೋಭೆ ತರುವುದಿಲ್ಲ ಎಂದರು.