ಅಥಣಿ  [ನ.30]:  ಉಪಚುನಾವಣೆ ನಂತರ ರಾಜ್ಯದ ಬಿಜೆಪಿ ಸರ್ಕಾರ ಪತನಗೊಂಡು ಮಧ್ಯಂತರ ಚುನಾವಣೆ ಎದುರಾಗಲಿದೆ ಎನ್ನುತ್ತಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಡಿ.9ರಂದು ಉಪಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನ ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡುವುದು ಶತಃಸಿದ್ಧ. ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಯಾಚಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಎಷ್ಟೇ ರೌಂಡು ಹೊಡೆಯಲಿ, ಈ ಉಪಚುನಾವಣೆಯಲ್ಲಿ ಹದಿನೈದೂ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ಡಿ.9ರ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ. ಇದು ಅತಿಶಯೋಕ್ತಿಯಲ್ಲ ಎಂದು ಹೇಳಿದ್ದಾರೆ.

ರಾಜೀನಾಮೆ ಶತಃಸಿದ್ಧ:  ಡಿ.10ರಂದು ಬಿ.ಎಸ್‌.ಯಡಿಯೂರಪ್ಪ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿಸುವುದು ಶತಃಸಿದ್ಧ. ಯಡಿಯೂರಪ್ಪ ಅಯೋಗ್ಯ ಮುಖ್ಯಮಂತ್ರಿ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ವ್ಯಕ್ತಿ. 2008 ಮತ್ತು 2019ರಲ್ಲೂ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಾತ ಎಂದು ಏಕವಚನದಲ್ಲಿ ಮೂದಲಿಸಿದರು.

ಯಡಿಯೂರಪ್ಪ, ಕುದುರೆ ವ್ಯಾಪಾರ ಮಾಡಿ ಶಾಸಕರನ್ನು ಖರೀದಿ ಮಾಡಿದ್ದಾನೆ. ಈ ಉಪ-ಚುನಾವಣೆಯ ಖರ್ಚಿಗಾಗಿ ಪ್ರತಿ ಕ್ಷೇತ್ರಕ್ಕೆ .20 ಕೋಟಿ ಹಣವನ್ನು ನೀಡಿದ್ದಾನೆ. ಹಣದ ಹೊಳೆಯನ್ನೇ ಹರಿಸುತ್ತಿದ್ದಾನೆ. ಅದಕ್ಕಾಗಿ ಅವರ ಕಡೆ ಹಣ ಪಡೆದು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕು ಎಂದರು.

ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಮಾಡಿದಂತೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಅವರಿಗೆ ಜನರ ಸಂಕಷ್ಟದ ಅರಿವಿಲ್ಲ. ದೇವರಾಜ ಅರಸ ನಂತರ ಈ ರಾಜ್ಯದಲ್ಲಿ 5 ಅವಧಿಯನ್ನು ಪೂರ್ಣ ಮಾಡಿರುವ ಏಕೈಕ ಮುಖ್ಯಮಂತ್ರಿ ನಾನು ಎಂದು ಬೆನ್ನು ತಟ್ಟಿಕೊಂಡರು.

ರಮೇಶ್‌-ಹೆಬ್ಬಾಳ್ಕರ್‌ ತಿಕ್ಕಾಟದ ಹಿಂದಿನ ರಹಸ್ಯ ಬಹಿರಂಗ!...

ಅನರ್ಹರಿಗಷ್ಟೇ ಲಾಭ:  ಈ ಉಪಚುನಾವಣೆ ಯಾರಿಗೂ ಬೇಡವಾದ ಚುನಾವಣೆ. ಇದರಿಂದ ಯಾರಿಗೂ ಲಾಭವಿಲ್ಲ. ಅನರ್ಹ ಶಾಸಕರಿಗಷ್ಟೇ ಲಾಭವಾಗಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬಿಟ್ಟಿರುವುದಾಗಿ ಅನರ್ಹ ಶಾಸಕರು ಹಸಿ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲಾ ಸಂತೆಯಲ್ಲಿ ಪಶುಗಳಂತೆ ಮಾರಾಟವಾದವರು. ಶಾಸಕರಾಗಿ ಆಯ್ಕೆಯಾದ ಇವರಿಗೆ ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ, ಗುಜರಾತ್‌ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಮತದಾರರು ಸೋಲಿಸಿದ್ದಾರೆ. ಇಲ್ಲಿಯೂ ಅಂಥದ್ದೇ ವಾತಾವರಣವಿದೆ. ಇದೀಗ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ನಾವೇ ಗೆಲುವು ಸಾಧಿಸಲಿದ್ದು, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.