ಛಲವಾದಿ, ದಲಿತರಲ್ಲಿ ಸಚಿವ ಎಂ.ಬಿ.ಪಾಟೀಲ್ ಕ್ಷಮೆ ಯಾಚಿಸಲಿ: ವಿಜಯೇಂದ್ರ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೂಡಲೇ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಪರಿಶಿಷ್ಟ ಸಮುದಾಯಗಳಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
 

BJP State President BY Vijayendra Slams On Minister MB Patil At Bengaluru gvd

ಬೆಂಗಳೂರು (ಆ.31): ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೂಡಲೇ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಪರಿಶಿಷ್ಟ ಸಮುದಾಯಗಳಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಛಲವಾದಿ ಅವರು ಗೌರವಾನ್ವಿತ ವಿರೋಧ ಪಕ್ಷದ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರ ಸ್ಥಾನದ ಘನತೆಯನ್ನೂ ಲೆಕ್ಕಿಸದೇ ಅವಹೇಳನಕಾರಿ ಹಾಗೂ ಕುಚೋದ್ಯದ ಪದ ಉಪಯೋಗಿಸುವ ಮೂಲಕ ಸಚಿವ ಪಾಟೀಲ್ ಅವರು ಪದ ಸಂಸ್ಕೃತಿ ಇಲ್ಲದ ತಮ್ಮ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ. 

ಆ ಮೂಲಕ ಪರಿಶಿಷ್ಟ ಸಮುದಾಯದವರೊಬ್ಬರು ಉನ್ನತ ಸ್ಥಾನ ಅಲಂಕರಿಸಿರುವುದನ್ನು ಸಹಿಸಲಾಗದ ಅಸೂಯೆ ಹೊರಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳಿರಬೇಕು, ಅದರಲ್ಲೂ ಆಡಳಿತ ಪಕ್ಷದಲ್ಲಿರುವವರು ವಿರೋಧ ಪಕ್ಷದ ಟೀಕೆಗಳನ್ನು ಸಕಾರಾತ್ಮಕ ಮನಸ್ಸಿನಿಂದ ಸ್ವೀಕರಿಸುವ ಔದಾರ್ಯ ತೋರಬೇಕು ಎಂದಿದ್ದಾರೆ. ಪರಿಶಿಷ್ಟ ಸಮುದಾಯದ ಹೋರಾಟಗಾರನೊಬ್ಬನನ್ನು ಗುರುತಿಸಿ ಬಿಜೆಪಿಯು ಛಲವಾದಿ ಅವರನ್ನು ಉನ್ನತ ಸ್ಥಾನದಲ್ಲಿ ಕುಳ್ಳಿರಿಸಿದೆ. 

ತಮ್ಮ ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಕೆಐಎಡಿಬಿಯಲ್ಲಿ ನಡೆದಿರುವ ಸಿಎ ನಿವೇಶನಗಳ ನಿಯಮಬಾಹಿರ ಹಾಗೂ ಅಕ್ರಮ ಮಂಜೂರಾತಿ ಕುರಿತು ಛಲವಾದಿಯವರು ಆರೋಪ ಮಾಡಿದ್ದಾರೆ.  ಇದನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಿ ಮಾರುತ್ತರಿಸಬೇಕಾದ ಸಚಿವರು ಪ್ರತಿಕ್ರಿಯಿಸಿರುವ ಪರಿಯನ್ನು ನೋಡಿದರೆ ಅವರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಓಲೈಸುವ ಭರದಲ್ಲಿ ತಳಮಟ್ಟದಿಂದ ಮೇಲೆದ್ದು ಬಂದು ಉನ್ನತ ಸ್ಥಾನ ಅಲಂಕರಿಸಿರುವ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನು ಅಪಮಾನಿಸುವ ಮೂಲಕ ಪರಿಶಿಷ್ಟರ ಬಗ್ಗೆ ತಮಗಿರುವ ಗೌರವ ಯಾವ ಮಟ್ಟದ್ದು ಎನ್ನುವುದನ್ನು ಪ್ರದರ್ಶಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

ಜಾತಿ ಗಣತಿ ಬೇಕಿಲ್ಲ: ರಾಮನಾಥ ಕೋವಿಂದ್‌ರನ್ನು ‘ದೇಶದ ಮೊದಲ ದಲಿತ ರಾಷ್ಟ್ರಪತಿ’ ಎಂದ ಕಂಗನಾ

ಆದರೆ ಹತಾಶೆಗೆ ಒಳಗಾದವರಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದಂತೆ. ಈ ನಿಟ್ಟಿನಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ವ್ಯಕ್ತಿತ್ವವನ್ನು ಅವಹೇಳನ ಮಾಡಿರುವುದು ಇಡೀ ಪರಿಶಿಷ್ಟ ಸಮುದಾಯವನ್ನು ಅಪಮಾನಿಸಿದಂತಾಗಿದೆ. ಅವರ ಈ ವರ್ತನೆಯನ್ನು ಖಂಡಿಸುತ್ತೇನೆ ಎಂದು ವಿಜಯೇಂದ್ರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios