ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಮಾನ್ವಿ (ಜ.20): ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಕೆಎಸ್ಎನ್ ಸಾಮಾಜಿಕ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಜಿ ಕೇಂದ್ರ ಸಚಿವರಾಗಿದ್ದ ಸುಷ್ಮಸ್ವರಾಜ್ ನೇತೃತ್ವದಲ್ಲಿ ಬಳ್ಳಾರಿಯಲ್ಲಿ 25 ವರ್ಷಗಳಿಂದ 50 ಸಾವಿರ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರು ಅದೇ ಮಾದರಿಯಲ್ಲಿ ಸಮಾರಂಭವನ್ನು ನಡೆಸಿದ್ದಾರೆ ಎಂದರು.
ದೇವದುರ್ಗದ ಮಾಜಿ ಶಾಸಕರಾಗಿದ್ದರೂ ಕೂಡ ತಮ್ಮ ಪೂರ್ವಜರ ಹುಟ್ಟುರಿನ ನೆನಪಿಗಾಗಿ ತಾಲೂಕಿನ ಜನರ ಋಣವನ್ನು ತೀರಿಸುವ ಹಾಗೂ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಉಚಿತ ಸಾಮೂಹಿಕ ಮದುವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 2028ಕ್ಕೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲಿದ್ದು ಈ ಭಾಗದಲ್ಲಿ ಮತ್ತೆ ಶಾಸಕರಾಗಿ ಕೆ.ಶಿವನಗೌಡನಾಯಕ, ಬಿ.ವಿ. ನಾಯಕ, ಬಸವರಾಜ ಧಡೆಸೂಗೂರು ಜನರಿಂದ ಆಯ್ಕೆಯಾಗಿ ಅಭಿವೃದ್ದಿ ಕಾರ್ಯಕೈಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಪ್ರಾಸಿಕ್ಯೂಷನ್‌ಗೆ ಅನುವಾದಿತ ವರದಿ?
ಉಚಿತ ಸಾಮೂಹಿಕ ವಿವಾಹದಲ್ಲಿ 111 ಸರ್ವಧರ್ಮ ಜೋಡಿಗಳು ವಿವಾಹವಾಗಿ ದಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಅಗತ್ಯ ಊಟದ ಸೌಲಭ್ಯ ಕಲ್ಪಿಸಲಾಯಿತು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರನ್ನು ಮುಖ್ಯ ಬೀದಿಯಿಂದ ಸಮಾರಂಭ ನಡೆಯುವ ವೇದಿಕೆಯವರೆಗೂ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಭಿಮಾನಿಗಳು ಜೆಸಿಬಿಗಳಿಂದ ನಾಯಕರಿಗೆ ಪುಷ್ಪ ವೃಷ್ಟಿ ಮಾಡಿದರು.
ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ: ನಗರ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಉತ್ತಮ ರಸ್ತೆ ನಿರ್ಮಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ನೀಲಕಂಠೇಶ್ವರ ವೃತ್ತದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿನ ನೀಲಕಂಠೇಶ್ವರ ಸರ್ಕಲ್‌ನಿಂದ ಕನಕದಾಸ ಸರ್ಕಲ್‌ವರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಕೆಕೆಆರ್‌ಡಿಬಿ ಯೋಜನೆಯಡಿ ₹2 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇನ್ನೂ ಕನಕದಾಸ ಸರ್ಕಲ್‌ನಿಂದ ಕಪಿಲಾ ಬಾರ್‌ವರೆಗೆ ರಸ್ತೆ ಅಭಿವೃದ್ಧಿ, ಎರಡು ಬದಿಯಲ್ಲಿ ಚರಂಡಿ ರಸ್ತೆ ನಿರ್ಮಾಣ, ಬೀದಿ ದೀಪಗಳ ಅಳವಡಿಕೆಗೆ ಕೆಕೆಆರ್‌ಡಿಬಿ ಯೋಜನೆಯ ₹ 77.30 ಲಕ್ಷ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆವ ಶಕ್ತಿಯಿಲ್ಲ: ಜನಾರ್ದನ ರೆಡ್ಡಿ
ಕಾಮಗಾರಿಯಲ್ಲಿ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಕಳಪೆಯಾಗಿರುವುದು ಗಮನಕ್ಕೆ ಬಂದರೆ ಕೂಡಲೇ ಕ್ರಮಕ್ಕೆ ಮುಂದಾಗಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ನೀಲಕಂಠೇಶ್ವರ ವೃತ್ತದಲ್ಲಿ ದೇವಸ್ಥಾನ ಇದ್ದು ಪ್ರತಿ ವರ್ಷ ಜಾತ್ರೆ ನಡೆಯುತ್ತಿದೆ. ಈ ಕಾರಣಕ್ಕೆ ರಸ್ತೆ ಅಭಿವೃದ್ಧಿ ಪಡಿಸುವಾಗ ವಿದ್ಯುತ್ ದೀಪಗಳ ಕಂಬಗಳನ್ನು ರಸ್ತೆಯ ಮಧ್ಯ ಅಳವಡಿಸದೆ ಎರಡು ಬದಿಗಳಲ್ಲಿ ಹಾಕಬೇಕೆಂದು ಸಲಹೆ ನೀಡಿದರು. ವಿಧಾನಪರಿಷತ್‌ನ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಪೌರಾಯುಕ್ತ ವಿರುಪಾಕ್ಷಮೂರ್ತಿ, ನಗರಸಭೆ ಅಧ್ಯಕ್ಷ ಮೌಲಾಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಮನೋಹರಗೌಡ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಅಜಯ್ ಬಿಚ್ಚಾಲಿ, ದುರ್ಗಪ್ಪ ದಳಪತಿ ಇತರರಿದ್ದರು.