ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಉತ್ತರ ಕನ್ನಡದ ಎಲ್ಲ ಆರೂ ಕ್ಷೇತ್ರಗಳಲ್ಲಿ ಗೆಲ್ಲುವ ಜತೆಗೆ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 

BJP will come back to Power in the State Says Vishweshwar Hegde Kageri gvd

ಶಿರಸಿ (ಏ.03): ಉತ್ತರ ಕನ್ನಡದ ಎಲ್ಲ ಆರೂ ಕ್ಷೇತ್ರಗಳಲ್ಲಿ ಗೆಲ್ಲುವ ಜತೆಗೆ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಬಹುಮತವಿರುವ ಸರ್ಕಾರ ಬಂದರೆ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದು ಜನರಿಗೆ ಗೊತ್ತಾಗಿದೆ. ಸ್ಪಷ್ಟಬಹುಮತವಿಲ್ಲದ ಸರ್ಕಾರ ಬಂದರೆ ಯಾವ ರೀತಿ ತೊಂದರೆಗಳಾಗುತ್ತದೆ ಎಂಬುದನ್ನೂ ಜನರು ನೋಡಿದ್ದಾರೆ. ಆದ್ದರಿಂದ ಮತದಾರರು ಈ ಬಾರಿ ಬಿಜೆಪಿಯನ್ನು ಸ್ಪಷ್ಟಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದರು.

ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಅಭಿವೃದ್ಧಿಗಳನ್ನು ಮಾಡುತ್ತಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಅಭಿವೃದ್ಧಿ ಕಾರ್ಯಗಳಿಗೆ ವೇಗ ಪಡೆದುಕೊಳ್ಳಲಿದೆ. ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಬಿಜೆಪಿ ದಿಗ್ವಿಜಯ ಸಾಧಿಸಲಿದೆ ಎಂದರು.

ಕಾಂಗ್ರೆಸ್‌ನಿಂದ ಮಾತ್ರ ಬಡವರ ಏಳ್ಗೆ: ಮಾಜಿ ಸಚಿವ ಮೇಟಿ

ಕ್ಷೇತ್ರದಲ್ಲಿ ರಂಗೇರಿದ ಚುನಾವಣಾ ಕಾವು: ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಮ್‌ ಆದ್ಮಿ ಪಕ್ಷದ ಹೊರತಾಗಿ ಇನ್ನಾವ ಅಭ್ಯರ್ಥಿಗಳೂ ಅಧಿಕೃತ ಘೋಷಣೆ ಆಗಿಲ್ಲ. ಎಲ್ಲ ಪಕ್ಷಗಳೂ ಹೈ ಕಮಾಂಡಿನತ್ತ ಮುಖ ಮಾಡಿ ನೋಡುತ್ತಿದ್ದು, ತಮ್ಮ ಪ್ರಾಬಲ್ಯ ಸಾಬೀತುಪಡಿಸುವ ಯತ್ನ ಜೋರಾಗಿ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮರ ನಡೆಯಬಹುದು ಎಂಬ ಸ್ಥಿತಿಯಲ್ಲಿ ಈಗ ಜೆಡಿಎಸ್‌ ಸಹ ಸ್ಪರ್ಧೆಯೊಳಗೆ ಬಂದಿದೆ. ಆಮ್‌ ಆದ್ಮಿ ಪಕ್ಷ ಹಾಗೂ ಕೆಲ ಪಕ್ಷೇತರರೂ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕ್ಷೇತ್ರದಲ್ಲಿ ಚುನಾವಣೆಯ ಕಾವು ನಿರೀಕ್ಷೆಗಿಂತ ಜೋರಾಗಿದೆ. ಶಿರಸಿ ಸಿದ್ದಾಪುರ ಕ್ಷೇತ್ರ ಕಳೆದ ಕೆಲ ಅವಧಿಯಿಂದ ಅಪ್ಪಟ ಬಿಜೆಪಿ ನೆಲವಾಗಿ ಬದಲಾವಣೆ ಆಗಿದೆ. ಬಿಜೆಪಿಯ ಪ್ರಮುಖ ನಾಯಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತವರು ಇದು. ಈ ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್‌ ಹಲವು ಬಾರಿ ಪ್ರಯತ್ನಿಸಿದೆ. 1.97 ಲಕ್ಷ ಮತದಾರರಿರುವ ಶಿರಸಿ ಸಿದ್ದಾಪುರ ಉಳಿದೆಲ್ಲ ಕ್ಷೇತ್ರಗಳಿಗಿಂತ ಭಿನ್ನ.  ಸುಮಾರು 55 ಸಾವಿರ ಬ್ರಾಹ್ಮಣ ಮತದಾರರು ಇಲ್ಲಿದ್ದರೆ 45 ಸಾವಿರದಷ್ಟುನಾಮಧಾರಿಗಳಿದ್ದಾರೆ. ಇನ್ನು ಮುಸ್ಲಿಂ, ಕ್ರಿಶ್ಚಿಯನ್‌, ಮರಾಠಾ ಮತದಾರರ ಮತಗಳೂ ನಿರ್ಣಾಯಕವಾಗಿವೆ. ಕಾಂಗ್ರೆಸ್‌ ಪಾಳೆಯಲ್ಲಿ ಟಿಕೆಟ್‌ ಯಾರಿಗೆ ಎಂಬ ಪ್ರಶ್ನೆ ಇನ್ನೂ ಬಿಡಿಸಲಾಗದ ಗಂಟಾಗೇ ಉಳಿದಿದೆ. 

ಶಿರಸಿಯಲ್ಲಿ ಈವರೆಗೆ ಸೋಲನ್ನೇ ಕಾಣದ ಕಾಗೇರಿ ಗೆಲುವಿನ ಓಟ ಮುಂದುವರಿಸ್ತಾರಾ?

ನಾಮಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿರುವುದರಿಂದ ಈ ಸಮುದಾಯದ ಪ್ರಮುಖ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್‌ ಎಂಬ ಮಾತೂ ಕೇಳಿಬರುತ್ತಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಗೇರಿ ಅವರ ವಿರುದ್ಧ ಭೀಮಣ್ಣ ಸೋತಿದ್ದರಿಂದ ಬ್ರಾಹ್ಮಣ ಮತಗಳನ್ನು ಒಡೆಯುವ ತಂತ್ರಗಾರಿಕೆ ಕಾಂಗ್ರೆಸ್‌ ಮಾಡಲಿದೆ ಎನ್ನಲಾಗುತ್ತಿದೆ. ಈ ಸಮುದಾಯಕ್ಕೆ ಸೇರಿದ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಹೆಸರು ಪ್ರಧಾನವಾಗಿ ಚಾಲ್ತಿಯಲ್ಲಿದೆ. ಬಿಜೆಪಿ ಪಕ್ಷದಲ್ಲಿ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್‌ ನಿಶ್ಚಿತ ಎಂಬ ವಾತಾವರಣವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಎರಡು ಬಾರಿ ಬಂದಾಗಲೂ ಕಾಗೇರಿಯವರ ಹೆಸರೇ ಹೇಳಿಹೋಗಿದ್ದಾರೆ. ಪಕ್ಷದ ಪ್ರಮುಖ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ತಾನೂ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರಾದರೂ ಇತ್ತೀಚಿನ ದಿನಗಳಲ್ಲಿ ಅವರು ಮುನ್ನೆಲೆಗೆ ಬಂದಿಲ್ಲ.

Latest Videos
Follow Us:
Download App:
  • android
  • ios