ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ ಬಿಜೆಪಿ 28 ಸ್ಥಾನದಲ್ಲೂ ಗೆಲುವು, ಸದಾನಂದಗೌಡ
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅನೀರಿಕ್ಷಿತ ಹಿನ್ನಡೆಯಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಚುನಾವಣೆ. ನರೇಂದ್ರ ಮೋದಿ ನೇತೃತ್ವದ ಒಂಬತ್ತುವರೆ ವರ್ಷದ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಅವರಿಂದ ಅಭಿವೃದ್ಧಿಗೆ ಅರ್ಥ ಬಂದಿದೆ: ಸಂಸದ ಡಿ.ವಿ. ಸದಾನಂದಗೌಡ
ಸುಬ್ರಹ್ಮಣ್ಯ(ನ.04): ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್.ಡಿ.ಎ. 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೀಗ ಜೆಡಿಎಸ್ ಕೂಡ ಎನ್.ಡಿ.ಎ. ಜೊತೆಯಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28ರಲ್ಲಿ 28 ಸ್ಥಾನಗಳನ್ನು ಎನ್.ಡಿ.ಎ. ಗೆದ್ದುಕೊಳ್ಳುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡದನ್ನು ಬಡ್ಡಿ ಸಮೇತ ಪಡೆದುಕೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.
ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅನೀರಿಕ್ಷಿತ ಹಿನ್ನಡೆಯಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಚುನಾವಣೆ. ನರೇಂದ್ರ ಮೋದಿ ನೇತೃತ್ವದ ಒಂಬತ್ತುವರೆ ವರ್ಷದ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಅವರಿಂದ ಅಭಿವೃದ್ಧಿಗೆ ಅರ್ಥ ಬಂದಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಮಾಡಲು ಸರ್ಕಾರ ಹಣ ಕೊಡ್ತಿಲ್ಲ: ಕಾಂಗ್ರೆಸ್ ವಿರುದ್ದ ಶಾಸಕ ವೇದವ್ಯಾಸ ಕಾಮತ್ ಕಿಡಿ!
* ಬಿಜೆಪಿ ಎಲ್ಲವನ್ನೂ ನೀಡಿದೆ:
ಬಿಜೆಪಿ ಪಕ್ಷ ನನಗೆ ಎಲ್ಲವನ್ನು ನೀಡಿದೆ. ಎಂಎಲ್ಎ, ಎಂಪಿ, ಎಂಎಲ್ಸಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ, ರಾಜ್ಯ, ರಾಷ್ಟ್ರೀಯ ಹುದ್ದೆಗಳನ್ನು ನೀಡಿದೆ. ಇನ್ನು ನಾನು ಏನಾದರೂ ಪಕ್ಷಕ್ಕೆ ನೀಡುವುದು ಇರುವುದು. ಆದ್ದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
* ರಾಜ್ಯ ಕಾಂಗ್ರೆಸ್ ಬಾಳ್ವಿಕೆ ಕಡಿಮೆ:
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಆಂತರಿಕ ಕಚ್ಚಾಟ ಆರಂಭಗೊಂಡಿದೆ. ಪಕ್ಷದ ಶಾಸಕರು, ಸಚಿವರೇ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮನೆಯೊಂದು ನೂರು ಬಾಗಿಲಿನಂತೆ ಇದೆ ಎಂದ ಅವರು ರಾಜ್ಯದ ಜನರೇ ರಾಜ್ಯದ ಕಾಂಗ್ರೆಸ್ ಸರ್ಕಾರ ಹೆಚ್ಚು ಸಮಯ ಬಾಳ್ವಿಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಎಂದರು.
* ಬಿಜೆಪಿಗೆ ಹಿನ್ನಡೆಯಿಲ್ಲ;
ದ.ಕ.ದಲ್ಲಿ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ಮಾಡುವ ಸಾಧ್ಯತೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, ನಾನು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.
50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ
* ಅಡಕೆ ಬೆಳೆಗಾರ ಹಿಂದೆ ಸದಾ ನಾನಿದ್ದೇನೆ;
ಅಡಕೆ ಬೆಳೆಗಾರರ ಬಗ್ಗೆ ನಾನು ತಿಳಿದವನು. ಅಡಕೆ ಬೆಳೆಗಾರರ ಹಿತ ಕಾಯಲು ನಾನು ಸದಾ ಬದ್ಧನಾಗಿದ್ದೇನೆ ಹಾಗೂ ಈವರೆಗೂ ಅದನ್ನು ಮಾಡಿದ್ದೇನೆ. ಅಡಕೆ ಬೆಲೆ ಕುಸಿತ, ಕಳ್ಳ ಸಾಗಾಟ ತಡೆಗೆ ಪೂರಕ ಕ್ರಮಕೈಗೊಂಡಿದ್ದೇನೆ. ಅಡಕೆ ಹಳದಿ ರೋಗಕ್ಕೆ ನಮ್ಮ ಸರ್ಕಾರ 25 ಕೋಟಿ ರು. ಅನುದಾನ ಇರಿಸಿ, ಸಂಶೋಧನಾ ಕೇಂದ್ರಕ್ಕೆ ಮುಂದಾಗಿತ್ತು. ರೋಗ ಬಾರದ ತಳಿ ಅಭಿವೃದ್ಧಿ, ಇತರೆ ಪೂರಕ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಳ್ಳುವ ಮೂಲಕ ಅಡಕೆ ಬೆಳೆಗಾರರ ಜೊತೆ ಕೈಜೋಡಿಸಿದ್ದೇವೆ ಎಂದರು.
* ಸೇವೆ ಸಮರ್ಪಣೆ:
ಡಿ.ವಿ.ಸದಾನಂದ ಗೌಡ ಅವರು ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್, ಅವರ ಪತ್ನಿ ಹಾಗೂ ಮನೆಯವರು ಜೊತೆಗಿದ್ದರು. ದೇವಳದ ವತಿಯಿಂದ ಡಿ.ವಿ.ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ಭಟ್, ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.