ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ, ಬೆಳಗಾವಿಯ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ, ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ಹಾಗೂ ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳವಾಗಿರುವ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಆವತಿಯಿಂದ ಈ ಯಾತ್ರೆ ಆರಂಭವಾಗಲಿದ್ದು, ಬಸ್‌ಗಳಲ್ಲಿ ಒಟ್ಟು 8000 ಕಿ.ಮೀ. ಕ್ರಮಿಸಲಿವೆ.

ಬೆಂಗಳೂರು(ಫೆ.26): ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಆರಂಭಿಸುವ ಉದ್ದೇಶದಿಂದ ರಾಜ್ಯದ ನಾಲ್ಕೂ ದಿಕ್ಕಿನಿಂದ ಆಡಳಿತಾರೂಢ ಬಿಜೆಪಿಯ ನಾಲ್ಕು ರಥಗಳ ‘ವಿಜಯ ಸಂಕಲ್ಪ ಯಾತ್ರೆ’ಗೆ ಮಾ.1ರಿಂದ ಚಾಲನೆ ಸಿಗಲಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ, ಬೆಳಗಾವಿಯ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ, ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ಹಾಗೂ ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳವಾಗಿರುವ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಆವತಿಯಿಂದ ಈ ಯಾತ್ರೆ ಆರಂಭವಾಗಲಿದ್ದು, ಬಸ್‌ಗಳಲ್ಲಿ ಒಟ್ಟು 8000 ಕಿ.ಮೀ. ಕ್ರಮಿಸಲಿವೆ.

ಮೊದಲ ಯಾತ್ರೆಗೆ ಮಾ.1ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಎರಡನೇ ಯಾತ್ರೆಗೆ ಮಾ.2ರಂದು ನಂದಗಡದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚಾಲನೆ ನೀಡಲಿದ್ದಾರೆ. ಮೂರನೇ ಯಾತ್ರೆಗೆ ಮಾ.3ರಂದು ಬೆಳಗ್ಗೆ ಬಸವಕಲ್ಯಾಣದಲ್ಲಿ ಮತ್ತು ನಾಲ್ಕನೇ ಯಾತ್ರೆಗೆ ಅದೇ ದಿನ ಸಂಜೆ ಕೆಂಪೇಗೌಡರ ಜನ್ಮಸ್ಥಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಲಿದ್ದಾರೆ.

ಜಿಂದಾಲ್‌ಗೆ ವಿಐಎಸ್‌ಎಲ್‌ ಮಾರಲು ಬಿಜೆಪಿ ಉನ್ನಾ​ರ: ಎಚ್‌ ವಿಶ್ವನಾಥ

ಯಾತ್ರೆಯ ಸಂಚಾಲಕರೂ ಆಗಿರುವ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮತ್ತು ಸಹಸಂಚಾಲಕರೂ ಆಗಿರುವ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.

ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ ಮತ್ತು ಆರ್‌.ಅಶೋಕ್‌ ನೇತೃತ್ವದ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಸದಸ್ಯರು ಬಸ್‌ಗಳಲ್ಲಿ ಒಟ್ಟಾಗಿ ತೆರಳಲಿದ್ದಾರೆ. ಮಾ.25ಕ್ಕೆ ಈ ನಾಲ್ಕೂ ಯಾತ್ರೆಗಳು ದಾವಣಗೆರೆಯಲ್ಲಿ ಸಮಾರೋಪಗೊಳ್ಳಲಿದ್ದು, ಈ ಸಮಾರೋಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ… ಸೇರಿದಂತೆ ಹಲವು ನಾಯಕರು ಯಾತ್ರೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

50ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲಾ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳ ಸಂಪರ್ಕ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು ಎಂಟು ಸಾವಿರ ಕಿ.ಮೀ. ಯಾತ್ರೆ ಸಂಚರಿಸಲಿದ್ದು, ಯಾತ್ರೆಯುದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರಾರ‍ಯಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್‌ ಶೋಗಳು ಸಹ ನಡೆಯಲಿವೆ. ಈ ಮೂಲಕ ನಾಡಿನ ನಾಲ್ಕು ಕೋಟಿ ಜನರನ್ನು ಸಂಪರ್ಕಿಸಲಾಗುವುದು. ಮಾ.25ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೆಗಾ ರಾರ‍ಯಲಿ ನಡೆಯಲಿದೆ ಎಂದು ತಿಳಿಸಿದರು.

ಹಾಸನ ಟಿಕೆಟ್‌ ಹಂಚಿಕೆ ತೀರ್ಮಾನ ಸಭೆ ಕ್ಯಾನ್ಸಲ್‌: ಜೆಡಿಎಸ್‌ ಟಿಕೆಟ್‌ ವಿವಾದ ಕ್ಷಣಕ್ಕೊಂದು ಟ್ವಿಸ್ಟ್‌

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪುರ, ಜಿಲ್ಲಾ ಪ್ರಭಾರಿ ಮತ್ತು ಯಾತ್ರೆಯ ಸಹ ಸಂಚಾಲಕ ಸಚ್ಚಿದಾನಂದಮೂರ್ತಿ ಅವರು ಉಪಸ್ಥಿತರಿದ್ದರು.

ಯಾತ್ರೆ 1: ಮಾ.1ಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿ ಜೆ.ಪಿ.ನಡ್ಡಾ ಚಾಲನೆ
ಜಗದೀಶ್‌ ಶೆಟ್ಟರ್‌ ನೇತೃತ್ವ
ಯಾತ್ರೆ 2: ಮಾ.2ಕ್ಕೆ ನಂದಗಡದಲ್ಲಿ ರಾಜನಾಥ್‌ ಸಿಂಗ್‌ರಿಂದ ಚಾಲನೆ
ಕೆ.ಎಸ್‌.ಈಶ್ವರಪ್ಪ ನೇತೃತ್ವ
ಯಾತ್ರೆ 3: ಮಾ.3ಕ್ಕೆ ಬಸವಕಲ್ಯಾಣಕ್ಕೆ ಅಮಿತ್‌ ಶಾ ಅವರಿಂದ ಚಾಲನೆ
ಗೋವಿಂದ ಕಾರಜೋಳ ನೇತೃತ್ವ
ಯಾತ್ರೆ 4: ಮಾ.3ಕ್ಕೆ ಕೆಂಪೇಗೌಡರ ಜನ್ಮಸ್ಥಳದಲ್ಲಿ ಅಮಿತ್‌ ಶಾ ಚಾಲನೆ
ಆರ್‌.ಅಶೋಕ್‌ ನೇತೃತ್ವ