ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ.
ಬೆಂಗಳೂರು(ಫೆ.07): ಅನುದಾನ ನೀಡಿಕೆಯಲ್ಲಿ ತಾರತಮ್ಯ ನೀಡಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಅತ್ತ ದೆಹಲಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದರೆ, ಇತ್ತ ಬೆಂಗಳೂರಿನಲ್ಲಿ ಪ್ರತಿಪಕ್ಷ ಬಿಜೆಪಿಯು ಬರ ಪರಿಹಾರ ಕ್ರಮಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ.
ಕರ್ನಾಟಕಕ್ಕೆ ಅನುದಾನ ತಾರತಮ್ಯ: ಕೃಷ್ಣ ಬೈರೆ ಗೌಡ ಅಸಮಾಧಾನ
ಪ್ರತಿಭಟನೆ ನಡೆಸುವ ಸಂಬಂಧ ಕಳೆದ ಶುಕ್ರವಾರ ನಡೆದ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ರಾಜ್ಯ ಸರ್ಕಾರವೇ 222ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಿಸಿದ್ದರೂ ಕುಡಿಯುವ ನೀರು ಸೇರಿದಂತೆ ಬರ ಪರಿಹಾರದ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿಯು ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
