ಇಂದಿನಿಂದ ‘ಬಿಜೆಪಿ ವಿಜಯ ಸಂಕಲ್ಪ’ ಅಭಿಯಾನ: ವಿಜಯಪುರದ ಸಿಂದಗಿಯಲ್ಲಿ ಜೆ.ಪಿ.ನಡ್ಡಾ ಚಾಲನೆ
ಮುಂಬರುವ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ಶನಿವಾರದಿಂದ ಜನವರಿ 29ರವರೆಗೆ ‘ವಿಜಯ ಸಂಕಲ್ಪ ಅಭಿಯಾನ’ ಹಮ್ಮಿಕೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ವಿಜಯಪುರದ ಸಿಂಧಗಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ವಿಜಯಪುರ (ಜ.21): ಮುಂಬರುವ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ಶನಿವಾರದಿಂದ ಜನವರಿ 29ರವರೆಗೆ ‘ವಿಜಯ ಸಂಕಲ್ಪ ಅಭಿಯಾನ’ ಹಮ್ಮಿಕೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ವಿಜಯಪುರದ ಸಿಂಧಗಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ರಾಜ್ಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಸವರಾಜ, ಈ ಬಗ್ಗೆ ಮಾಹಿತಿ ನೀಡಿದರು. ಅಭಿಯಾನದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. ಎರಡು ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಾಗುವುದು. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಾಗುವುದು.
ಸಚಿವನಾಗುವ ಆಸೆ ಕೈಬಿಟ್ಟಿದ್ದೇನೆ, ಪಕ್ಷಕ್ಕೆ ಸಮಸ್ಯೆ ಸೃಷ್ಟಿಸಲ್ಲ: ಕೆ.ಎಸ್.ಈಶ್ವರಪ್ಪ
ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆದುದ್ದನ್ನು ತಿಳಿಸಲಾಗುವುದು. ವಾಹನಗಳ ಮೇಲೆ ಸ್ಟಿಕರ್ ಅಂಟಿಸುವ ಕೆಲಸವೂ ನಡೆಯಲಿದೆ. ಕನಿಷ್ಠ ಮೂರು ಕೋಟಿ ಸ್ಟಿಕರ್‌ಗಳನ್ನು ಹಂಚಲಾಗುವುದು. ಕಿಸಾನ್ ಸಮ್ಮಾನ್, ಉಜ್ವಲ, ಮುದ್ರಾ ಸೇರಿದಂತೆ ಸರ್ಕಾರ ಜಾರಿಗೊಳಿಸಿದ ಹತ್ತಾರು ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಏಕಕಾಲದಲ್ಲಿ ಎಲ್ಲ ಬೂತ್‌ಗಳಲ್ಲಿ, ಮಂಡಲಗಳಲ್ಲಿ ಅಭಿಯಾನ ಮುಂದುವರಿಯಲಿದೆ ಎಂದು ತಿಳಿಸಿದರು.
ಮಿಸ್ಡ್ ಕಾಲ್ ಅಭಿಯಾನ: ಇದೇ ವೇಳೆ, ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವೂ ನಡೆಯಲಿದೆ. ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸಮಾಜದ ಸಮಸ್ತರನ್ನು ಪಕ್ಷದ ಜೊತೆ ಸೇರ್ಪಡೆ ಮಾಡಿ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರನ್ನೂ ಜೊತೆಗೂಡಿಸಲಾಗುವುದು. ಬಿಜೆಪಿ ನೇತೃತ್ವದ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯಾದ್ಯಂತ ಅಭಿಯಾನ: ಮಾಜಿ ಸಿಎಂ ಯಡಿಯೂರಪ್ಪ ಅವರು ಜೆ.ಪಿ.ನಡ್ಡಾ ಜೊತೆ ವಿಜಯಪುರ, ನಾಗಠಾಣ ಹಾಗೂ ಸಿಂದಗಿಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ನಳಿನ್ ಕುಮಾರ್ ಕಟೀಲ್ ಅವರು ಬೆಂಗಳೂರಿನ ಜಯನಗರ, ಬಿಟಿಎಂ ಲೇಔಟ್, ಸಿಎಂ ಬೊಮ್ಮಾಯಿ ತುಮಕೂರಿನಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ದಾವಣಗೆರೆಯಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಚಿಕ್ಕಬಳ್ಳಾಪುರದಲ್ಲಿ, ಕರ್ನಾಟಕ ಸಹ ಉಸ್ತುವಾರಿ ಡಿ.ಕೆ.ಅರುಣಾ ಬೆಂಗಳೂರಿನ ಮಹಾಲಕ್ಷ್ಮೇ ಲೇಔಟ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಸಚಿವರು, ಸಂಸದರು, ಶಾಸಕರು, ಪರಿಷತ್ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ದೇಶದ ರಾಜಕೀಯ ಸಂಸ್ಕೃತಿಯನ್ನೇ ಬದಲಿಸಿದ ಪ್ರಧಾನಿ ಮೋದಿ: ಜೆ.ಪಿ.ನಡ್ಡಾ
ಏನಿದು ಅಭಿಯಾನ?
- ಕೇಂದ್ರ, ರಾಜ್ಯ ಸರ್ಕಾರಗಳ ಕೊಡುಗೆಯನ್ನು ಜನರಿಗೆ ತಿಳಿಸುವುದು
- ಕರಪತ್ರ ಮುದ್ರಿಸಿ 2 ಕೋಟಿ ಮತದಾರರ ಮನೆಗೆ ತಲುಪಿಸುವುದು
- ಸರ್ಕಾರದ 1 ಕೋಟಿ ಫಲಾನುಭವಿ ಕುಟುಂಬಗಳನ್ನು ಸಂಪರ್ಕಿಸುವುದು
- ಬಿಜೆಪಿ ಸರ್ಕಾರದಿಂದಾದ ಸಬಲೀಕರಣ ಬಗ್ಗೆ ಮಾಹಿತಿ ನೀಡುವುದು