ಕಾಂಗ್ರೆಸ್‌ ಪಕ್ಷ ರೈತರ ಕಣ್ಣೀರು ಒರೆಸಲಿಲ್ಲ, 50-60 ವರ್ಷ ಅಡಳಿತ ಮಾಡಿದ ಕಾಂಗ್ರೆಸ್‌ ಭ್ರಷ್ಟಾಚಾರ ಮತ್ತು ಕುಟುಂಬದ ಆಡಳಿತ ನಡೆಸಿದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. 

ತರೀಕೆರೆ (ಮಾ.05): ಕಾಂಗ್ರೆಸ್‌ ಪಕ್ಷ ರೈತರ ಕಣ್ಣೀರು ಒರೆಸಲಿಲ್ಲ, 50-60 ವರ್ಷ ಅಡಳಿತ ಮಾಡಿದ ಕಾಂಗ್ರೆಸ್‌ ಭ್ರಷ್ಟಾಚಾರ ಮತ್ತು ಕುಟುಂಬದ ಆಡಳಿತ ನಡೆಸಿದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಶನಿವಾರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲಾ ಮೋರ್ಚಾದ ರೈತೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳಾಗಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ರೈತರಿಗೆ ಪ್ರಪ್ರಥವಾಗಿ ಪ್ರತ್ಯೇಕ ಬಜೆಟ್‌ ಮಂಡಿಸಿದರು. 

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ರಸಗೊಬ್ಬರಗಳ ಬೆಲೆ ಗಣನೀಯವಾಗಿ ಇಳಿಸಿದೆ. ಕಾಂಗ್ರೆಸ್‌ ಸ್ವಾರ್ಥಕ್ಕಾಗಿ ಅಡಳಿತ ನಡೆಸಿ, ಹಗರಣಗಳ ಮೇಲೆ ಹಗರಣ ಮಾಡಿತು. ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರ ರಹಿತ ಅಡಳಿತ ನಡೆಯುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತ ಎಂದರೆ ಭ್ರಷ್ಟಾಚಾರ ಮುಕ್ತವಾಗಬೇಕು ಎಂದಷ್ಟೆಎಂದರು. ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾದಯಾತ್ರೆ, ಸೈಕಲ್‌ ಜಾಥಾ ಇತ್ಯಾದಿಗಳ ಮೂಲಕ ಹಳ್ಳಿ ಹಳ್ಳಿಗೆ ಸಂಚರಿಸಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದಾರೆ. 

ರಾಜಕಾರಣ ಮಾಡುವುದು ಮೋಜಿಗಾಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಇದರಲ್ಲಿ ಯಡಿಯೂರಪ್ಪ, ಕಾರ್ಯಕರ್ತರ ಪರಿಶ್ರಮ ಇದೆ. ಯಡಿಯೂರಪ್ಪ ಅವರು ಸವಾಲಾಗಿ ಸ್ವೀಕರಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರಿಗೂ ಮತ್ತು ತರೀಕೆರೆಗೂ ಅವಿನಾಭಾವ ಸಂಬಂಧವಿದೆ. ಹಾಗೇಯೆ ಯಡಿಯೂರಪ್ಪ ಹಾಗೂ ಶಾಸಕ ಡಿ.ಎಸ್‌.ಸುರೇಶ್‌ ಅವರಿಗೂ ಅವಿನಾಭಾವ ಸಂಬಂಧ ಇದೆ. ಎಲ್ಲಾ ಮೋರ್ಚಾ ಸಮಾವೇಶಗಳ ಮೂಲಕ ಫಲಾನುಭವಿಗಳನ್ನು ಗುರುತಿಸಿ ಕೇಂದ್ರ,ರಾಜ್ಯ ಸರ್ಕಾರಗಳ ಯೋಜನೆ ತಲುಪಿಸಿ, ಮತ್ತೆ ರಾಜ್ಯದಲ್ಲಿ ಹಾಗು 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಶಾಸಕ ಡಿ.ಎಸ್‌.ಸುರೇಶ್‌ ಮಾತನಾಡಿ ಇಡೀ ರಾಜ್ಯದಲ್ಲಿ ರೈತ ಮೋರ್ಚಾ ಇತ್ಯಾದಿ ವಿವಿಧ ಮೋರ್ಚಾಗಳ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ತರೀಕೆರೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ರೈತೋತ್ಸವ ನಡೆಯುತ್ತಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರಿಗೆ ಕೊಟ್ಟಂತ ಯೋಜನೆಗಳನ್ನು ತಿಳಿಸಲು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇದ್ರ ಅವರು ಆಗಮಿಸಿದ್ದಾರೆ. ಸಾವಯವ ಕೃಷಿಗೆ ಹೆಚ್ಚು ಒತು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಬಿಎಸ್‌ವೈ ಸಿಎಂ ಆಗಿದ್ದಾಗ ಉಬ್ರಾಣಿ ಅಮೃತಾ ಪುರ ನೀರಾವರಿ ಯೋಜನೆಗೆ ಅನುದಾನ ನೀಡಿದ್ದರು. ಭದ್ರೆಯಿಂದ ತಾಲೂಕಿನ 79 ಕೆರೆಗಳಿಗೆ ಶೀಘ್ರ ನೀರು ತುಂಬಿಸಲಾಗುವುದು. ಭದ್ರಾ ಉಪ ಕಾಲುವೆಯಿಂದ 195 ಕೆರೆಗಳಿಗೆ ನೀರು ತುಂಬಿಸಲು 280 ಕೋಟಿ ರು.ನೀಡಿದ್ದಾರೆ. ಶಿವನಿ ಹೋಬಳಿ 16 ಕೆರೆಗಳಿಗೆ ಶೀಘ್ರದಲ್ಲೇ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಲಜೀವನ್‌ ಯೋಜನೆಯಡಿ ತರೀಕೆರೆ,ಅಜ್ಜಂಪುರ ತಾಲೂಕಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ, ತರೀಕೆರೆ ಪಟ್ಟಣದಲ್ಲಿ ಮಾ.12 ರಂದು ತಾಯಿ ಮಗು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಗುವುದು ಎಂದ ಅವರು ತರೀಕೆರೆ ಬಗ್ಗೆ ಏನೂ ಗೊತ್ತಿಲ್ಲದವರು ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು. ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಆರ್‌.ಆನಂದಪ್ಪ ಮಾತನಾಡಿ ಕೇಂದ್ರ,ರಾಜ್ಯ ಸರ್ಕಾರಗಳು ರೈತರಿಗೆ ತಂದಿರುವ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಮತಗಳನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು.

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಡಾ.ನವೀನ್‌, ಕಡೂರು ಶಾಸಕ ಬೆಳ್ಳಿ ಪ್ರಕಾಶ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಟಿ.ಎಲ್‌.ರಮೇಶ್‌,ಡಾ.ಆರ್‌.ದೇವಾನಂದ್‌, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಮುಖಂಡರಾದ ಎಸ್‌.ಬಿ.ಆನಂದಪ್ಪ, ಜಿ.ವಸಂತಕುಮಾರ್‌, ಜಿಪಂ ಮಾಜಿ ಅಧ್ಯಕ್ಷೆ ಚೈತ್ರಶ್ರೀ, ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್‌, ರೈತಮೋರ್ಚಾ ತಾಲೂಕು ಅಧ್ಯಕ್ಷ ಸುಧಾಕರ್‌, ರಾಜಶೇಖರ್‌, ಮನೋಜ್‌ಕುಮಾರ್‌, ಪುರಸಭೆ ಸದಸ್ಯರು, ಕಾರ್ಯಕರ್ತರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.