ಕರ್ನಾಟಕ ವಿಧಾನಸಭೆ ಚುನಾವಣೆ 2023: ಬಲ ಹೆಚ್ಚಿಸಿಕೊಳ್ಳುವತ್ತ ಬಿಜೆಪಿ ಚಿತ್ತ..!
ಕರ್ನಾಟಕದಲ್ಲಿ 150ರ ಮಿಷನ್ ಗುರಿಯನ್ನಿಟ್ಟುಕೊಂಡು ಪ್ರಚಾರಕ್ಕಿಳಿದಿರುವ ಬಿಜೆಪಿ, ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ವಿಭಾಗದಲ್ಲಿ ಶಾಸಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ(ಡಿ.10): ಗುಜರಾತ್‌ನಲ್ಲಿ ಏಳನೆಯ ಬಾರಿ ಗೆಲುವು ಕಂಡಿರುವ ಬಿಜೆಪಿ ಇದೀಗ ಕರ್ನಾಟಕದಲ್ಲೂ ಮತ್ತೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. ಅದಕ್ಕಾಗಿ ಬಿಜೆಪಿ ಶಕ್ತಿ ಕೇಂದ್ರ ಎನಿಸಿರುವ ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಶಕ್ತಿ ಹೆಚ್ಚಿಸಿಕೊಳ್ಳಲು ಈಗಿನಿಂದಲೇ ಕಸರತ್ತು ಆರಂಭಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಕೂಡ ಕೊಂಚ ಸಂಘಟನೆಯಾಗಿದೆ. ಬಿಜೆಪಿಗೆ ಠಕ್ಕರ್ ಕೊಡಲು ಅದು ಕೂಡ ತಂತ್ರಗಾರಿಕೆ ನಡೆಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಬಿಜೆಪಿಯೂ ಪೇಜ್ ಪ್ರಮುಖ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳ ಮೂಲಕ ಪ್ರತಿತಂತ್ರಗಳನ್ನು ಹೆಣೆಯುತ್ತಿದೆ. ಈ ಮೂಲಕ ಬಿಜೆಪಿ ತನ್ನ ಶಾಸಕರ ಸಂಖ್ಯೆಯನ್ನು ವೃದ್ಧಿಸಿಕೊಳ್ಳಲು ತಯಾರಿ ನಡೆಸಿದೆ.
ಉತ್ತರ ಕರ್ನಾಟಕ ಟಾರ್ಗೆಟ್:
ಕರ್ನಾಟಕದಲ್ಲಿ 150ರ ಮಿಷನ್ ಗುರಿಯನ್ನಿಟ್ಟುಕೊಂಡು ಪ್ರಚಾರಕ್ಕಿಳಿದಿರುವ ಬಿಜೆಪಿ, ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ವಿಭಾಗದಲ್ಲಿ ಶಾಸಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿದೆ. ಈ ಎರಡು ವಿಭಾಗಗಳಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳು ಬರುತ್ತವೆ. ಇಲ್ಲಿನ 50 ಕ್ಷೇತ್ರಗಳ ಪೈಕಿ ಸದ್ಯ 34 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದನ್ನು ಕನಿಷ್ಠ ಪಕ್ಷ 40ಕ್ಕಾದರೂ ಏರಿಸುವ ಚಿಂತನೆಯಲ್ಲಿದೆ ಬಿಜೆಪಿ.
ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ ಸಂಘಟನೆ ಚುರುಕು..!
ಇದಕ್ಕಾಗಿ ಜನಸಂಕಲ್ಪ ಯಾತ್ರೆ, ಆಂತರಿಕವಾಗಿ ಪಕ್ಷ ಸಂಘಟನೆಗೆ ಪೇಜ್ ಪ್ರಮುಖರು, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳನ್ನಾಗಿ ರಚಿಸಿಕೊಂಡಿದೆ. ಬೂತ್ ಹಾಗೂ ಪಂಚರತ್ನ ಕಮಿಟಿ ಸೇರಿದಂತೆ ವಿವಿಧ ಕಮಿಟಿಗಳನ್ನು ರಚಿಸಿಕೊಂಡು ಅವುಗಳ ಮೂಲಕ ಪಕ್ಷವನ್ನು ಬೇರು ಮಟ್ಟದಿಂದಲೇ ಸಂಘಟಿಸುತ್ತಿದೆ.
ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ? ಅಲ್ಲಿ ಪಕ್ಷದ ಸಂಘಟನೆ ಸದ್ಯಕ್ಕೆ ಹೇಗಿದೆ? ಇನ್ನಷ್ಟುಗಟ್ಟಿಮಾಡಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಜತೆಗೆ ಕಳೆದ ಚುನಾವಣೆಯಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ? ಅಲ್ಲಿನ ಸೋಲಿಗೆ ಕಾರಣವೇನು? ಅಲ್ಲಿನ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕೆಂದರೆ ಮತ್ತೇನು ಮಾಡಬೇಕು ಎಂಬುದನ್ನು ಸಭೆಗಳಲ್ಲಿ ಚರ್ಚಿಸಿ ಅಖಾಡಕ್ಕಿಳಿಯುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡುವುದು, ಜತೆಗೆ ಯೋಜನೆಗಳ ಫಲಾನುಭವಿಗಳನ್ನು ಭೇಟಿಯಾಗಿ ಸರ್ಕಾರದ ಬಗ್ಗೆ ಅವರ ಅಭಿಪ್ರಾಯ ಪಡೆದು ಮತಗಳನ್ನು ಗಟ್ಟಿಕೊಳ್ಳುವತ್ತ ಹೆಚ್ಚು ಕೇಂದ್ರೀಕರಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿ ತಂತ್ರಗಾರಿಕೆಯೊಂದಿಗೆ ಕರ್ನಾಟಕದಲ್ಲೂ ಅಖಾಡಕ್ಕಿಳಿಯಲಿದೆ ಆಪ್..!
ರೈತ ಸಮಾವೇಶ:
ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ರೈತ ಸಮಾವೇಶ ನಡೆಸಲು ಪಕ್ಷದ ನಿರ್ಧರಿಸಿದೆ. ಜನವರಿಯಲ್ಲಿ ಈ ಸಮಾವೇಶ ನಡೆಯುವ ಸಾಧ್ಯತೆ ಇದೆ. ಅದಕ್ಕೆ 10 ಲಕ್ಷ ಜನರನ್ನು ಸೇರಿಸುವ ಇರಾದೆ ಹೊಂದಿರುವ ಬಿಜೆಪಿ, ಅದಕ್ಕಾಗಿ ಈಗಿನಿಂದಲೇ ತಯಾರಿಯನ್ನೂ ಶುರು ಹಚ್ಚಿಕೊಂಡಿದೆ. ಆದರೆ ಸಮಾವೇಶದ ದಿನಾಂಕ ಇನ್ನು ನಿಗದಿಪಡಿಸಿಲ್ಲ. ಅದನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ತಿಳಿಸಿರುವ ಪಕ್ಷದ ಮೂಲಗಳು, ರೈತ ಸಮಾವೇಶದಲ್ಲಿ ರಾಷ್ಟ್ರಮಟ್ಟದ ನಾಯಕರೊಬ್ಬರು ಭಾಗವಹಿಸಲಿದ್ದಾರೆ. ಈ ಮೂಲಕ ಈ ಭಾಗದಲ್ಲಿ ಶಕ್ತಿ ಪ್ರದರ್ಶನ ಮಾಡಲಾಗುವುದು. ಈ ರೈತ ಸಮಾವೇಶ ಖಂಡಿತವಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಗೆ ಇನ್ನಷ್ಟು ಬೂಸ್ಟ್ ನೀಡುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ಮುಖಂಡರದ್ದು.
ಸದ್ಯ ಬೆಳಗಾವಿ ಹಾಗೂ ಧಾರವಾಡ ವಿಭಾಗದ ಆರು ಜಿಲ್ಲೆಗಳ 50 ಕ್ಷೇತ್ರಗಳ ಪೈಕಿ 34ರಲ್ಲಿ ನಮ್ಮ ಶಾಸಕರಿದ್ದಾರೆ. ಶಾಸಕರ ಸಂಖ್ಯೆಯನ್ನು 40ಕ್ಕೇರಿಸಿಕೊಳ್ಳುವ ಚಿಂತನೆ ಇದೆ. ಈಗಿನಿಂದಲೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಜನವರಿಯಲ್ಲಿ ರೈತ ಸಮಾವೇಶ ನಡೆಯಲಿದೆ. ಆ ಸಮಾವೇಶ ಪಕ್ಷ ಸಂಘಟನೆಗೆ ಮತ್ತಷ್ಟುಬೂಸ್ಟ್ ನೀಡಲಿದೆ ಅಂತ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.