ಮುಖ್ಯವಾಗಿ ಉತ್ತರ ಕರ್ನಾಟಕವನ್ನು ಗುರಿ ಮಾಡಿಕೊಂಡು ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ ಆಮ್‌ ಆದ್ಮಿ ಪಕ್ಷ 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.08):  ದೆಹಲಿ, ಪಂಜಾಬ್‌ನಲ್ಲಿ ಅಧಿಕಾರ ಹಿಡಿದಿರುವ ಆಮ್‌ ಆದ್ಮಿ ಪಕ್ಷವೂ ಈ ಸಲ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲೂ ತನ್ನ ತಂತ್ರಗಾರಿಕೆ ತೋರಿ ಗೆಲ್ಲಬೇಕೆಂಬ ಹವಣಿಕೆಯಲ್ಲಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕವನ್ನು ಗುರಿ ಮಾಡಿಕೊಂಡಿರುವ ಆಪ್‌, ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಖಾತೆ ತೆರೆಯುವಲ್ಲಿ ಆಪ್‌ ಯಶಸ್ವಿಯಾಗಿಲ್ಲ. ಆದರೆ ಕೆಲವೆಡೆ ಉತ್ತಮ ಮತ ಪಡೆಯುವ ಮೂಲಕ ಕೆಲ ಅಭ್ಯರ್ಥಿಗಳ ಸೋಲಿಗೆ ಸಣ್ಣ ಪ್ರಮಾಣದ ಕಾರಣವಾಗಿತ್ತು. ಅಲ್ಲಿಂದ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿರುವ ಆಪ್‌ ಕಾರ್ಯಕರ್ತರು ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಹಾಗೂ ಪಂಜಾಬ್‌ ಮಾದರಿಯ ತಂತ್ರಗಾರಿಕೆ ಅನುಸರಿಸಿ ಕೆಲವೊಂದಿಷ್ಟುಕ್ಷೇತ್ರಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬ ಇರಾದೆ ಹೊಂದಿದ್ದಾರೆ. ಅದಕ್ಕಾಗಿ ಈಗಿನಿಂದಲೇ ತಯಾರಿಯನ್ನೂ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಕಣ ಸಿದ್ಧಗೊಳಿಸುತ್ತಿದೆ ಎಐಎಂಐಎಂ!

ಹುಬ್ಬಳ್ಳಿ-ಧಾರವಾಡ ಕೇಂದ್ರವನ್ನಾಗಿಟ್ಟುಕೊಂಡು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಪಕ್ಷ ಸಂಘಟಿಸುವ ಕೆಲಸ ನಡೆಯುತ್ತಿದೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ನಾಲ್ಕಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಣಕ್ಕಿಳಿಯಬೇಕೆಂಬ ಇರಾದೆ ಆಪ್‌ದ್ದು. ಇದಕ್ಕಾಗಿ ಈಗಿನಿಂದಲೇ ಕೆಲಸ ಕೂಡ ಶುರು ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌, ಪೂರ್ವ, ಗ್ರಾಮೀಣ, ಪಶ್ಚಿಮ ಕ್ಷೇತ್ರಗಳನ್ನು ಟಾರ್ಗೆಟ್‌ ಮಾಡಿಟ್ಟುಕೊಳ್ಳಲಾಗಿದೆ.

ಚುನಾವಣೆ ತಯಾರಿ:

ನಾಲ್ಕು ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶ, ಗ್ರಾಮ ಸಂಪರ್ಕ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆಮ್‌ ಆದ್ಮಿ ಪಕ್ಷ ದೆಹಲಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಕೆಲಸ ಮಾಡಲಿದೆ. ಬಸ್‌, ನೀರು, ವಿದ್ಯುತ್‌, ಶಿಕ್ಷಣ, ಆಸ್ಪತ್ರೆ ಹೀಗೆ ದೆಹಲಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಅದರಂತೆ ಇಲ್ಲೂ ಉಚಿತವಾಗಿ ನೀಡುತ್ತೇವೆ. ನಮಗೆ ಒಂದು ಅವಕಾಶ ಕಲ್ಪಿಸಿಕೊಡಿ ಎಂಬ ಭರವಸೆ ಮತದಾರರಿಗೆ ನೀಡಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಇತರೆ ರಾಜಕೀಯ ಪಕ್ಷಗಳಿಗೂ ಆಮ್‌ ಆದ್ಮಿ ಪಕ್ಷಕ್ಕೂ ಏನು ವ್ಯತ್ಯಾಸ ಎಂಬುದನ್ನು ತಿಳಿಸುತ್ತಾ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ ಆಪ್‌ ಮುಖಂಡರು.

ಕರ್ನಾಟಕಕ್ಕೆ ದೆಹಲಿ ಶಾಸಕರೊಬ್ಬರನ್ನು ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಉತ್ತರ ಕರ್ನಾಟಕಕ್ಕೆ ಗೋವಾದ ಉಪೇಂದ್ರ ಗಾಂವಕರ್‌ ಉಸ್ತುವಾರಿಯಾಗಿದ್ದಾರೆ. ಇವರ ನೇತೃತ್ವದಲ್ಲಿ ಕೆಲಸಗಳು ನಡೆಯುತ್ತಿವೆ. ಆಕಾಂಕ್ಷಿಗಳೊಂದಿಗೆ ಒಂದು ಬಾರಿ ಸಭೆಯನ್ನೂ ನಡೆಸಿರುವುದುಂಟು. ಸದ್ಯ ಗುಜರಾತ್‌ ಹಾಗೂ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಆಪ್‌ ಮುಖಂಡರು ಬ್ಯುಜಿ ಇದ್ದಾರೆ. ಗುಜರಾತ್‌ ಚುನಾವಣೆ ಇದೀಗ ಮುಗಿದಿದೆ. ಡಿ. 8 ಅಥವಾ ಡಿ. 10ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಯ ಚಟುವಟಿಕೆಗಳು ಬಿರುಸುಗೊಳ್ಳಲಿವೆ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಕಾಸ ಸೊಪ್ಪಿನ ಹಾಗೂ ಪೂರ್ವ ಕ್ಷೇತ್ರದಲ್ಲಿ ಬಸವರಾಜ ತೇರದಾಳ ಸ್ಪರ್ಧಿಸಲಿದ್ದಾರೆ. ಈಗಾಗಲೇ ಪ್ರಚಾರವನ್ನೂ ಈ ಇಬ್ಬರು ಮಾಡಿರುವುದುಂಟು.

ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಡಿಲೀಟ್‌: ದೀಪಕ್ ಚಿಂಚೋರೆ ಆರೋಪ

ಒಟ್ಟಿನಲ್ಲಿ ಈ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವೂ ದೆಹಲಿ ತಂತ್ರಗಾರಿಕೆಯೊಂದಿಗೆ ಅಖಾಡಕ್ಕಿಳಿಯುವುದಂತೂ ಸತ್ಯ. ಅದಕ್ಕಾಗಿ ಭರ್ಜರಿ ತಯಾರಿ ನಡೆದಿರುವುದಂತೂ ಸತ್ಯ

ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವೂ ಈ ಸಲ ಸ್ಪರ್ಧಿಸಲಿದೆ. ಇದಕ್ಕಾಗಿ ಕಳೆದ ಒಂದು ವರ್ಷದಿಂದಲೇ ತಯಾರಿ ನಡೆಸಲಾಗುತ್ತಿದೆ. ಗೋವಾ ಉಪೇಂದ್ರ ಗಾಂವಕರ್‌ ಉತ್ತರ ಕರ್ನಾಟಕ ಭಾಗದ ಉಸ್ತುವಾರಿಯಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ 4ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಅಂತ ಆಪ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಕಾಸ ಸೊಪ್ಪಿನ ತಿಳಿಸಿದ್ದಾರೆ.