Asianet Suvarna News Asianet Suvarna News

ಬಿಜೆಪಿ ಸಮರ್ಥ ಅಭ್ಯರ್ಥಿ ಹುಡುಕಾಟಕ್ಕೆ ಬಿಜೆಪಿ ಕಸರತ್ತು..!

ಚುನಾವಣೆಗೆ ಸಜ್ಜಾಗಿರುವ ಆಡಳಿತಾರೂಢ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

BJP Trying to Find Capable Candidate at Chikkodi Sadalaga in Belagavi grg
Author
First Published Jan 17, 2023, 7:09 PM IST

ಶ್ರೀಶೈಲ ಮಠದ 

ಬೆಳಗಾವಿ(ಜ.17): ಚಿಕ್ಕೋಡಿ- ಸದಲಗಾ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗತೊಡಗಿವೆ. ಕಾಂಗ್ರೆಸ್‌ನ ಹಾಲಿ ಶಾಸಕ ಗಣೇಶ ಹುಕ್ಕೇರಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ತಂದೆ- ಮಗ (ಪ್ರಕಾಶ ಹುಕ್ಕೇರಿ- ಗಣೇಶ ಹುಕ್ಕೇರಿ) ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹೊಂದುವ ಮೂಲಕ ತಮ್ಮದೇ ಮತ ಬ್ಯಾಂಕ್‌ ಸೃಷ್ಟಿಸಿಕೊಂಡಿದ್ದಾರೆ. ಕ್ಷೇತ್ರದ ಮೇಲೆ ಬಿಗಿ ಹಿಡಿದ ಹೊಂದಿದ್ದಾರೆ. ಹಾಗೆ ನೋಡಿದರೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಆದರೆ, ಚುನಾವಣೆಗೆ ಸಜ್ಜಾಗಿರುವ ಆಡಳಿತಾರೂಢ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ ಪಕ್ಷದಿಂದ ಹಾಲಿ ಶಾಸಕ ಗಣೇಶ ಹುಕ್ಕೇರಿ ಸ್ಪರ್ಧಿಸುವುದು ಖಚಿತ. ಇವರ ಬೆನ್ನಿಗೆ ತಂದೆ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ನಿಂತಿರುವುದು ಅವರ ಗೆಲುವಿನ ಹಾದಿ ಸುಗಮ. ಕ್ಷೇತ್ರದ ಮೇಲೆ ಬಿಗಿ ಹಿಡಿತ ಹೊಂದಿರುವುದು ಅವರ ಗೆಲುವು ಸುಲಭ ಎನ್ನವ ಲೆಕ್ಕಾಚಾರವಿದೆ. ಆದರೆ, ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಿದರೆ ಸ್ಪರ್ಧೆ ರಂಗೇರಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಪಕ್ಷದಲ್ಲಿ ಪ್ರಭಾವಿಯಾಗಿದ್ದ ಅಣ್ಣಾಸಾಹೇಬ ಜೊಲ್ಲೆ ಈಗ ಹಾಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯ. ಹಾಗಾಗಿ, ಈಗ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ. ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಯನ್ನಾಗಿ ಯಾರನ್ನೂ ಕಣಕ್ಕಿಳಿಸಲಾಗುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಪ್ರಬಲ, ಸೂಕ್ತ ಅಭ್ಯರ್ಥಿಗಾಗಿ ಬಿಜೆಪಿ ತೀವ್ರ ಕಸರತ್ತು ನಡೆಸಿದೆ.

ಸವದತ್ತಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಿಲ್ಲ: ಸತೀಶ್ ಜಾರಕಿಹೊಳಿ

ಕವಟಗಿಮಠ ಸ್ಪರ್ಧೆಗೆ ಸ್ವ ಪಕ್ಷದಲ್ಲೇ ವಿರೋಧ

ಈ ಹಿಂದೆ 2014ರ ಚಿಕ್ಕೋಡಿ- ಸದಲಗಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೋಲನುಭವಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿದ್ದರೂ ಜಿಲ್ಲೆಯಲ್ಲಿ 18 ವಿಧಾನಸಭೆ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿಯೂ ಬಿಜೆಪಿಯ ಮಹಾಂತೇಶ ಕವಟಗಿಮಠ ಹೀನಾಯವಾಗಿ ಸೋಲನುಭವಿಸಿದರು. ಇದೀಗ ಮತ್ತೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಕವಟಗಿಮಠ ಅವರ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ಸೋಲನುಭವಿಸಿದ ಅಭ್ಯರ್ಥಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಂತೆ ಚಿಕ್ಕೋಡಿ ಬಿಜೆಪಿ ನಾಯಕರು ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕೇಸರಿ ಪಾಳಯದಲ್ಲಿ ಗೆಲ್ಲುವ, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟವೂ ನಡೆಯುತ್ತಿದೆ. ಅದರಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡಿದರೆ ಬಿಜೆಪಿ ಗೆಲುವು ಇಲ್ಲಿ ಸುಲಭವಲ್ಲ. ಈ ಹಿಂದೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ಸೋಲು ಅನುಭವಿಸಿದಂತಹ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂಬ ಕೂಗು ಬಿಜೆಪಿಯಲ್ಲೇ ಕೇಳಿಬರುತ್ತಿದೆ. ಹಾಗೆ ನೋಡಿದರೆ 1952ರಿಂದ ಈವರೆಗಿನ ವಿಧಾನಸಭೆ ಚುನಾವಣೆಗಳಲ್ಲಿ ಸದಲಗಾ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದು ವಿಶೇಷ.

2014ರ ಚಿಕ್ಕೋಡಿ-ಸದಲಗಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ಮಹಾಂತೇಶ ಕವಟಗಿಮಠ ಸೋಲನುಭವಿಸಿದ್ದರು. ಇನ್ನು ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ಅವರು ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 10569 ಮತಗಳಿಂದ ಗೆಲುವು ಸಾಧಿಸಿದ್ದರು. ಗಣೇಶ ಹುಕ್ಕೇರಿ 91467 ಮತಪಡೆದಿದ್ದರೆ, ಅಣ್ಣಾಸಾಹೇಬ ಜೊಲ್ಲೆ 80898 ಮತ ಪಡೆದಿದ್ದರು. ಆ ವೇಳೆ ಜೊಲ್ಲೆ ಅವರು ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಪ್ರಭಾವಿ ಕೂಡ ಆಗಿದ್ದರು. ಆದರೆ, ಲೋಕಸಭೆ ಚುನಾವಣೆಗೆ ಆಯ್ಕೆಯಾಗಿರುವುದರಿಂದ ಇದೀಗ ಚಿಕ್ಕೋಡಿ- ಸದಲಗಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಸರಿ ಪಾಳಯದಲ್ಲೇ ಕೇಳಿಬರುತ್ತಿವೆ.

Follow Us:
Download App:
  • android
  • ios