ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾದ್ರೂ ಇನ್ನೂ 12 ಕ್ಷೇತ್ರಗಳ ಟಿಕೆಟ್‌ ನಿಗೂಢ..!

2 ಪಟ್ಟಿಯಲ್ಲಿ ಒಟ್ಟು 212 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ ಪಕ್ಷ, ಶೆಟ್ಟರ್‌, ಲಿಂಬಾವಳಿ, ರಾಮದಾಸ್‌, ಬಂಡಿ ಕ್ಷೇತ್ರದಲ್ಲಿ ಕುತೂಹಲ, ಸೋಮಣ್ಣ, ಈಶ್ವರಪ್ಪ ಕ್ಷೇತ್ರಗಳಲ್ಲಿ ಮಕ್ಕಳಿಗೆ ಸಿಗುವುದೇ ಟಿಕೆಟ್‌?

BJP Ticket of 12 More Constituencies Mystery in Karnataka grg

ಬೆಂಗಳೂರು(ಏ.13):  ಕಳೆದ ಎರಡು ದಿನಗಳಲ್ಲಿ 212 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿರುವ ಆಡಳಿತಾರೂಢ ಬಿಜೆಪಿಯು ಗೊಂದಲವಿದೆ ಎನ್ನಲಾದ ಇನ್ನೂ 12 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಹಾಲಿ ಶಾಸಕರಾದ ಜಗದೀಶ್‌ ಶೆಟ್ಟರ್‌, ಅರವಿಂದ್‌ ಲಿಂಬಾವಳಿ, ಎಸ್‌.ಎ.ರಾಮದಾಸ್‌, ಕಳಕಪ್ಪ ಬಂಡಿ ಅವರು ಪ್ರತಿನಿಧಿಸುವ ಕ್ಷೇತ್ರಗಳು ಇರುವುದರಿಂದ ಇವರಿಗೆ ಟಿಕೆಟ್‌ ಲಭಿಸುವುದೋ ಅಥವಾ ಇಲ್ಲವೋ ಎಂಬ ಕುತೂಹಲ ಮುಂದುವರೆದಿದೆ. ಜತೆಗೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಮತ್ತು ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ವಲಸೆ ಹೋಗುತ್ತಿರುವ ಸಚಿವ ವಿ.ಸೋಮಣ್ಣ ಪ್ರತಿನಿಧಿಸುತ್ತಿರುವ ಗೋವಿಂದರಾಜನಗರ ಕ್ಷೇತ್ರದಿಂದ ಅವರ ಪುತ್ರರಿಗೆ ಟಿಕೆಟ್‌ ಸಿಗುತ್ತದೆಯೋ ಅಥವಾ ಬೇರೆಯವರನ್ನು ಪರಿಗಣಿಸಲಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕರಾಗಿರುವ ಜಗದೀಶ್‌ ಶೆಟ್ಟರ್‌ ಬುಧವಾರ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ. ಹೀಗಾಗಿ, ಮೂರನೇ ಪಟ್ಟಿಯಲ್ಲಿ ಟಿಕೆಟ್‌ ಸಿಗಬಹುದೇ ಎಂಬ ಕುತೂಹಲವಿದೆ.

ಟಿಕೆಟ್ ಕೈತಪ್ಪಿದ ಆಕ್ರೋಶ, ಬಿಜೆಪಿಗೆ ಶಾಸಕ ಗೂಳಿಹಟ್ಟಿ ಶೇಖರ್ ಗುಡ್ ಬೈ!

ಇನ್ನು ಮಹದೇವಪುರ ಕ್ಷೇತ್ರದ ಅರವಿಂದ್‌ ಲಿಂಬಾವಳಿ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲ. ಆ ಕ್ಷೇತ್ರದಿಂದ ಹೊಸಬರಿಗೆ ಅವಕಾಶ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. ಅದೇ ರೀತಿ ಕೃಷ್ಣರಾಜ ಕ್ಷೇತ್ರದ ರಾಮದಾಸ್‌ ಅವರಿಗೆ ಮೂರನೆಯ ಪಟ್ಟಿಯಲ್ಲಿ ಟಿಕೆಟ್‌ ಸಿಗಬಹುದು ಎನ್ನಲಾಗುತ್ತಿದೆ. ರೋಣ ಕ್ಷೇತ್ರದ ಕಳಕಪ್ಪ ಬಂಡಿ ವಿರುದ್ಧ ಹಲವು ಆರೋಪಗಳು ಇರುವುದರಿಂದ ಟಿಕೆಟ್‌ ಅನುಮಾನ ಎಂದು ಮೂಲಗಳು ತಿಳಿಸಿವೆ.

ಕೊಪ್ಪಳ ಕ್ಷೇತ್ರದಿಂದ ಹಾಲಿ ಸಂಸದ ಕರಡಿ ಸಂಗಣ್ಣ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಮುಖಂಡ ಸಿ.ವಿ.ಚಂದ್ರಶೇಖರ್‌ ಅವರೂ ಆಕಾಂಕ್ಷಿಯಾಗಿದ್ದಾರೆ. ಆದರೆ, ಸಂಸದರಿಗೆ ವಿಧಾನಸಭಾ ಟಿಕೆಟ್‌ ನೀಡುವ ಬಗ್ಗೆ ವರಿಷ್ಠರು ಒಲವು ತೋರಿಲ್ಲ. ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಮಾಜಿ ಶಾಸಕ ನೇಮಿರಾಜ್‌ ನಾಯಕ್‌ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೇನಾರಾಯಣ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಸೇಡಂ ಕ್ಷೇತ್ರದ ಶಾಸಕ ರಾಜ್‌ಕುಮಾರ್‌ ತೇಲ್ಕೂರ್‌ ಬಗ್ಗೆ ಆರೋಪಗಳಿರುವುದರಿಂದ ಸ್ಪಷ್ಟತೆ ಮೂಡಿಲ್ಲ.

ದೆಹಲಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಿಎಂ ಶೆಟ್ಟರ್ ಅಲೆದಾಟ, ಜೋಶಿ ಬಳಿಕ ಜೆಪಿ ನಡ್ಡಾ ಮನೆಗೆ ತೆರಳಿ ಚರ್ಚೆ!

ನಾಗಠಾಣ ಕ್ಷೇತ್ರದಿಂದ ಕಳೆದ ಬಾರಿ ಸಚಿವ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ್‌ ಕಣಕ್ಕಿಳಿದು ಸೋಲುಂಡಿದ್ದರು. ಈ ಬಾರಿ ಡಾ.ಗೋಪಾಲ್‌ ಜತೆಗೆ ಸಹೋದರ ಉಮೇಶ್‌ ಕೂಡ ಆಕಾಂಕ್ಷಿಯಾಗಿದ್ದಾರೆ. ಆದರೆ, ಕುಟುಂಬ ರಾಜಕಾರಣದ ಆತಂಕ ಎದುರಾದಲ್ಲಿ ಬೇರೆಯವರಿಗೆ ಟಿಕೆಟ್‌ ನೀಡಬಹುದು. ಹೆಬ್ಬಾಳ ಕ್ಷೇತ್ರದಿಂದ ಮಾಜಿ ಸಚಿವ ಕಟ್ಟಾಸುಬ್ರಮಣ್ಯನಾಯ್ಡು ಅವರಿಗೆ ಮೂರನೆಯ ಪಟ್ಟಿಯಲ್ಲಿ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಮಾನ್ವಿ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಹುಡುಕಾಟ ನಡೆದಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios