ಬೆಂಗಳೂರಿನ 25 ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ: 3 ಸಸ್ಪೆನ್ಸ್
ಅನುಮಾನವಿದ್ದ ಸುರೇಶ್, ರವಿಸುಬ್ರಹ್ಮಣ್ಯ, ಗರುಡಾಚಾರ್, ಕೃಷ್ಣಪ್ಪಗೆ ಮಣೆ, ಗೋವಿಂದರಾಜನಗರ, ಮಹದೇವಪುರ, ಹೆಬ್ಬಾಳ ಅಭ್ಯರ್ಥಿ ಪ್ರಕಟಿಸದ ಬಿಜೆಪಿ, ಸೋಮಣ್ಣ ಸ್ಥಾನಕ್ಕೆ ಉಮೇಶ್ ಶೆಟ್ಟಿಗೆ ಟಿಕೆಟ್? ಹೆಬ್ಬಾಳದಲ್ಲಿ ಕಟ್ಟಾಗೆ ಸಿಗುತ್ತಾ?, ರೂಪಾ ಅಯ್ಯರ್, ಎನ್.ಆರ್. ರಮೇಶ್, ಶಿವರಾಂ, ಬೇಗ್ ಪುತ್ರಗೆ ನಿರಾಸೆ.
ಬೆಂಗಳೂರು(ಏ.12): ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಒಟ್ಟು 28 ಕ್ಷೇತ್ರಗಳ ಪೈಕಿ ಗೋವಿಂದರಾಜನಗರ, ಮಹದೇವಪುರ ಮತ್ತು ಹೆಬ್ಬಾಳ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಕ್ಷೇತ್ರಗಳಿಗೂ ಟಿಕೆಟ್ ಘೋಷಿಸಲಾಗಿದೆ.
ಈ ಪೈಕಿ ಗೋವಿಂದರಾಜನಗರ ಕ್ಷೇತ್ರದ ಹಾಲಿ ಶಾಸಕರಾಗಿರುವ ಸಚಿವ ವಿ.ಸೋಮಣ್ಣ ಅವರಿಗೆ ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದೆ. ಹೀಗಾಗಿ. ಗೋವಿಂದರಾಜನಗರ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬಹುದು ಎಂಬ ಕುತೂಹಲ ಮೂಡಿದೆ. ವಾಸ್ತವವಾಗಿ ಸೋಮಣ್ಣ ಅವರು ತಮ್ಮ ಪುತ್ರನಿಗೆ ಈ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ, ಈಗ ತಮಗೇ ಎರಡು ಕ್ಷೇತ್ರಗಳ ಟಿಕೆಟ್ ನೀಡಿರುವುದರಿಂದ ಪುತ್ರನಿಗೆ ಟಿಕೆಟ್ ನೀಡುವ ಬಗ್ಗೆ ಅನುಮಾನವಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲಿ 9 ಶಾಸಕರು, ಒಬ್ಬ ಸಚಿವರಿಗೆ ಕೊಕ್, ಏನಿದರ ಗುಟ್ಟು?
ಅದೇ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ಸದಸ್ಯರಾಗಿದ್ದ ಉಮೇಶ್ ಶೆಟ್ಟಿಅವರಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ. ವಾಸ್ತವವಾಗಿ ಗೋವಿಂದರಾಜನಗರದಿಂದ ಸೋಮಣ್ಣ ಅವರೇ ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರದ ಮೇಲೆ ಉಮೇಶ್ ಶೆಟ್ಟಿಅವರು ವಿಜಯನಗರ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದರು. ಕೆಲಸವನ್ನೂ ಆರಂಭಿಸಿದ್ದರು. ಆದರೆ, ವಿಜಯನಗರ ಕ್ಷೇತ್ರದಿಂದ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಎಚ್.ರವೀಂದ್ರ ಅವರಿಗೇ ಟಿಕೆಟ್ ನೀಡಲಾಗಿದೆ. ಹೀಗಾಗಿ, ಉಮೇಶ್ ಶೆಟ್ಟಿಅವರ ದೃಷ್ಟಿಗೋವಿಂದರಾಜನಗರದತ್ತ ಹರಿದಿದೆ. ಇಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಇನ್ನು ಹಾಲಿ ಶಾಸಕರಾಗಿರುವ ಅರವಿಂದ್ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಉಳಿಸಿರುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪಕ್ಷದ ಚುನಾವಣಾ ಪ್ರಚಾರ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಎರಡರಲ್ಲೂ ಸ್ಥಾನ ನೀಡಿರುವ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ಸ್ಥಾನಕ್ಕೆ ಹೂಡಿ ವಿಜಯಕುಮಾರ್ ಹೆಸರು ಕೇಳಿಬರುತ್ತಿದೆ.
ಹೆಬ್ಬಾಳ ಕ್ಷೇತ್ರದಿಂದ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಪ್ರಬಲ ಆಕಾಂಕ್ಷಿಯಾಗಿದ್ದು, ಪ್ರಚಾರವನ್ನೂ ಆರಂಭಿಸಿದ್ದಾರೆ. ಆದರೆ, ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರದ ಟಿಕೆಟ್ ಘೋಷಣೆ ಮಾಡದೇ ಇರುವುದು ಕುತೂಹಲ ಉಂಟು ಮಾಡಿದೆ. ಅವರ ಬದಲು ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಅವರ ಹೆಸರೂ ಪ್ರಸ್ತಾಪವಾಗಿದೆ.
ಇದೇ ವೇಳೆ ಜಯನಗರ ಕ್ಷೇತ್ರದಿಂದ ಸಿ.ಕೆ.ರಾಮಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್, ವಕ್ತಾರ ವಿವೇಕ್ ರೆಡ್ಡಿ, ನಟಿ ರೂಪಾ ಅಯ್ಯರ್ ಅವರು ಆಕಾಂಕ್ಷಿಯಾಗಿದ್ದರು. ಈ ಪೈಕಿ ರಮೇಶ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಈಗ ಟಿಕೆಟ್ ನಿರಾಕರಿಸಿರಿರುವುದರಿಂದ ಬೇಸರಗೊಂಡಿರುವ ರಮೇಶ್ ಅವರು ಬುಧವಾರ ಪತ್ರಿಕಾಗೋಷ್ಠಿ ಕರೆದಿರುವುದು ಕುತೂಹಲ ಮೂಡಿಸಿದೆ.
ಅನುಮಾನ ಇದ್ದವರಿಗೂ ಟಿಕೆಟ್ ಅದೃಷ್ಟ
ಟಿಕೆಟ್ ಅನುಮಾನ ಎನ್ನಲಾಗುತ್ತಿದ್ದ ಹಾಲಿ ಶಾಸಕರಾದ ಚಿಕ್ಕಪೇಟೆಯ ಉದಯ್ ಗರುಡಾಚಾರ್, ಬಸವನಗುಡಿಯ ರವಿ ಸುಬ್ರಹ್ಮಣ್ಯ, ರಾಜಾಜಿನಗರದ ಎಸ್.ಸುರೇಶ್‌ಕುಮಾರ್, ಬೆಂಗಳೂರು ದಕ್ಷಿಣದ ಎಂ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಆನೇಕಲ್ ಮೀಸಲು ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಶಿವರಾಮ್ ಅವರು ತೀವ್ರ ಪ್ರಯತ್ನ ನಡೆಸಿದರೂ ಟಿಕೆಟ್ ತಪ್ಪಿದೆ. ಅಲ್ಲಿ ಪಕ್ಷದ ಮುಖಂಡ ಹುಲ್ಲಳ್ಳಿ ಶ್ರೀನಿವಾಸ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಬಿಜೆಪಿಗೆ ರಾಜಿನಾಮೆ ನೀಡಿದ ಎಂಎಲ್ಸಿ ಆರ್. ಶಂಕರ್: ಪಕ್ಷೇತರ ಸ್ಪರ್ಧೆಗೆ ಸಿದ್ಧತೆ
ಭಾಸ್ಕರರಾವ್ ಚಾಮರಾಜಪೇಟೆಗೆ
ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಅವರಿಗೆ ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಶಿವಾಜಿನಗರದಿಂದ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದರೂ ವರಿಷ್ಠರು ಒಪ್ಪಲಿಲ್ಲ. ಅಲ್ಲಿಂದ ಪಕ್ಷದ ಮುಖಂಡ ಎನ್.ಚಂದ್ರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಬ್ಯಾಟರಾಯನಪುರದಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪರಮಾಪ್ತ ತಮ್ಮೇಶ್‌ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.