ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ; ನಾ ಒಲ್ಲೆ, ನೀ ಒಲ್ಲೆ..!
ಬರುವ ವರ್ಷ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಒಂದು ವರ್ಷದೊಳಗಾಗಿಯೇ ಪಕ್ಷವನ್ನು ಸಂಘಟಿಸಿ, ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸಬೇಕಿದೆ. ಇದು ಬಿಜೆಪಿಗೆ ಗುರುತರ ಜವಾಬ್ದಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಚಿಂತನೆ ನಡೆಸಿದೆ.
ರುದ್ರಪ್ಪ ಆಸಂಗಿ
ವಿಜಯಪುರ(ಮೇ.23): ವಿಧಾನಸಭೆ ಚುನಾವಣೆ ನಿಮಿತ್ತ ಬಿಜೆಪಿ ರಾಜ್ಯಾಧ್ಯಕ್ಷ ಸೇರಿ ಎಲ್ಲ ಜಿಲ್ಲಾ ಅಧ್ಯಕ್ಷರ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿತ್ತು. ಇದೀಗ ಚುನಾವಣೆ ಮುಗಿದು ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಯಾವ ರೀತಿ ಹೊಸದಾಗಿ ಕಾಯಕಲ್ಪ ನೀಡಬೇಕು ಎಂಬುವುದರ ಬಗ್ಗೆ ಬಿಜೆಪಿ ವಲಯದಲ್ಲಿ ಚಿಂತನ ಮಂಥನ ನಡೆದಿವೆ. ಯಾರಿಗೆ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿದರೆ ಪಕ್ಷದ ಸಂಘಟನೆಗೆ ಅನುಕೂಲವಾಗುತ್ತದೆ ಎಂಬುವುದರ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ನಡೆಸುತ್ತಿರುವುದರ ಬೆನ್ನ ಹಿಂದೆಯೇ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾ ಒಲ್ಲೆ, ನೀ ಒಲ್ಲೆ ಎಂದು ಹಿಂದೇಟು ಹಾಕುತ್ತಿದ್ದಾರೆ.
ಬರುವ ವರ್ಷ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಒಂದು ವರ್ಷದೊಳಗಾಗಿಯೇ ಪಕ್ಷವನ್ನು ಸಂಘಟಿಸಿ, ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸಬೇಕಿದೆ. ಇದು ಬಿಜೆಪಿಗೆ ಗುರುತರ ಜವಾಬ್ದಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಚಿಂತನೆ ನಡೆಸಿದೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ
ಅಧ್ಯಕ್ಷಗಿರಿಗೆ ಘಟಾನುಘಟಿಗಳ ಹಿಂದೇಟು!:
ಜಿಲ್ಲೆಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಪುರ ಅಂಥವರು ಜಿಲ್ಲೆಯಲ್ಲಿ ಪಕ್ಷದ ಚುಕ್ಕಾಣಿ ಹಿಡಿದರೆ ಪಕ್ಷ ಬಲವರ್ಧನೆಗೊಳ್ಳಬಹುದು ಎಂಬ ಮಾತೂ ಪ್ರಚಲಿತದಲ್ಲಿದೆ. ಇಂಥವರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬಂದರೆ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.
ವಿಧಾನ ಪರಿಷತ್ ಸದಸ್ಯ ಅರುಣ ಶಹಪುರ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ನನಗೆ ಶಿಕ್ಷಕರ ಸಂಘಟನೆ ಇದೆ. ರಾಜ್ಯ ಮಟ್ಟದಲ್ಲಿ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಆಗಿದ್ದೇನೆ. ಆ ಜವಾಬ್ದಾರಿ ನಿಭಾಯಿಸಬೇಕಿದೆ. ಹೀಗಾಗಿ, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಶಾಸಕ ರಮೇಶ ಭೂಸನೂರ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನಾನು ಜಿಲ್ಲಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೇಳುವುದಿಲ್ಲ, ನಾನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು, ಅನಂತಕುಮಾರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ ಜಿಲ್ಲೆಯ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು 6 ವರ್ಷ ಹಾಗೂ ಪ್ರಹ್ಲಾದ ಜೋಶಿ ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆಯಲ್ಲಿ ಮೂರು ವರ್ಷ ಒಟ್ಟು 9 ವರ್ಷ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದರು. ಬೆಳ್ಳುಬ್ಬಿ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಜಿಲ್ಲೆಯಲ್ಲಿ ಪಕ್ಷವು ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು. ಆದರೆ, ಈ ಬಾರಿ ಜಿಲ್ಲಾ ಅಧ್ಯಕ್ಷ ಸ್ಥಾನ ನಾನೊಲ್ಲೆ. ಪಕ್ಷದ ವರಿಷ್ಠರು ಬೇರೆ ಯಾರನ್ನಾದರೂ ಸಮರ್ಥ ವ್ಯಕ್ತಿಯನ್ನು ಮಾಡಲಿ. ನಾನಂತೂ ಜಿಲ್ಲಾ ಬಿಜೆಪಿ ಜವಾಬ್ದಾರಿ ಹೊರಲಾರೆ ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿನ ಬಹುತೇಕ ಘಟಾನುಘಟಿಗಳು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ವರಿಷ್ಠರಿಗೆ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯ ಚುಕ್ಕಾಣಿಯನ್ನು ಯಾರಿಗೆ ವಹಿಸಬೇಕು ಎಂಬುವುದೇ ಈಗ ದೊಡ್ಡ ಸವಾಲಾಗಿದೆ.
ಹೊಸಬರಲ್ಲಿ ಚಿಗುರೊಡೆದ ಅಧ್ಯಕ್ಷಗಿರಿ ಆಕಾಂಕ್ಷೆ:
ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರೆ ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇವೆ ಎಂದು ಪಕ್ಷದ ಕೆಲ ಹೊಸ ಧುರೀಣರು ಮುಂದೆ ಬಂದಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಶಿವರುದ್ರ ಬಾಗಲಕೋಟ ಮತ್ತಿತರರ ಹೆಸರುಗಳು ಈ ನಿಟ್ಟಿನಲ್ಲಿ ಪ್ರಬಲವಾಗಿ ಕೇಳಿ ಬರುತ್ತಿವೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 4 ಸ್ಥಾನಗಳಿಂದ ಒಂದು ಸ್ಥಾನಕ್ಕಿಳಿದಿದೆ. ಹೀಗಾಗಿ, ಈ ಬಾರಿಯ ಅಧ್ಯಕ್ಷರನ್ನು ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಅಳೆದು ತೂಗಿ ಆಯ್ಕೆ ಮಾಡಬೇಕಾಗಿದೆ.
ಸುರೇಶ ಬಿರಾದಾರ ಅವರು, ಎರಡು ಅವಧಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ನಿಭಾಯಿಸಿದ್ದಾರೆ. ಸದ್ಯಕ್ಕೆ ಜಿಲ್ಲಾ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ. ಪಾಲಿಕೆ ಸದಸ್ಯ ರಾಜು ಮಗಿಮಠ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇದಲ್ಲದೆ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ನಾನು ಆಕಾಂಕ್ಷಿಯಲ್ಲ. ಪಕ್ಷ ಜವಾಬ್ದಾರಿ ವಹಿಸಿದರೆ ನಿಭಾಯಿಸಲು ಸಿದ್ದ ಎನ್ನುತ್ತಿದ್ದಾರೆ.
ರಾಜುಗೌಡ ಶಾಸಕರಾಗಲೆಂದು ನಾಲ್ಕು ವರ್ಷ ಬರಿಗಾಲಲ್ಲೇ ತಿರುಗಿದವರು!
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಅವರು, ನಗರ ಬಿಜೆಪಿ ಅಧ್ಯಕ್ಷ, ಕಾರ್ಯದರ್ಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಎಚ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಆರ್‌ಎಸ್‌ಎಸ್ ನಗರ ಕಾರ್ಯವಾಹಕ ಜವಾಬ್ದಾರಿ ನಿಭಾಯಿಸಿದ್ದಾರೆ. ಪಕ್ಷ ನನ್ನ ಸೇವೆಯನ್ನು ಗುರುತಿಸಿ ಜಿಲ್ಲಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರೆ ಅದನ್ನು ನಿಭಾಯಿಸಲು ನಾನು ಸಮರ್ಥನಾಗಿದ್ದೇನೆ ಎಂದು ಹೇಳಿದರು.
ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಬಣ ಹಾಗೂ ಬಿಜೆಪಿ ಪಕ್ಷದ ಹಿರಿಯರ ಬಣ ಸೇರಿ ಒಟ್ಟು ಮೂರು ಬಣಗಳನ್ನು ಒಗ್ಗೂಡಿಸಿಕೊಂಡು ಹೋಗುವ ಅಜಾತಶತ್ರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದರೆ ಮಾತ್ರ ಬಿಜೆಪಿ ಪಕ್ಷ ಮತ್ತೊಮ್ಮೆ ಜಿಲ್ಲೆಯಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯಬಹುದಾಗಿದೆ.