ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ರಾಜ್ಯದ ರಾಜಕೀಯ ಖಳನಾಯಕ. ಅವರು ರಾಜಕೀಯದಲ್ಲಿ ಯಾರನ್ನೂ ಬದುಕಲು ಬಿಡುವುದಿಲ್ಲ. ಸಿದ್ದರಾಮಯ್ಯ ರೀತಿ ವಜ್ರಮುನಿಯೂ ಚಿತ್ರಗಳಲ್ಲಿ ಮೋಸ ಮಾಡುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹರಿಹಾಯ್ದಿದ್ದಾರೆ. 

ಬಾಗಲಕೋಟೆ (ನ.01): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ರಾಜ್ಯದ ರಾಜಕೀಯ ಖಳನಾಯಕ. ಅವರು ರಾಜಕೀಯದಲ್ಲಿ ಯಾರನ್ನೂ ಬದುಕಲು ಬಿಡುವುದಿಲ್ಲ. ಸಿದ್ದರಾಮಯ್ಯ ರೀತಿ ವಜ್ರಮುನಿಯೂ ಚಿತ್ರಗಳಲ್ಲಿ ಮೋಸ ಮಾಡುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹರಿಹಾಯ್ದಿದ್ದಾರೆ. ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಈಗಾಗಲೇ ಅತಂತ್ರ ಸ್ಥಿತಿಗೆ ಬಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಪರ ಎಂಬ ಎರಡು ಗುಂಪುಗಳಿವೆ. ಸಿದ್ದರಾಮಯ್ಯ ಇದೀಗ ಕಾಂಗ್ರೆಸ್‌ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. 

ಎಲ್ಲಿಯವರೆಗೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಇರುತ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಗೆ ಹೆಚ್ಚು ವೋಟ್‌ ಬರುವುದೇ ಸಿದ್ದರಾಮಯ್ಯ ಮಾತಿನಿಂದ ಎಂದು ವ್ಯಂಗ್ಯವಾಡಿದರು. 2018ರಲ್ಲಿ 104 ಸ್ಥಾನ ಗೆದ್ದು ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆಂದಾಗ ತಮ್ಮ ವೈರಿಯಾದ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಸೇರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ರಚಿಸಲು ಅವಕಾಶವಿತ್ತರು. ಆದರೆ, ಒಂದೇ ವರ್ಷದಲ್ಲಿ ಕುಮಾರಸ್ವಾಮಿಗೂ ಸಿದ್ದರಾಮಯ್ಯ ಮೋಸ ಮಾಡಿದರು. 

ಜನವರಿ ವೇಳೆಗೆ ಅರ್ಕಾವತಿ ಹಗರಣ ಬೆಳಕಿಗೆ ಬರಲಿದೆ: ನಳೀನ್‌ಕುಮಾರ್‌ ಕಟೀಲ್‌

ಸಿದ್ದರಾಮಯ್ಯ ಅವರಿಗೆ ಯೋಗ್ಯತೆ, ನೈತಿಕತೆ, ಸ್ವಾಭಿಮಾನ ಇದ್ದಿದ್ದರೆ ಸೋನಿಯಾ ಗಾಂಧಿ ಅವರ ಕಾಲಿಗೆ ಬಿದ್ದು ಮುಖ್ಯಮಂತ್ರಿ ಆಗುವುದೇನಿತ್ತು ಎಂದು ಕಟೀಲ್‌ ಅವರು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರಿಗೆ ಧಮ್‌ ಇದ್ದರೆ ಬಾದಾಮಿಯಿಂದ ಸ್ಪರ್ಧಿಸಲಿ. ಈ ಬಾರಿ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾಭಿಮಾನಿ ನಾಯಕ ಎಂದಾದರೆ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಅವ್ವ-ಮಗ, ಅಪ್ಪ-ಮಗನ ಪಕ್ಷ ಜನರೇ ದೂರ ಮಾಡುತ್ತಾರೆ: ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿದ್ಯಾರಣ್ಯಪುರಂನ ಬೂತಾಳೆ ಆಟದ ಮೈದಾನದಲ್ಲಿ ಕೆ.ಆರ್‌. ವಿಧಾನಸಭಾ ಕ್ಷೇತ್ರದ ಬೂತ್‌ ಅಧ್ಯಕ್ಷರ ಮತ್ತು ಬಿಎಲ್‌ಎಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಲನ್‌ನಂತೆ ಕೆಲಸ ಮಾಡಿದರು. ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದೆ ಕುಮಾರಸ್ವಾಮಿ ತಾಜ್‌ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ ಫಲವಾಗಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣವಾಯಿತು ಎಂದರು.

Mysuru: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳೀಪಟ: ನಳಿನ್‌ಕುಮಾರ್‌ ಕಟೀಲ್‌

ಈಗ ಅಪ್ಪ- ಮಗ ಮತ್ತು ತಾಯಿ- ಮಗನ ಪಕ್ಷವನ್ನು ಜನರೇ ಸಮುದ್ರಕ್ಕೆ ಎಸೆಯುತ್ತಾರೆ. ರಾಜ್ಯದಲ್ಲಿ ನಡೆದ 21 ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವು 17 ಸ್ಥಾನಗಳಲ್ಲಿ ಗೆದ್ದಿದ್ದೇವೆ. ಆಡಳಿತ ಪಕ್ಷದ ಸಚಿವರು, ಶಾಸಕರು ರಾಜೀನಾಮೆ ನೀಡಿ ವಿಪಕ್ಷಕ್ಕೆ ಸೇರಿಕೊಂಡು ಅಧಿಕಾರಕ್ಕೆ ಬರುವಂತೆ ಮಾಡಿದ್ದು ಈಗ ಇತಿಹಾಸ ಎಂದರು. ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನಡೆಸಿದ ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆಯಾವುದೇ ಪ್ರಯೋಜನ ಆಗುವುದಿಲ್ಲ. ಪಂಚರತ್ನ ಯಾತ್ರೆಯಿಂದಲೂ ಜನರು ಮರುಳಾಗಲ್ಲ. ಬಿಜೆಪಿ ಪರವಾಗಿ ಅಲೆ ಎದ್ದಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್‌, ಜೆಡಿಎಸ್‌ ಸಮುದ್ರಕ್ಕೆ ಬೀಳಲಿವೆ. ಆಗ ಅವ್ವ-ಮಗ, ಅಪ್ಪ-ಮಗನ ಪಕ್ಷಕ್ಕೂ ಉಳಿಗಾಲವಿಲ್ಲ ಎಂದು ಭವಿಷ್ಯ ನುಡಿದರು.