ಗಾಂಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಗಾಂಧಿ ಕನಸಿನ ರಾಮರಾಜ್ಯ ಮಾಡಲಿಲ್ಲ. ಬದಲಿಗೆ ಗಾಂಧಿ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಕಿಡಿಕಾರಿದರು.

ಮಂಡ್ಯ (ನ.05): ಗಾಂಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಗಾಂಧಿ ಕನಸಿನ ರಾಮರಾಜ್ಯ ಮಾಡಲಿಲ್ಲ. ಬದಲಿಗೆ ಗಾಂಧಿ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಕಿಡಿಕಾರಿದರು. ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ‍್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್‌ ದೇಶಕ್ಕೆ ಬಹಳ ಅನ್ಯಾಯ ಮಾಡಿದೆ. ಭ್ರಷ್ಟಾಚಾರ, ಭಯೋತ್ಪಾದನೆ ಕಾಂಗ್ರೆಸ್‌ನ ಬಹುದೊಡ್ಡ ಕೊಡುಗೆಗಳಾಗಿವೆ. 

ನೆಹರು ಅವರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಪಂಚಭೂತಗಳಲ್ಲೂ ಹಗರಣಗಳನ್ನು ಮಾಡಿ ಜೈಲಿಗೆ ಹೋದ ಕೀರ್ತಿ ಕಾಂಗ್ರೆಸ್‌ ನಾಯಕರದ್ದಾಗಿದೆ. ಸೋನಿಯಾ ಮತ್ತು ರಾಹುಲ್‌ಗಾಂಧಿ ಇಬ್ಬರೂ ಬೇಲ್‌ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ತಿಹಾರ್‌ ಜೈಲಿಗೆ ಹೋಗಿ ಬಂದಿದ್ದಾರೆ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್‌. ಅದೊಂದು ಲಂಚದ ಪಾರ್ಟಿ. ಲಂಚದ ಇನ್ನೊಂದು ಮುಖವೇ ಕಾಂಗ್ರೆಸ್‌ ಎಂದು ಟೀಕಿಸಿದರು.

ರಾಹುಲ್‌ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್‌ ಧೂಳಿಪಟ: ಕಟೀಲ್‌

ಕಾಂಗ್ರೆಸ್‌ಗೆ ಮಹಾತ್ಮಗಾಂಧೀಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಶಾಪವಿದೆ. ಮಹಾತ್ಮ ಗಾಂಧೀಜಿ ಮತ್ತು ಇಂದಿರಾ ಗಾಂಧಿ ಹೆಸರಿನಲ್ಲಿರುವ ಗಾಂಧಿ ಎರಡೂ ಬೇರೆ ಬೇರೆ. ಇಬ್ಬರ ಕುಟುಂಬ ಒಂದೇ ಅಲ್ಲ. ನೆಹರು ಕುಟುಂಬಕ್ಕೆ ಅದೇಗೆ ಗಾಂಧಿ ಬಂತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು, ಅಂಬೇಡ್ಕರ್‌ ಅವರಿಗೂ ಕಾಂಗ್ರೆಸ್‌ ಬಹಳ ದೊಡ್ಡ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ನಿಲ್ಲಲು ಅವಕಾಶ ಕೊಡಲಿಲ್ಲ. ಅವರ ಸತ್ತಾಗಲೂ ಹೊಸದಿಲ್ಲಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡಲಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಜಗತ್ತೇ ಭಾರತವನ್ನು ನೋಡುತ್ತಿದೆ. ಸಾಂಸ್ಕೃತಿಕ ಭಾರತ ಎದ್ದು ನಿಂತಿದೆ. ರಾಮನ ಪಾದ ಮೇಲಾಣೆ, ರಾಮಮಂದಿರ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದ ಜಾಗದಲ್ಲೇ ಈಗ ರಾಮ ಮಂದಿರವನ್ನು ಬಿಜೆಪಿ ನಿರ್ಮಿಸುತ್ತಿದೆ. ಪ್ರಧಾನಿ ಮೋದಿ ಅವರು ಉಜ್ಜಯಿನಿಯಲ್ಲಿ ಕಾಶಿ ಕಾರಿಡಾರ್‌ ಮಾಡಿದ್ದಾರೆ. ಕಾಶ್ಮೀರದಲ್ಲಿ ಶಾರದಾ ಪೀಠ ಸ್ಥಾಪಿಸಿದ್ದಾರೆ. ದೇಶದ ಅಭ್ಯುದಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ಶೀಘ್ರ ಕಾಂಗ್ರೆಸ್‌ ವಿಭಜನೆ: ಕಾಂಗ್ರೆಸ್‌ ಪಕ್ಷದೊಳಗೆ ಟಗರು ಮತ್ತು ಬಂಡೆ ಹೋರಾಟ ಹೆಚ್ಚಾಗುತ್ತಿದೆ. ಇವರಿಬ್ಬರ ಸಮರದಿಂದ ಶೀಘ್ರದಲ್ಲೇ ಕಾಂಗ್ರೆಸ್‌ ವಿಭಜನೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಭವಿಷ್ಯ ನುಡಿದರು. ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಪಟ್ಟಕ್ಕೆ ಇಬ್ಬರ ನಡುವೆ ಕದನ ಶುರುವಾಗಿದೆ. ಇದೀಗ ಅರ್ಕಾವತಿ ಬಡಾವಣೆಯ ಡೀ-ನೋಟಿಫಿಕೇಷನ್‌ ಪ್ರಕರಣದ ತನಿಖೆ ಮತ್ತೆ ಶುರುವಾಗಿದೆ. ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಹಗರಣಗಳ ತನಿಖೆ ಚುರುಕುಗೊಂಡಿದೆ. ಸ್ವಲ್ಪ ದಿನಗಳಲ್ಲೇ ಸಿದ್ದರಾಮಯ್ಯ ನಾಪತ್ತೆಯಾಗಲಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಖಳನಾಯಕ, ನರಹಂತಕ: ನಳಿನ್‌ಕುಮಾರ್‌ ಕಟೀಲ್‌ ಟೀಕೆ

ಸಿದ್ದರಾಮಯ್ಯನವರನ್ನು ಕಂಡರೆ ಖರ್ಗೆ, ಡಿ.ಕೆ.ಶಿವಕುಮಾರ್‌ಗೆ ಆಗೋಲ್ಲ. ಪಕ್ಷದಲ್ಲಿ ಅವರ ಬೆಳವಣಿಯನ್ನು ಇಬ್ಬರೂ ಸಹಿಸುವುದಿಲ್ಲ. ಸಿಎಂ ಹುದ್ದೆಗೆ ಸಿದ್ದರಾಮಯ್ಯರನ್ನು ಖರ್ಗೆ ಬೆಂಬಲಿಸುವುದೂ ಇಲ್ಲ. ಏಕೆಂದರೆ, ಕಳೆದ ಚುನಾವಣೆಯಲ್ಲಿ ಖರ್ಗೆ, ಪರಮೇಶ್ವರ್‌ ಸೋಲಿಗೆ ಸಿದ್ದರಾಮಯ್ಯನವರೇ ಕಾರಣ. ದಲಿತರೊಬ್ಬರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದರು. ಇನ್ನು ಮುಖ್ಯಮಂತ್ರಿ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯನವರು ಬೆಳವಣಿಗೆಗೆ ಅಡ್ಡಿಯಾಗಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಶೀಘ್ರ ವಿಭಜನೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದರು.