ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ವತಃ ನಳೀನ್ ಕುಮಾರ್ ಕಟೀಲ್ ಬಳ್ಳಾರಿಯಲ್ಲಿ ಹೇಳಿದ್ದ ಬೆನ್ನಲ್ಲಿಯೇ ಕೆಲ ಕಾಲ ರಾಜಕೀಯದಲ್ಲಿ ಮಿಂಚಿನ ಸಂಚಾರವಾದಂತಾಗಿತ್ತು. ಬಿಜೆಪಿ ಇದನ್ನು ತಿರಸ್ಕರಿಸಿದರೆ, ನಳೀನ್ ಕುಮಾರ್ ಕಟೀಲ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾತನಾಡಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.
ಬೆಂಗಳೂರು (ಜೂ.24): ರಾಜ್ಯ ವಿಧಾನಸಭೆ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಖಿತವಾಗಿ ಹಾಗೂ ಮೌಖಿಕವಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ ಬೆನ್ನಲ್ಲಿಯೇ ರಾಜ್ಯ ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಳೀನ್ ಕುಮಾರ್ ಕಟೀಲ್ ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯ ಕೊನೆಗೆ ಸ್ವತಃ ಅವರೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾದ ಬೆನ್ನಲ್ಲಿಯೇ ಬಿಜೆಪಿ ನಾಯಕರಾದ ಆರ್.ಅಶೋಕ್ ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದಿದ್ದರೆ, ಬಿಜೆಪಿ ಕೂಡ ಮಾಧ್ಯಮ ಪ್ರಕಟಣೆ ನೀಡಿ, ರಾಜೀನಾಮೆ ನೀಡಿರುವ ಸುದ್ದಿಯನ್ನು ತಿರಸ್ಕರಿಸಿದ್ದರು. ಆ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮಾತನಾಡಿದ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಆದರೆ, ಅಲ್ಲಿಯೂ ಕೂಡ ಅವರು ತಾವು ರಾಜೀನಾಮೆ ನೀಡಿಲ್ಲ ಎನ್ನುವ ಮಾತನ್ನು ಎಲ್ಲಿಯೂ ಹೇಳಿಲ್ಲ. 'ನನ್ನ ರಾಜ್ಯಾಧ್ಯಕ್ಷ ಅವಧಿ ಮುಗಿದಿದೆ, ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಬಹುದು' ಎಂದಷ್ಟೇ ಮಾತನಾಡಿದ್ದಾರೆ.
ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಅವರು ಮಾತನಾಡಿರುವ ಪೂರ್ಣಪಾಠ:
'ನೋಡಿ, ನೈತಿಕ ಹೊಣೆ ಹೊರುತ್ತೇನೆ ಅನ್ನೋ ಮಾತನ್ನು ಹೇಳಿದ್ದೇನೆ. ರಾಜ್ಯದಲ್ಲಿ ಸೋತ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ನಮ್ಮ ಪಕ್ಷದಲ್ಲಿ ಈ ಪದ್ಧತಿ ಇಲ್ಲ. ಹಾಗಾಗಿ ನನ್ನ ಅವಧಿಯೂ ಮುಗಿದಿದೆ. ರಾಷ್ಟ್ರೀಯ ನಾಯಕರೂ ಯಾವತ್ತೂ ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು. ಹಾಗೇನಿಲ್ಲ, ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ನಾನು ನೈತಿಕ ಹೊಣೆ ಹೊರುತ್ತೇನೆ ಎನ್ನುವ ಮಾತನ್ನು ತಿಳಿಸಿದ್ದೇನೆ. ಆ ಸಂದರ್ಭದಲ್ಲೇ ಹೇಳಿದ್ದೇನೆ. ಮತ್ತು ನನ್ನ ಅವಧಿಯೂ ಮುಗಿದಿದೆ. ಯಾವತ್ತೂ ಬದಲಾವಣೆಗಳನ್ನು ಮಾಡಬಹುದು ಅಂತಾ ಹೇಳಿದ್ದೇನೆ. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಈಗಾಗಲೇ ಹೇಳಿದ್ದೇನೆ' ಎಂದು ಕಟೀಲ್ ಹೇಳಿದ್ದಾರೆ.
ಎಲ್ಲಿಯೂ ಅವರು ತಾವು ರಾಜೀನಾಮೆ ನೀಡಿರೋದು ಸುಳ್ಳು ಎಂದಾಗಲಿ, ನಾನು ರಾಜೀನಾಮೆ ನೀಡಿಲ್ಲ ಎಂದಾಗಲಿ ಹೇಳಿಲ್ಲ. ಆದರೆ, ಬಿಜೆಪಿ ಪಕ್ಷ ಮಾತ್ರ ತನ್ನ ಪ್ರಕಟಣೆಯಲ್ಲಿ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿಲ್ಲ ಎಂದು ಹೇಳಿದೆ.
ಬಿಜೆಪಿ ಮಾಧ್ಯಮ ಪ್ರಕಟಣೆ:
ನಳೀನ್ ಕುಮಾರ್ ಕಟೀಲ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಇಂದು ಪತ್ರಿಕಾಹೇಳಿಕೆ ನೀಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಸುದ್ದಿ ಬಿತ್ತರಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
Breaking: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ
ಇನ್ನು ಬಿಜೆಪಿ ನಾಯಕ ಆರ್.ಅಶೋಕ್ ಕೂಡ, ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿಲ್ಲ. ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ನನಗೆ ರಾಜ್ಯಾಧ್ಯಕ್ಷ ಪಟ್ಟ ಬೇಕೇ ಬೇಕು: ಬಿಜೆಪಿ ಹೈಕಮಾಂಡ್ ಮುಂದೆ ವಿ. ಸೋಮಣ್ಣ ಪಟ್ಟು
