ವಿಧಾನಸಭೆ ಚುನಾವಣೆ ಸೋಲಿನ ಸೈತಿನ ಹೊಣೆ ಹೊತ್ತು ತಾನು ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಕೆ ಮಾಡಿರುವುದಾಗಿ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಬಳ್ಳಾರಿ (ಜೂ.24): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಈಗಾಗಲೇ ನಾನು ಲಿಖಿತ ಹಾಗೂ ಮೌಖಿಕವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆಯದ ಕಾರ್ಯಕ್ರಮದಲ್ಲಿ ನಳೀನ್‌ ಕುಮಾರ್‌ ಕಟೀಲ್‌ ಇದನ್ನು ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನ ಎರಡು ವರ್ಷದ ಅವಧಿ ಮುಗಿದಿದೆ. ಅದರ ಬೆನ್ನಲ್ಲಿಯೇ ನಾನು ರಾಜೀನಾಮೆಯನ್ನೂ ನೀಡಿದ್ದೇನೆ ಎಂದು ಹೇಳಿದ್ದಾರೆ. ಈಗಾಗಲೇ ರಾಜೀನಾಮೆ ಪತ್ರವನ್ನು ಲಿಖಿತವಾಗಿಯೂ ಕಳಿಸಿದ್ದೇನೆ ಎಂದಿದ್ದಾರೆ. ಇನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಾಗಿದ್ದು, ಹಿರಿಯ ನಾಯಕ ವಿ ಸೋಮಣ್ಣ ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರದಲ್ಲಿ ಕಳೆದ ಒಂಭತ್ತು ವರ್ಷ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದೇವೆ. ಭಯೋತ್ಪಾದನಾ ಚಟುವಟಿಕೆ ಶೇ 80 ಕಡಿಮೆ ಆಗಿದೆ. ನಕ್ಸಲ್ ಹಾಗೂ ಆತಂಕವಾದ ನಿರ್ಮೂಲನೆ ಆಗುತ್ತಿದೆ. ಕೇಂದ್ರ ಸರ್ಕಾರ ನಿರಂತರವಾಗಿ 5 ಕೆಜಿ ಅಕ್ಕಿ ಕೊಡುತ್ತೆ. ದೇಶದ ಎಲ್ಲಾ ರಾಜ್ಯಗಳಿಗೆ ಅಕ್ಕಿ ಕೊಡುತ್ತೆ. ಆದರೆ, ಬರ ಮತ್ತು ನೆರೆ ಬಂದಾಗ ರಾಜ್ಯಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಕ್ಕಿಯನ್ನು ಸಂಗ್ರಹ ಮಾಡುತ್ತದೆ. ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡ್‌ಗಳಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎಂದು ಹೇಳಿದ್ದಾರೆ.



ಒಳ ಒಪ್ಪಂದದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಒಳ ಒಪ್ಪಂದದ ಹೇಳಿಕೆ ನೀಡಿದವರನ್ನ ಕರೆದು ಅಭಿಪ್ರಾಯ ಕೇಳಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿಯಿಂದ ಲಿಂಗಾಯಿತರ ಕಡೆಗಣನೆ ವಿಚಾರದಲ್ಲಿ ಮಾತನಾಡಿದ ಕಟೀಲ್‌, ರಾಜ್ಯದಲ್ಲಿ ಲಿಂಗಾಯತರು ಹಾಗೂ ಬಿಎಸ್ ವೈ ಅವರನ್ನು ಕಡೆಗಣನೆ ಮಾಡಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಮಾಡಿದ್ದು. ಬಿಎಸ್ ವೈ,ಬೊಮ್ಮಾಯಿ ಅವರನ್ನ ಬಿಜೆಪಿ ಸಿಎಂ ಮಾಡಿದೆ. ಲಿಂಗಾಯತರು ಮತ್ತೆ ಸಿಎಂ ಆಗಬೇಕಾದ್ರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಇದರ ಬೆನ್ನಲ್ಲಿಯೇ ಬಿಜೆಪಿಯಲ್ಲಿ ಮುಂದಿನ ಕಮಲಾಧಿಪತಿ ಯಾರಾಗ್ತಾರೆ ಎನ್ನುವ ಕುತೂಹಲವೂ ಹೆಚ್ಚಿದೆ. ವಿಪಕ್ಷ ನಾಯಕನೊಂದಿಗೆ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸವಾಲು ಬಿಜೆಪಿಯ ಮುಂದಿದೆ. ವಿ ಸೋಮಣ್ಣ ಅಲ್ಲದೆ, ಅಶ್ವತ್ಥ್‌ ನಾರಾಯಣ್‌, ಸಿಟಿ ರವಿ ಹಾಗೂ ಆರ್‌.ಅಶೋಕ್‌ ಅವರ ಹೆಸರೂ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹರಿದಾಡುತ್ತಿದೆ. 

ಅಕ್ಕಿಯನ್ನು ಮೋದಿಯವರಿಗೆ ಕೇಳಿ ಕೊಡುತ್ತೇನೆ ಎಂದು ಸಿದ್ದು ಹೇಳಿದ್ದರಾ?: ನಳಿನ್‌ ಕುಮಾರ್‌ ಕಟೀಲ್‌

ಚುನಾವಣೆ ಫಲಿತಾಂಶ ಬಂದ ದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾಗಿ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಆದರೆ, ಹೈಕಮಾಂಡ್‌ ಸೂಚನೆಯ ಮೇರೆಗೆ ಇದನ್ನು ಬಹಿರಂಗ ಮಾಡಿರಲಿಲ್ಲ. ಇದರ ಬಳಿಕ ಕಾರ್ಯಕರ್ತರ ಆಕ್ರೋಶ ಕೂಡ ಹೆಚ್ಚಾಗಿತ್ತಲ್ಲದೆ, ಕಟೀಲ್‌ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದರು. ಈ ಕುರಿತಂತೆ ಬಳ್ಳಾರಿಯಲ್ಲಿ ಶನಿವಾರ ಹೇಳಿಕೆ ನೀಡಿದ ಕಟೀಲ್‌ ತಾವು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಅವಧಿ ಮುಕ್ತಾಯ ಆಗಿದ್ದರೂ, ವಿಧಾನಸಭೆ ಚುನಾವಣೆ ಹಿನ್ನಲೆ ಹೈಕಮಾಂಡ್‌ ಕಟೀಲ್‌ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿತ್ತು. ಮೂಲಗಳ ಪ್ರಕಾರ ಬಿಜೆಪಿಯಲ್ಲಿ ಮೊದಲಿಗೆ ವಿಪಕ್ಷ ನಾಯಕನ ಆಯ್ಕೆಯಾಗಲಿದ್ದು ಆ ಬಳಿಕವೇ ರಾಜ್ಯಾಧ್ಯಕ್ಷ ಸ್ಥಾನ ತೀರ್ಮಾನವಾಗುವ ಸಾಧ್ಯತೆ ಇದೆ.

ವಿದ್ಯುತ್‌ ಬಿಲ್‌ ಕಟ್ಟಬೇಡಿ, ಸಂಪರ್ಕ ಕಡಿತಗೊಳಿಸಿದ್ರೆ ನಾವಿದ್ದೇವೆ: ನಳಿನ್‌ ಕುಮಾರ್‌ ಕಟೀಲ್‌

ನಳೀನ್‌ ಕುಮಾರ್‌ ಕಟೀಲ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲಿಯೇ, ಬಿಜೆಪಿಯಲ್ಲಿ ಈ ಸ್ಥಾನಕ್ಕೆ ಪೈಪೋಟಿಯಾಗಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ಡಾ. ಅಶ್ವಥ್ ನಾರಾಯಣ, ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷದಲ್ಲಿ ಯಾರನ್ನೇ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೂ ನಾವು ಕೆಲಸ ಮಾಡ್ತೇವೆ. ಯಾರಿಗೇ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ ನಾವು ಒಪ್ಪಿಕೊಂಡು ಕೆಲಸ ಮಾಡುತ್ತೇವೆ. ನಾವು ಕನ್ನಡಿಗರು, ಕರ್ನಾಟಕದವರು, ಸಾಕು ಈ ಜಾತಿ ವಿಚಾರ. ಜಾತಿಯ ರಕ್ಷಣೆ ತಗೊಂಡು ಕರ್ಮಕಾಂಡ ಮಾಡಿ ಏನೇನೋ ಮಾಡೊರೋರನ್ನು ನಾವು ನೋಡಿದ್ದೀವಿ‌. ಇನ್ನು ಪಕ್ಷದಲ್ಲಿ ಜವಾಬ್ದಾರಿ ಕೊಟ್ಟರೆ ಮಾಡುತ್ತೇನೆ. ಪಕ್ಷ ಕೊಡೋ ಯಾವುದೇ ಜವಾಬ್ದಾರಿಯನ್ನೂ ನಾನು ವಹಿಸಿಕೊಳ್ಳುತ್ತೇನೆ. ಅದರೊಂದಿಗೆ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಲ್ಲಿ ನಿಭಾಯಿಸೋದಾಗಿ ಅಶ್ವತ್ಥ್‌ನಾರಾಯಣ ತಿಳಿಸಿದ್ದಾರೆ.