ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಂದ ನಾವು ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಪಡೆಯಲಿವೆ ಎಂದು ಅಂದುಕೊಂಡಿದ್ದಾರೆ. ಆದರೆ ನಾಲ್ಕೈದು ದಿನದಲ್ಲಿ ಕಾಂಗ್ರೆಸ್‌ಗೆ ನಿರಾಸೆಯಾಗುವುದು ಖಚಿತ ಎಂದು ಭವಿಷ್ಯ ನುಡಿದ ವಿಜಯೇಂದ್ರ
ಕಲಬುರಗಿ(ಮೇ.29): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಸರ್ಕಾರದ ಒಂದು ವರ್ಷದ ಹನಿಮೂನ್ ಸಮಯ ಮುಗಿದಿದೆ. ಈ ಸರ್ಕಾರದ ಸಾಧನೆ ಶೂನ್ಯ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ಸಚಿವರು, ಯಾವುದೇ ಗುದ್ದಲಿ ಪೂಜೆ, ಶಂಕುಸ್ಥಾಪನೆ ಮಾಡಿಲ್ಲ. ಭೀಕರ ಬರದಿಂದ ತತ್ತರಿಸಿದ ರಾಜ್ಯಕ್ಕೆ ಅನುದಾನ ಕೊಟ್ಟಿಲ್ಲವೆಂದು ಆಗ ಬೊಬ್ಬೆ ಹೊಡೆದರು, ಆದರೆ ಕೇಂದ್ರ ಅನುದಾನ ನೀಡಿದರೂ ರೈತರಿಗೆ ಹಂಚಿಕೆ ಆಗುತ್ತಿಲ್ಲ. ಸಕಾಲಕ್ಕೆ ಮಳೆ ಬಿಳದೆ ಬಿತ್ತನೆ ಮಾಡದೆ ಇರೋ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಈ ಸರ್ಕಾರಕ್ಕೆ ರೈತರ ಪರ ಕಾಳಜಿ ಇಲ್ಲ ಅನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.
ಹತ್ತೇ ನಿಮಿಷದಲ್ಲಿ ಸಹಾಯಕ್ಕೆ ಬಂದ ವಿಜಯೇಂದ್ರಗೆ ಧನ್ಯವಾದ ತಿಳಿಸಿದ ಹಿಂದೂ ಕಾರ್ಯಕರ್ತ!
ಕಾನೂನು ಸುವ್ಯವಸ್ಥೆ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಪೊಲೀಸರಿಗೆ ಪೊಲೀಸರೇ ರಕ್ಷೆ ಕೊಡುವ ಪರಿಸ್ಥಿತಿ ಬಂದಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಮಟ್ಕಾಗೆ ಸಂಬಂಧಪಟ್ಟಿದ್ದು. ಅರೆಸ್ಟ್ ಆದ ವ್ಯಕ್ತಿ ಮೃತಪಟ್ಟಿದ್ದಾನೆ. ಸಾವಿರಾರು ಜನ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದೆಲ್ಲ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ ಅನ್ನುವುದು ಗೊತ್ತಾಗುತ್ತದೆ. ಈ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ, ಇಲ್ಲವೋ ಅನ್ನೋ ಅನುಮಾನ ಜನರಿಗೆ ಕಾಡುತ್ತಿದೆ ಎಂದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರು. ಹಗರಣ ನಡೆದಿದೆ. ಒಬ್ಬ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಲ್ಲಿ ಹೋಯಿತು ನಿಮ್ಮ ಭ್ರಷ್ಟಚಾರ ತಡೆ ನಿಲುವು. ಭ್ರಷ್ಟಾಚಾರದ ಪಿತಾಮಹ ಅಂದರೆ ಅದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು.
ಆತ್ಮಹತ್ಯೆ ಮಾಡಿಕೊಂಡಾತ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಕೆಲ ಉನ್ನತ ಅಧಿಕಾರಿಗಳ ಹೆಸರು ಹೇಳಲಾಗಿದೆ. ಈ ಘಟನೆ ಸಂಬಂಧ ಮಂತ್ರಿ ನಾಗೇಂದ್ರರನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು. ಹಾಲಿ ಹೈಕೋರ್ಟ್ ಜಡ್ಜ್‌ರಿಂದ ಉನ್ನತಮಟ್ಟದ ತನಿಖೆ ನಡೆಸಲೇಬೇಕು. ಮಂತ್ರಿ ನಾಗೇಂದ್ರರನ್ನು ಕೈಬಿಡದಿದ್ದರೆ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಭ್ರಷ್ಟಾಚಾರ ಕಾಂಗ್ರೆಸ್‌ನ ಪಾಪದ ಕೂಸು. ಇದನ್ನು ನೋಡಿ ಕೈಕಟ್ಟಿ ಸುಮ್ಮನೆ ಕೂರಲು ಆಗಲ್ಲ ಎಂದರು.
ಬಿಜೆಪಿ ಗೆದ್ದರೆ ಅದಕ್ಕೆ ಇವಿಎಂ ದೋಷ ಕಾರಣ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದರು. ಚುನಾವಣೆ ಫಲಿತಾಂಶ ಬಂದಮೇಲೆ ಮತ್ತೆ ಈ ಹೇಳಿಕೆ ಪುನರಾರ್ವತನೆ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೆ ಇದೇ ಮಾತು ಹೇಳುತ್ತಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ನಾವು ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಪಡೆಯಲಿವೆ ಎಂದು ಅಂದುಕೊಂಡಿದ್ದಾರೆ. ಆದರೆ ನಾಲ್ಕೈದು ದಿನದಲ್ಲಿ ಕಾಂಗ್ರೆಸ್‌ಗೆ ನಿರಾಸೆಯಾಗುವುದು ಖಚಿತ ಎಂದು ವಿಜಯೇಂದ್ರ ಭವಿಷ್ಯ ನುಡಿದರು.