ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನದ ಬಗ್ಗೆ ವರದಿ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ದೆಹಲಿಗೆ ತೆರಳಲಿದ್ದಾರೆ. ಈ ಗಂಭೀರ ಬೆಳವಣಿಗೆಯ ಕುರಿತು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಹೈಕಮಾಂಡ್ ನಾಯಕರಿಗೆ ವಿವರಣೆ ನೀಡಲಿದ್ದಾರೆ.

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.

ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಸೇರಿ ಇತರ ವರಿಷ್ಠರನ್ನು ಭೇಟಿ ಮಾಡಿ ಅಡ್ಡಮತದಾನದ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ.

ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ

ಸೋಮವಾರ ವಿಜಯೇಂದ್ರ ಮತ್ತು ಅಶೋಕ್ ಅವರು ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣಿಸಲಿದ್ದಾರೆ. ಮಂಗಳವಾರ ಇಡೀ ದಿನ ವಿವಿಧ ನಾಯಕರ ಭೇಟಿ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಲಿಖಿತ ವಿವರಣೆಯನ್ನು ಸಿದ್ಧಪಡಿಸಿಕೊಂಡಿದ್ದು, ವರಿಷ್ಠರಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಡ್ಡಮತದಾನ ಬೆಳವಣಿಗೆಯನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದು, ಯಾರು ಪಕ್ಷದ ಬೇಲಿ ಹಾರಿದ್ದಾರೋ ಭವಿಷ್ಯದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂಬ ನಿಲುವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ವೇಳೆ ಎಲ್ಲ ಮಾಹಿತಿಯೊಂದಿಗೆ ಆಗಮಿಸುವಂತೆ ಸೂಚಿಸಿದ್ದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಶಾಸಕರ ದ್ರೋಹ ನಿಜ: ಅಶೋಕ್‌

ಬೆಳಗಾವಿ: ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ, ವಂಚನೆ ಬಗೆದಿರುವುದು ನಿಜ. ಆದರೆ, ಯಾವ ಶಾಸಕ ದ್ರೋಹ ಮಾಡಿದ್ದಾರೆ ಗೊತ್ತಿಲ್ಲ. ಈ ವಿಚಾರವಾಗಿ ಚರ್ಚಿಸಲು ನಮ್ಮ ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಹಿನ್ನೆಲೆ ಆಣೆ-ಪ್ರಮಾಣ ಮಾಡಿಸಲು ಬಿಜೆಪಿ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವ ಸಂಬಂಧ ವಿಜಯೇಂದ್ರ ನನಗೆ ಫೋನ್ ಮಾಡಿದ್ದರು. ನಾಳೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ.‌ ವಿಜಯೇಂದ್ರ ಮತ್ತು ಹಿರಿಯರ ಜೊತೆಗೆ ಚರ್ಚಿಸಿದ ಬಳಿಕ ಸ್ಪಷ್ಟ ತೀರ್ಮಾನ ಮಾಡುತ್ತೇವೆ ಎಂದರು. 

ಈ ಬಗ್ಗೆ ಚರ್ಚಿಸಲು ಹೈಕಮಾಂಡ್‌ ನಾಯಕರ ಭೇಟಿಗೆ ಸಮಯ ಕೇಳಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ ನಡೆಸಿದ್ದನ್ನು, ಹಣದ ಹೊಳೆ ಹರಿಸಿರುವುದನ್ನು ತಿಳಿಸುತ್ತೇವೆ. ಕೇಂದ್ರ ನಾಯಕರ ಜೊತೆಗೆ ಗಂಭೀರವಾಗಿ ಚರ್ಚೆ ಮಾಡಿ ಕ್ರಮಕ್ಕೆ ಆಗ್ರಹಿಸುತ್ತೇವೆ. ಅಡ್ಡ ಮತದಾನ ಮಾಡಿದವರು ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೆ ಮಾಡುತ್ತೇವೆ ಎಂದರು.

ಅಡ್ಡಮತದಾನ ಮಾಡಿದವರಿಗೆ ನಾಚಿಕೆ ಆಗಬೇಕು: ಸೋಮಣ್ಣ

ತುಮಕೂರು: ರಾಜ್ಯದಲ್ಲಿ ಅಡ್ಡ ಮತದಾನ ಆಗಿರುವ ವಿಚಾರದ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ವಿ.‌ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ನಾನು ಯಾರ ಜೊತೆಯೂ ಮಾತನಾಡಿಲ್ಲ. ರಾಷ್ಟ್ರಕ್ಕೆ ಬಿಜೆಪಿಯ ಕೊಡುಗೆ ಬಹಳಷ್ಟಿರುವುದು ಇಡೀ ವಿಶ್ವಕ್ಕೆ ಗೊತ್ತು. ಕರ್ನಾಟಕದಲ್ಲಿ ಇದ್ದ ನಮ್ಮ ಶಾಸಕರು ಈ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಅಡ್ಡ ಮತದಾನ ಮಾಡಿರುವುದು ಪಾಪದ ಕೆಲಸ. ಆ ಪಾಪದ ಕೆಲಸವನ್ನು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಇದನ್ನು ವರಿಷ್ಠರು ಗಮನಿಸುತ್ತಾರೆ. ನರೇಂದ್ರ ಮೋದಿ ನಾಯಕತ್ವವನ್ನು ಇಡೀ ವಿಶ್ವ ಆನಂದ ಪಡುವಾಗ ಇಂತಹ ಒಂದು ಹೇಯ ತೀರ್ಮಾನದಿಂದ ನಿಮಗೆ ನಾಚಿಕೆಯಾಗಬೇಕು ಎಂದರು.

ಪಕ್ಷ ತಾಯಿಯಿದ್ದಂತೆ. ಆ ತಾಯಿಯ ಗೌರವವನ್ನು ಅಸ್ಥಿರಗೊಳಿಸಿದರೆ ಜನ ಮತ್ತು ಪಕ್ಷ ಕ್ಷಮಿಸುವುದಿಲ್ಲ. ಮೈತ್ರಿಗೆ ಇದರಿಂದ ಯಾವುದೇ ಭಂಗ ಆಗುವುದಿಲ್ಲ.‌ ನಾಯಕತ್ವ ವಿಫಲ ಮತ್ತೊಂದು ಮಗದೊಂದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ರಾಜ್ಯಾಧ್ಯಕ್ಷ ಸ್ಥಾನದ ರೇಸಲ್ಲಿ ನೀವು ಇದ್ದೀರಾ ಎಂಬ ಪ್ರಶ್ನೆಗೆ ನಾನು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ. ಅದು ಭಗವಂತನ ಇಚ್ಛೆ. ಹೈಕಮಾಂಡ್ ತೀರ್ಮಾನ ಎಂದು ನಕ್ಕು ಸುಮ್ಮನಾದರು.