ನೀರಾವರಿ ಯೋಜನೆಗಳಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರ ಸಚಿವರು ಮತ್ತು ಎಲ್ಲ ಸಂಸದರು ಹೋರಾಟ ಮಾಡಬೇಕು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಬೆಂಗಳೂರು (ಜು.27): ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಅಧಿಕಾರಕ್ಕೆ ಬರಲು ಕರ್ನಾಟಕದ ಪಾತ್ರ ಮಹತ್ವದ್ದು. ಹೀಗಾಗಿ ನೀರಾವರಿ ಯೋಜನೆಗಳಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರ ಸಚಿವರು ಮತ್ತು ಎಲ್ಲ ಸಂಸದರು ಹೋರಾಟ ಮಾಡಬೇಕು ಎಂದು ಬಮುಲ್ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಗೋವಾ ಮತ್ತು ಕರ್ನಾಟಕ ನಡುವಿನ ಸಂಬಂಧ ಅನ್ಯೋನ್ಯವಾಗಿದೆ. ಆದರೆ, ಮಹದಾಯಿ ವಿಚಾರವಾಗಿ ಗೋವಾ ಹಲವು ವರ್ಷಗಳಿಂದ ಇಲ್ಲ ಸಲ್ಲದ ಕ್ಯಾತೆ ತೆಗೆಯುತ್ತಿದೆ. ಅದರಿಂದ ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಯೋಜನೆಗೆ ಸಮಸ್ಯೆಯಾಗುತ್ತಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಗೋವಾ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಳಸಿಕೊಂಡು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರ ರಾಜ್ಯಕ್ಕಾಗುತ್ತಿರುವ ಅನ್ಯಾಯ ಸರಿಪಡಿಸಲು ಮಹದಾಯಿ ಜತೆಗೆ ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಅಲ್ಲದೆ, ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಅಧಿಕಾರಕ್ಕೆ ಬರಲು ಕರ್ನಾಟಕ ಜನರ ಕೊಡುಗೆ ಹೆಚ್ಚಿದೆ. ರಾಜ್ಯದ ಜನ ಬಿಜೆಪಿಗೆ 20 ಸ್ಥಾನಗಳನ್ನು ನೀಡಿದ್ದಾರೆ. ಆದರೂ, ನಮ್ಮ ಸಂಸದರು, ಕೇಂದ್ರ ಸಚಿವರು ಈ ವಿಚಾರವಾಗಿ ಚಕಾರ ಎತ್ತುತ್ತಿಲ್ಲ. ಕನ್ನಡಿಗರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿಲ್ಲ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ರಾಜ್ಯಕ್ಕೆ ಮತ್ತು ರೈತರಿಗೆ ಅನುಕೂಲವಾಗಲಿದೆ. ಹೀಗಾಗಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಪ್ರಹ್ಲಾದ್ ಜೋಶಿ ಅವರು 10 ವರ್ಷಗಳಿಂದ ಕೇಂದ್ರ ಸಚಿವರಾಗಿದ್ದಾರೆ. ಮಹದಾಯಿ ಯೋಜನೆಯಿಂದ ಅವರ ಕ್ಷೇತ್ರದ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಅವರೇ ತಮ್ಮ ಕ್ಷೇತ್ರದ ಜನರಿಗೆ ಏನು ಮಾಡಲಿಲ್ಲವಾದರೆ ಹೇಗೆ? ಮಹದಾಯಿ ಕುರಿತು ಅವರಿಗೆ ಇಚ್ಛಾಶಕ್ತಿಯಿದ್ದರೆ ಜಲಶಕ್ತಿ ಹಾಗೂ ಅರಣ್ಯ ಸಚಿವರಿಗೆ ಹೇಳಿ ಅನುಮತಿ ಕೊಡಿಸಲಿ. ಆದರೆ, ಅವರಿಗೆ ಕರ್ನಾಟಕ ಹಿತಬೇಕಿಲ್ಲ. ಆದರೂ, ಕರ್ನಾಟಕದ ಜನ ಅವರನ್ನೇ ಬಯಸಿದರೆ ಏನೂ ಮಾಡಲಾಗದು ಎಂದು ಅಸಮಧಾನ ವ್ಯಕ್ತಪಡಿಸಿದರು.
ಮತಗಳ್ಳತನದ ಹೇಳಿಕೆಗೆ ನನ್ನ ಸಹಮತವಿದೆ: ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಚುನಾವಣಾ ಮತಪಟ್ಟಿಯಲ್ಲಿ ಗೊಂದಲ ಇದ್ದುದನ್ನು ನೋಡಿದ್ದೇವೆ. ನಗರ ಪ್ರದೇಶಗಳಲ್ಲಿ ಅನೇಕ ವ್ಯತ್ಯಾಸಗಳು, ಗೊಂದಗಲಗಳಿದ್ದವು. ಈಗಾಗಲೇ ಆ ವಿಚಾರವಾಗಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದರು.
