Asianet Suvarna News Asianet Suvarna News

ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ

  • ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ
  • ಕೆಡಿಪಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಆರೋಪ
  • ಬಿಎಸ್‌ಎಸ್‌ಕೆಗೆ 165, ಎಂಜಿಎಸ್‌ಎಸ್‌ಕೆಗೆ 289, ನಾರಂಜಾಗೆ 660ಕೋಟಿ
  • ಬಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಭಾರಿ ಅಕ್ರಮ: ಶಾಸಕ ಪಾಟೀಲ್‌ ಆರೋಪ
Huge loan  to factories DCC on the brink of bankruptcy, worries rav
Author
First Published Nov 8, 2022, 12:47 PM IST

ಬೀದರ್‌ ನ.8 : ಜಿಲ್ಲೆಯ ಕಾರ್ಖಾನೆಗಳಿಗೆ ಸಾಲ ನೀಡಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅತಂಕದಲ್ಲಿದೆ. ರು.2200 ಕೋಟಿ ಠೇವಣಿ ಹೊಂದಿದ್ದರೂ ಸುಮಾರು 12 ಸಾವಿರ ಕೋಟಿ ರು. ಮರುಪಾವತಿಸಲು ಆಗದಂತಹ ಸಾಲ ನೀಡಿದ ಸುಳಿಗೆ ಸಿಲುಕಿದಂತಿದ್ದು, ನೀರು ಗುಳ್ಳೆಯಂತೆ ಯಾವುದೇ ಸಂದರ್ಭದಲ್ಲಿ ಒಡೆದುಹೋಗುವ ದುಸ್ಥಿತಿ ಕಾರಣರಾದವರಾರ‍ಯರು ಎಂಬುವದರ ತನಿಖೆಯಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.

ಮೈಷುಗರ್‌ನಂತೆಯೇ ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಮುಂದಾಗಿ: ಈಶ್ವರ ಖಂಡ್ರೆ

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ ಈಗಾಗಲೇ ಬಿಎಸ್‌ಎಸ್‌ಕೆ ಕಾರ್ಖಾನೆಗೆ ರು.165 ಕೋಟಿ, ಎಂಜಿಎಸ್‌ಎಸ್‌ಕೆ ಕಾರ್ಖಾನೆಗೆ ರು.289 ಕೋಟಿ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ರು.660 ಕೋಟಿ ಸಾಲ ನೀಡಿ ಬಾಕಿಯಿದೆ ಎಂದು ವಿವರ ನೀಡಿದರು.

ಈ ಕಾರ್ಖಾನೆಗಳು ಇಷ್ಟೊಂದು ಪ್ರಮಾಣದ ಸಾಲ ಬಾಕಿ ಮರುಪಾವತಿಸುತ್ತವೆಯೇ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಬಿಎಸ್‌ಎಸ್‌ಕೆ ಕಾರ್ಖಾನೆ ಸಂಪೂರ್ಣ ಮುಚ್ಚಿ ಹೋಗಿದೆ. ಇನ್ನು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ನೀಡಿರುವ ಭಾರಿ ಪ್ರಮಾಣದ ಸಾಲ ಮರುಪಾವತಿಯ ಬಗ್ಗೆ ಆತಂಕವಿದೆ. ಇದು ಕೇವಲ ಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲ ಆದರೆ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಅಪೆಕ್ಸ್‌ ಸೇರಿದಂತೆ ಇತರೆಡೆಯಿಂದ ಪಡೆದ ಸಾಲದ ಹೊರೆ ಅತ್ಯಂತ ಆತಂಕ ಸೃಷ್ಟಿಸುತ್ತಿವೆ ಎಂದರು.

ಕಾರ್ಖಾನೆಗಳಿಗೆ ಸಾವಿರಾರು ಕೋಟಿ ರು. ಸಾಲ ನೀಡಿ ಎನ್‌ಪಿಎ ಎದುರಿಸುತ್ತಿರುವ ಡಿಸಿಸಿ ಬ್ಯಾಂಕ್‌ನಲ್ಲಿ ರೈತರು, ಉದ್ಯಮಿಗಳ ಠೇವಣಿ ಇದೆ ಅದರ ಸ್ಥಿತಿ ಏನು ಎಂದ ಅವರು, ಈ ಎಲ್ಲ ಕಾರ್ಖಾನೆಗಳ ಲೋಪಗಳ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿರುವ ರೈತರ ಜೀವನಾಡಿ ಆಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 500 ಜನ ಕಾರ್ಮಿಕರ ಸುಮಾರು ರು.60 ಕೋಟಿ ಸಂಬಳ, ಪಿಎಫ್‌, ಇಎಸ್‌ಐ ಭರಿಸಿಲ್ಲ. ಅದಾಗೂ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಸಕ್ಕರೆ ಹಣವನ್ನು ಲೂಟಿ ಹೊಡೆಯಲಾಗಿದೆ. ಬಿಎಸ್‌ಎಸ್‌ಕೆ ಕಾರ್ಖಾನೆ ಯಲ್ಲಿ ರು.9.81ಕೋಟಿ ಅಕ್ರಮ ಆಗಿರುವದು ಸಾಬೀತಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ ಎಂದರು.

ಶಾಸಕ ರಾಜಶೇಖರ ಪಾಟೀಲ್‌ ಮಾತನಾಡಿ, ಒಂದು ಹೊಸ ಕಾರ್ಖಾನೆ ನಿರ್ಮಾಣಕ್ಕೆ ಗರಿಷ್ಟಅಂದರೂ 300-400ಕೋಟಿ ರು. ವೆಚ್ಚವಾಗುತ್ತದೆ ಆದರೆ, ಇಲ್ಲಿ 300 ರಿಂದ 700 ಕೋಟಿ ರು.ವರೆಗೆ ಚಾಲ್ತಿಯಲ್ಲಿರುವ ಹಳೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿದ್ದು, ಹೇಗೆ ಮತ್ತು ಮರುಪಾವತಿಯ ಯಾವ ಗ್ಯಾರಂಟಿ ಮೇಲೆ ಎಂದು ಪ್ರಶ್ನಿಸಿದರು.

ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮವಹಿಸುವುದಾಗಿ ಈ ಹಿಂದೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಮಂತ್ರಿ ಅಮಿತ್‌ ಶಾ ಭರವಸೆ ನೀಡಿ ಹೋಗಿದ್ದು ಮರೆತುಹೋಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗಳಲ್ಲಿರುವ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ ಈ ವರ್ಷವಾದರೂ ಕಾರ್ಖಾನೆ ಆರಂಭಿಸುತ್ತದೆಯೇ ಎಂದು ಪ್ರಶ್ನಿಸಿದರು.

ನನ್ನ ಹಾಗೂ ನನ್ನ ಸಹೋದರರ ಹೆಸರನ್ನು ಅಕ್ರಮದ ಆರೋಪದ ಸಾಲಿನಲ್ಲಿ ಬಿಜೆಪಿಯವರು ತಮ್ಮ ಭಾಷಣದಲ್ಲಿ ಸೇರಿಸುತ್ತಿದ್ದಾರೆ ಇದು ತಪ್ಪು, ಸರ್ಕಾರ ತಕ್ಷಣವೇ ನಿವೃತ್ತ ನ್ಯಾಯಾಧೀಶರ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿತರಿಗೆ ಗಲ್ಲು ಶಿಕ್ಷೆ ವಿಧಿಸಿದರೂ ಸೈ ಎಂದು ರಾಜಶೇಖರ ಪಾಟೀಲ್‌ ಗರಂ ಆದರು.

ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್‌ ಹೋರಾಟ: ಈಶ್ವರ ಖಂಡ್ರೆ

ಈ ಕುರಿತಂತೆ ಪ್ರತಿಕ್ರಿಯಿಸಿದ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ, ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತಂತೆ ಕಾರ್ಖಾನೆ ಆಡಳಿತ ಮಂಡಳಿ ನೀಡಿರುವ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಕ್ರಮವಹಿಸಲಾಗುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆರಂಭ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ವಿಧಾನ ಪರಿಷತ್‌ ಸಭಾಪತಿ ರಘುನಾಥರಾವ್‌ ಮಲ್ಕಾಪೂರೆ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್‌ಪಿ ಡೆಕ್ಕ ಕಿಶೋರ ಬಾಬು, ಜಿಪಂ ಸಿಇಒ ಇದ್ದರು.

Follow Us:
Download App:
  • android
  • ios