Asianet Suvarna News Asianet Suvarna News

ಕಾಂಗ್ರೆಸ್‌ PayCMಗೆ ಬಿಜೆಪಿ Pay2 Congress Madam ಪ್ರತ್ಯುತ್ತರ; ಕ್ರಿಯೇಟಿವ್‌ ಆಗಿ ಕಿತ್ತಾಡ್ತಿದ್ದಾರೆ ರಾಜ್ಯ ನಾಯಕರು!

PayCM vs Pay2 Congress Madam: ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಕಿತ್ತಾಟ ದಿನೇ ದಿನೇ ಹೆಚ್ಚುತ್ತಿದೆ. ಬಿಜೆಪಿ ಭ್ರಷ್ಟಾಚಾರ ಆರೋಪಗಳನ್ನು ಖಂಡಿಸಿ ಕಾಂಗ್ರೆಸ್‌ ಪೇ ಸಿಎಂ ಎಂಬ ಮೀಮ್‌ ಮಾಡಿ ಎಲ್ಲಾ ಕಡೆ ಹಾಕಿತ್ತು. ಇದೀಗ ಬಿಜೆಪಿ ಪೇ ಸಿಎಂ ಎಂದರೆ ಪೇ ಟು ಕಾಂಗ್ರೆಸ್‌ ಮೇಡಮ್‌ ಎಂದು ಹೊಸ ಮೀಮ್‌ ಬಿಡುಗಡೆ ಮಾಡಿದ್ಧಾರೆ. 

BJP releases Pay 2 congress madam against congress's paycm meme
Author
First Published Sep 23, 2022, 1:37 PM IST

ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಒಬ್ಬರ ಮೇಲೊಬ್ಬರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಸದನದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಿಜೆಪಿಯ 40% ಭ್ರಷ್ಟಾಚಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವುದಲ್ಲದೇ ಕೆಲ ಪುರಾವೆಗಳನ್ನೂ ಸದನದ ಮುಂದಿಟ್ಟು ಚರ್ಚೆಗೆ ಅವಕಾಶ ಕೋರುತ್ತಿವೆ. ಆದರೆ ಇತ್ತ ಬಿಜೆಪಿ ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪಿಸುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಮೂರೂ ಪ್ರಮುಖ ಪಕ್ಷಗಳು ಭ್ರಷ್ಟಾಚಾರವನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ಮೇಲೆ ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಈ ಎಲ್ಲಾ ಆರೋಪಗಳ ಕುರಿತು ಪೇಸಿಎಂ ಎಂದು ಕಾಂಗ್ರೆಸ್‌ ಮೀಮ್‌ ಮಾಡಿತ್ತು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಇಂದು ಪೇ ಟು ಕಾಂಗ್ರೆಸ್‌ ಮೇಡಂ ಎಂಬ ಹೊಸ ಮೀಮ್‌ ಆರಂಭಿಸಿದೆ. 

ಇಂದು ಕೂಡ ಬಿಜೆಪಿ ಕಾಂಗ್ರೆಸ್ ಜಟಾಪಟಿ ಮುಂದುವರೆದಿದ್ದು, PAY CM ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ ಎಂದು ಬಿಜೆಪಿ ಹೀಯಾಳಿಸಿದೆ. KCC ಅಂದ್ರೆ ಕಂಗಾಲ್ ಕಾಂಗ್ರೆಸ್ ಕಂಪನಿ ಅಂತ ಪೋಸ್ಟರ್ ಬಿಡುಗಡೆ ಮಾಡಿದೆ. ಬರ್ನಾಲ್ ಬ್ರದರ್ಸ್ ಸಹಯೋಗದಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್, ರಾಮಲಿಂಗಾರೆಡ್ಡಿ ಹೆಸರಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಈ ಮೀಮ್‌ ಅನ್ನು ವೈರಲ್‌ ಮಾಡುತ್ತಿದೆ. ಈ ಹಿಂದೆ ನೇರಾನೇರ ಮಾತುಗಳಿಂದ ಒಬ್ಬರನ್ನೊಬ್ಬರು ಖಂಡಿಸುತ್ತಿದ್ದ ಪಕ್ಷಗಳು ಇದೀಗ ಕ್ರಿಯೇಟಿವ್‌ ಆಗಿ ಮೀಮ್‌ಗಿಳಿದಿವೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್‌ ಮತ್ತು ಬಿಜೆಪಿ ಐಟಿ ಸೆಲ್‌ಗಳು. ಸುನೀಲ್‌ ಕನಗೋಳು ತಂಡ ಕೆಲ ತಿಂಗಳುಗಳಿಂದ ಕಾಂಗ್ರೆಸ್‌ನ ಚುನಾವಣಾ ನೇತೃತ್ವದ ಚುಕ್ಕಾಣಿ ಹಿಡಿದಿದೆ. ಇತ್ತ ಬಿಜೆಪಿ ಮೊದಲಿನಿಂದಲೇ ಉತ್ತಮ ಐಟಿ ತಂಡ ಹೊಂದಿದೆ. 

ಪೇಸಿಎಂ ಪೋಸ್ಟರ್‌ ಅಂಟಿಸಿದ್ದಕ್ಕೆ ಬಂಧನ:

ಪೇಸಿಎಂ ಪೋಸ್ಟರ್‌ ಅಂಟಿಸಿದ್ದಕ್ಕಾಗಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಬಿ.ಆರ್‌. ನಾಯ್ಡು ಸೇರಿದಂತೆ ಪಕ್ಷದ ಕಾರ್ಯಕರ್ತರ ಬಂಧನಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ಆಕ್ರೋಶಗೊಂಡಿದ್ದಾರೆ. ‘ಇದಕ್ಕೆ ಪ್ರತಿಯಾಗಿ ಶುಕ್ರವಾರ ಸರ್ಕಾರಿ ಕಟ್ಟಡಗಳ ಮೇಲೆಯೇ ‘ಪೇ-ಸಿಎಂ’ ಪೋಸ್ಟರ್‌ ಅಂಟಿಸುತ್ತೇವೆ. ತಾಕತ್‌ ಇದ್ದರೆ ನಮ್ಮನ್ನು ಬಂಧಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಶುಕ್ರವಾರ ಪಕ್ಷದ ಶಾಸಕರು, ಪರಿಷತ್‌ ಸದಸ್ಯರೊಂದಿಗೆ ನಾವೆಲ್ಲರೂ ಸೇರಿ ಸರ್ಕಾರಿ ಕಚೇರಿಗಳ ಮೇಲೆಯೇ ‘ಪೇ-ಸಿಎಂ’ ಪೋಸ್ಟರ್‌ ಅಂಟಿಸುತ್ತೇವೆ’ ಎಂದು ಎಚ್ಚರಿಸಿದರು.

‘ಮುಖ್ಯಮಂತ್ರಿಗಳು ಪೋಸ್ಟರ್‌ ವಿಚಾರಕ್ಕೆ ಇಷ್ಟುತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಯಾಕೆ? ರಾಜಕೀಯಲ್ಲಿ ಇರುವವರನ್ನು ಜನ ಟೀಕಿಸುವುದು, ಪ್ರಶ್ನಿಸುವುದು ಸಹಜ. ಇದು ಅಧಿಕಾರ ದುರ್ಬಳಕೆ, ಭಯ ಹಾಗೂ ದ್ವೇಷ ರಾಜಕಾರಣ ಎಂದರು.  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಪೊಲೀಸರ ಮೂಲಕ ಬಾಯಿ ಮುಚ್ಚಿಸಲು ಎಷ್ಟುಮಂದಿಯನ್ನು ಜೈಲಿಗೆ ಹಾಕುತ್ತೀರಿ? ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪಕ್ಷದ ಕಾರ್ಯಕರ್ತರ ಜತೆ ನಾನೇ ಪೋಸ್ಟರ್‌ ಅಂಟಿಸುತ್ತೇನೆ. ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ’ ಎಂದು ಸವಾಲು ಹಾಕಿದರು.

Pay CM Posters: ಪೇ ಸಿಎಂ ಪೋಸ್ಟರ್‌ ತನಿಖೆಗೆ ಪೊಲೀಸ್‌ ಆಯುಕ್ತ ಆದೇಶ

‘ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಿದ್ದು ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧವಾಗಿದೆ. ಪೊಲೀಸರ ಮೂಲಕ ಎಷ್ಟುಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟುಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ? ಜನ ಬಂಡೆದಿದ್ದಾರೆ ಎಚ್ಚರವಾಗಿರಿ’ ಎಂದು ಕಿಡಿ ಕಾರಿದರು. ‘ಏನು ಮುಖ್ಯಮಂತ್ರಿಗಳೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಈಗ ಯಾರೋ ನಿಮಗೆ ಚುಚ್ಚಿದಕ್ಕೆ ನೋವಾಯ್ತಾ? ನಿಮ್ಮ ಭ್ರಷ್ಟಾಚಾರ ದಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರನ್ನು ಬಂಧಿಸಿದ್ದಾರೆ. ನನ್ನ ಮತ್ತು ಡಿ.ಕೆ.ಶಿವಕುಮಾರ್‌ ಬಗ್ಗೆಯೂ ಪೋಸ್ಟರ್‌ ಅಂಟಿಸಿದ್ದಾರಲ್ಲಾ? ಅದರ ಬಗ್ಗೆ ಯಾಕೆ ಮೌನವಾಗಿದ್ದೀರಿ? ಪೊಲೀಸರ ಕಣ್ಣು ಈ ವಿಚಾರದಲ್ಲಿ ಯಾಕೆ ಕುರುಡಾಗಿದೆ’ ಎಂದು ವಾಗ್ದಾಳಿ ನಡೆಸಿದರು.

Pay CM Posters: ಕಾಂಗ್ರೆಸ್‌, ಬಿಜೆಪಿ ಪೋಸ್ಟರ್‌ ಫೈಟ್‌: ಪೇ ಸಿಎಂಗೆ ಕಮಲ ಪಡೆ ಕೌಂಟರ್

‘ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧ ಪ್ರಕಟಿಸಿರುವ ಹೇಳಿಕೆಗಳು, ವಿರೂಪಗೊಳಿಸಿದ ಪೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ. ನಾನು ಅಧಿಕಾರದಲ್ಲಿದ್ದಾಗಲೇ ಅಂತಹವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟಗೌರವ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ’ ಎಂದು ಟೀಕಿಸಿದರು.

Follow Us:
Download App:
  • android
  • ios