ಗ್ಯಾರಂಟಿ ಯೋಜನೆಗಳ ಜಾರಿಗಾಗಿ 4ರಂದು ಇಡೀ ದಿನ ಬಿಜೆಪಿ ಧರಣಿ: ಬಿಎಸ್‌ವೈ
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಇಡೀ ದಿನ ಬಿಜೆಪಿ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಬೆಂಗಳೂರು (ಜು.01): ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಇಡೀ ದಿನ ಬಿಜೆಪಿ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಜತೆಗೆ, ಬಿಜೆಪಿ ಶಾಸಕರು ಸದನದ ಒಳಗೂ ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನರಿಗೆ ಭರವಸೆ ಕೊಟ್ಟಂತೆ 10 ಕೆ.ಜಿ. ಅಕ್ಕಿ ಕೊಡಬೇಕು. ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ, ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ 1,500 ರು. ಕೊಡಬೇಕು, 200 ಯುನಿಟ್ ವಿದ್ಯುತ್ ಕೊಡಲೇಬೇಕು ಎಂದು ಆಗ್ರಹಿಸಿದರು. ಅವರೇ ಭರವಸೆ ನೀಡಿದಂತೆ ಎಲ್ಲ ಮಹಿಳೆಯರಿಗೆ 2 ಸಾವಿರ ರು. ಕೊಡಬೇಕು. ಕರೆಂಟ್ ಬಿಲ್ ತೀವ್ರವಾಗಿ ಹೆಚ್ಚಾಗಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ
ಬಿಜೆಪಿ ಆಂತರಿಕ ಕಿತ್ತಾಟ ತೀವ್ರ: ರಾಜ್ಯ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹ ಇನ್ನಷ್ಟುಬಿರುಸುಗೊಂಡಿದೆ. ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರೆ, ವಿಜಯಪುರ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ವಿಜಯಪುರ ನಗರ ಶಾಸಕರೇ ಕಾರಣ ಎಂದು ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರೆತ್ತದೆ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರವಷ್ಟೇ ರೇಣುಕಾಚಾರ್ಯ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದರ ಜತೆಗೆ, ಒಳಮೀಸಲಾತಿ ಜಾರಿ, ಶೆಟ್ಟರ್, ಈಶ್ವರಪ್ಪರಂಥ ಹಿರಿಯರಿಗೆ ಟಿಕೆಟ್ ತಪ್ಪಿಸಿದ್ದು ಸೇರಿ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಪಕ್ಷದ ಸೋಲಿನ ಕುರಿತು ವಿಮರ್ಶೆ ಮಾಡಿದ್ದರು. ಇದೀಗ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ತಿರುಗಿ ಬಿದ್ದಿರುವ ರೇಣುಕಾಚಾರ್ಯ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದ ಅವರು ವೀರಶೈವ ಲಿಂಗಾಯತ, ಒಕ್ಕಲಿಗ, ಹಾಲುಮತ, ಎಸ್ಸಿ, ಎಸ್ಟಿಸೇರಿ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವವರನ್ನು ಮುಂದಿನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಹೇಳಿದರು.
ಹೊನ್ನಾಳಿಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ನಾಯಕರ ಶಿಸ್ತು ಕ್ರಮದ ಎಚ್ಚರಿಕೆಗೂ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷ, ನಾಯಕರ ವಿರುದ್ಧ ಯಾರೇ ಮಾತನಾಡಿದರೂ ಅದು ಅಶಿಸ್ತು. ಆದರೆ ಸೈಕಲ್ ತುಳಿದು ಪಕ್ಷ ಕಟ್ಟಿದ ಯಡಿಯೂರಪ್ಪನಂಥವರ ಪರ ಮಾತನಾಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೀರಾ? ಅದೇ ಅವರ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಯಾಕಿಲ್ಲ? ಕಳೆದ ಕೆಲ ದಿನಗಳಿಂದ ಅತಿರಥ, ಮಹಾರಥರು ಮಾತನಾಡುತ್ತಿದ್ದು, ಅವರ ಮೇಲೇಕೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತಿಲ್ಲ ಎಂದು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದರು.
ಕೋಲಾರ ಜನತೆಗೆ ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರಿಸಿ: ಸುದರ್ಶನ್ ಮನವಿ
ಬೊಮ್ಮಾಯಿ ಅವರನ್ನು ಸಿಎಂ ಮಾಡಿದರೂ ಅವರ ಕೈಕಟ್ಟಿಹಾಕಿದ್ದು, ಎಷ್ಟುಸರಿ ಎಂದು ಇದೇ ವೇಳೆ ಪ್ರಶ್ನಿಸಿದ ರೇಣುಕಾಚಾರ್ಯ, ಯಡಿಯೂರಪ್ಪರನ್ನು ಅಧಿಕಾರದಿಂದ ಇಳಿಸಿದ್ದು ದೊಡ್ಡ ಅಪರಾಧ ಎಂದು ಮುಖಂಡರು, ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ನಾವೆಲ್ಲ ಅಂದೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಯಡಿಯೂರಪ್ಪರನ್ನು ಮುಂದುವರಿಸಲು ಮನವಿ ಮಾಡಿದ್ದೆವು. ಆದರೆ ಅವರು ನಮ್ಮ ಮಾತು ಕೇಳಲಿಲ್ಲ. ಇದರ ಉದ್ದೇಶ ಏನೆಂದು ಜನ ಕೇಳುತ್ತಿದ್ದಾರೆ ಎಂದರು.