ಬಿಜೆಪಿ ಹಿಂದು ಆಕ್ರೋಶ: ಕಾಂಗ್ರೆಸ್ ಪ್ರತಿಕೃತಿ ದಹನ
‘ಹಿಂದೂ ಪದ ಅಶ್ಲೀಲ’ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು (ನ.10): ‘ಹಿಂದೂ ಪದ ಅಶ್ಲೀಲ’ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಾರಕಿಹೊಳಿ ತಕ್ಷಣವೇ ಅವರು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು. ಸತೀಶ್ ಅವರನ್ನು ಪಕ್ಷದಿಂದ ವಜಾ ಮಾಡುವ ಬದ್ಧತೆಯನ್ನು ಕಾಂಗ್ರೆಸ್ ತೋರಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಸತೀಶ್ ವಿರುದ್ಧ ಹಿಂದೂ ಜಾಗರಣಾ ವೇದಿಕೆಯು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಬೆಂಗಳೂರಿನಲ್ಲಿ ವಕೀಲರೊಬ್ಬರು ಕೋರ್ಚ್‌ಗೆ ದೂರು ದಾಖಲಿಸಿದ್ದಾರೆ. ಇನ್ನು ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರು, ಮೈಸೂರು, ಧಾರವಾಡ, ಹಾವೇರಿ, ಕೊಪ್ಪಳ, ಕಾರವಾರ, ಬಳ್ಳಾರಿ, ಹೊಸಪೇಟೆ, ಗದಗ, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಇನ್ನಿತರ ನಗರಗಳಲ್ಲಿ ಬಿಜೆಪಿ ಜಿಲ್ಲಾ ಘಟಕಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸ್ಥಳೀಯ ಶಾಸಕರು, ಮಾಜಿ ಮಂತ್ರಿಗಳು ಭಾಗವಹಿಸಿದ್ದರು.
ಸತೀಶ್ ಜಾರಕಿಹೊಳಿಯಿಂದ ಕಾಂಗ್ರೆಸ್ ಅಂತರ: ಶಿಸ್ತು ಕ್ರಮದ ಬಗ್ಗೆಯೂ ಒಲವು
ಹರಿಹಾಯ್ದ ಬಿಜೆಪಿ ನಾಯಕರು: ಕಾಂಗ್ರೆಸ್ಸೇ ಒಂದು ಅಶ್ಲೀಲ, ಹಿಂದೂ ಪದ ಅಶ್ಲೀಲವಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ತುಮಕೂರಿನಲ್ಲಿ ಕಿಡಿಕಾರಿದರು. ಇಷ್ಟುದಿನ ಕಾಂಗ್ರೆಸ್ಸಿಗರು ಹಿಂದೂಗಳನ್ನು ಅವಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಮತ ಪಡೆದುಕೊಂಡು ಅಧಿಕಾರದ ಕುರ್ಚಿ ಮೇಲೆ ಕುಳಿತಿದ್ದರು. ಈಗ ಇಡೀ ರಾಜ್ಯ ಮತ್ತು ದೇಶದ ಜನಕ್ಕೆ ಗೊತ್ತಾಗಿದೆ. ಹಾಗಾಗಿ ಜನ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ಈಗಾಗಲೇ ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ ಬೆಲೆ ತೆತ್ತಿದ್ದಾರೆ ಎಂದರು.
ಇನ್ನು ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಹಿಂದೂ ಸಮಾಜಕ್ಕೆ ಅವಮಾನ ಮಾಡುವಂತಹ ಹೇಳಿಕೆಯನ್ನು ಕೊಟ್ಟಿರುವ ಆ ನಾಸ್ತಿಕನ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತನ್ನ ತಪ್ಪಿಗೆ ಕ್ಷಮೆ ಯಾಚಿಸದೆ ದುರಂಹಕಾರದ ವರ್ತನೆ ತೋರಿಸಿದ್ದಾರೆ. ಹಾಗಾಗಿ ಯಾರಾರಯರು ತಮ್ಮನ್ನು ತಾವು ಹಿಂದೂ ಎಂದು ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಿರೋ ಅವರಾರಯರು ಕಾಂಗ್ರೆಸ್‌ಗೆ ಓಟು ಹಾಕಬಾರದು ಕರೆ ನೀಡಿದರು.
ಸಿಂಧೂ ನದಿಯಿಂದ ಹಿಂದೂ ಎಂಬ ಪದ ಬಂದಿದೆ. ಸತೀಶ್ ಬಹುಶಃ ಇತಿಹಾಸ ಓದಿಲ್ಲ ಅನ್ನಿಸುತ್ತದೆ. ಅವರು ತಮ್ಮ ಸರ್ಟಿಫಿಕೇಟ್‌ಗಳಲ್ಲಿ ಹಿಂದೂ ಅಂತ ಹಾಕಿಕೊಂಡಿಲ್ಲವೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಚಿತ್ರದುರ್ಗದಲ್ಲಿ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಹಿಂದೂ ಧರ್ಮವನ್ನು ಅವಹೇಳನ ಮಾಡಿದರೆ ಅನ್ಯ ಧರ್ಮದವರ ಮತಗಳು ಸಿಗುತ್ತದೆ ಎನ್ನುವ ಕಲ್ಪನೆ ಇದೆ. ಅದೇ ಕಾರಣಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಂತಹ ಹುದ್ದೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹರಿಹಾಯ್ದರು.
ಬಿಜೆಪಿ ಕೈಗೆ ಮತ್ತೆ ಹಿಂದು ಅಸ್ತ್ರ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ತಲೆಬೇನೆ
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಜಾರಕಿಹೊಳಿ ಹಿಂದು ಧರ್ಮದವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಜಾರಕಿಹೊಳಿ ಅವರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟನೆ ಮಾಡಬೇಕು. ನ.13ರಂದು ಗೋಕಾಕಕ್ಕೆ ತೆರಳಿ ಜಾರಕಿಹೊಳಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ನುಡಿದರು. ಹಿಂದೂ ನಾಯಕರ ವಿರುದ್ಧ ಮಾತನಾಡಿದವರ ನಾಲಿಗೆ ಕತ್ತರಿಸುತ್ತೇನೆ ಎಂದು ವಿಜಯಪುರ ಮಹಾನಗರ ಪಾಲಿಕೆ ನೂತನ ಸದಸ್ಯ ಶಿವರುದ್ರ ಬಾಗಲಕೋಟ ಎಚ್ಚರಿಕೆ ನೀಡಿದ್ದಾರೆ.