Asianet Suvarna News Asianet Suvarna News

ಸತೀಶ್‌ ಜಾರಕಿಹೊಳಿಯಿಂದ ಕಾಂಗ್ರೆಸ್‌ ಅಂತರ: ಶಿಸ್ತು ಕ್ರಮದ ಬಗ್ಗೆಯೂ ಒಲವು

ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿಕೆ ವಿವಾದವಾಗುತ್ತಿದ್ದಂತೆ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಇದು ಪಕ್ಷದ ಹೇಳಿಕೆಯಲ್ಲ, ವೈಯಕ್ತಿಕ ಅಭಿಪ್ರಾಯ. ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷ ಸ್ಪಷ್ಟಪಡಿಸಿದೆ. 

Congress distance from Satish Jarkiholi over Hindu Statement gvd
Author
First Published Nov 9, 2022, 7:33 AM IST

ಬೆಂಗಳೂರು (ನ.09): ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿಕೆ ವಿವಾದವಾಗುತ್ತಿದ್ದಂತೆ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಇದು ಪಕ್ಷದ ಹೇಳಿಕೆಯಲ್ಲ, ವೈಯಕ್ತಿಕ ಅಭಿಪ್ರಾಯ. ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷ ಸ್ಪಷ್ಟಪಡಿಸಿದೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಜಾರಕಿಹೊಳಿ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ, ಖಂಡಿಸುತ್ತದೆ. ಯಾರ ಭಾವನೆಗೂ ನಾವು ಧಕ್ಕೆ ತರಲು ಬಯಸುವುದಿಲ್ಲ. ಈ ಹೇಳಿಕೆಯಿಂದ ಪಕ್ಷಕ್ಕೇನೂ ನಷ್ಟಆಗುವುದಿಲ್ಲ. 

ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು. ತಮ್ಮ ಮನೆಯಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ಸಾರ್ವಜನಿಕವಾಗಿ ಮಾತನಾಡುವಾಗ ಹೀಗೆ ಹೇಳಬಾರದು. ನಾನು ಕೂಡ ಹಿಂದೂವಾಗಿದ್ದೇನೆ. ನಮ್ಮ ಪಕ್ಷ ಬಹುಧರ್ಮ, ಬಹುಭಾಷೆ ಒಪ್ಪುವ ಪಕ್ಷ. ಈ ವಿಚಾರವಾಗಿ ಜಾರಕಿಹೊಳಿ ಅವರಿಂದಲೇ ಸ್ಪಷ್ಟೀಕರಣ ಬಯಸುತ್ತೇವೆ ಎಂದು ತಿಳಿಸಿದರು. ಇದೇ ರೀತಿ ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈಗಾಗಲೇ ಜಾರಕಿಹೊಳಿ ಹೇಳಿಕೆ ಖಂಡಿಸಿ ನಮ್ಮ ಪಕ್ಷದ ವಕ್ತಾರ ಸುರ್ಜೇವಾಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ನಿಲುವು ಇದೇ ಆಗಿದೆ ಎಂದಿದ್ದಾರೆ.

ಬಿಜೆಪಿ ಕೈಗೆ ಮತ್ತೆ ಹಿಂದು ಅಸ್ತ್ರ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ತಲೆಬೇನೆ

ವೈಯಕ್ತಿಕ ಹೇಳಿಕೆ: ಬೆಂಗಳೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಜಾರಕಿಹೊಳಿ ಅವರು ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದು, ಆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರಬಹುದು. ಜಾರಕಿಹೊಳಿ ಅವರೂ ಹಿಂದೂ ಆಗಿದ್ದಾರೆ. ಇದು ಪಕ್ಷದ ಹೇಳಿಕೆಯಲ್ಲ. ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಅವರೇ ಉತ್ತರ ನೀಡಬೇಕು ಎಂದು ಸಮಜಾಯಿಷಿ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ. ಜಾರಕಿಹೊಳಿ ಅವರು ಹೀಗೆ ಮಾತನಾಡುವುದು ಹೊಸದೇನಲ್ಲ. ಮೂಢನಂಬಿಕೆ ವಿರುದ್ಧ ಯಾವಾಗಲೂ ಇಂತಹ ಹೇಳಿಕೆಯನ್ನು ಅವರು ನೀಡುತ್ತಾರೆ. ಮಾನವ ಬಂಧುತ್ವ ವೇದಿಕೆಯಲ್ಲಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು. ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಬುಧವಾರ ಬೆಳಿಗ್ಗೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ಮುಂದಾಗಿದೆ.

ಕ್ಷಮೆ ಕೇಳೋದಿಲ್ಲ: ‘ಹಿಂದು ನಮ್ಮ ಪದವೇ ಅಲ್ಲ, ಅದು ಪರ್ಷಿಯನ್‌ ಪದ. ಹಿಂದು ಪದದ ಅರ್ಥ ಅಶ್ಲೀಲವಾಗಿದೆ’ ಎಂಬ ಹೇಳಿಕೆಗೆ ಸ್ವತಃ ತಮ್ಮ ಪಕ್ಷದ ಮುಖಂಡರು ಸೇರಿ ಪ್ರತಿಪಕ್ಷಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದರೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ‘ನಾನೇನೂ ತಪ್ಪು ಮಾಡಿಲ್ಲ, ಯಾವುದೇ ಕಾರಣಕ್ಕೂ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಕೇಳಲ್ಲ. ನಾನು ತಪ್ಪು ಮಾಡಿದ್ದೇನೆಂದು ಸಾಬೀತು ಮಾಡಿದರೆ ಕ್ಷಮೆ ಕೇಳುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ನಾವು ಬಳಕೆ ಮಾಡುತ್ತಿರುವ ಹಿಂದು ಪದದ ಅರ್ಥ ಅಶ್ಲೀಲವಾಗಿದೆ ಎಂಬ ಹೇಳಿಕೆ ಬಳಿಕ ಅದನ್ನು ಕೆಲವರು ಎಲ್ಲೆಲ್ಲೋ ತೆಗೆದುಕೊಂಡು ಹೋಗಿದ್ದಾರೆ. ಡಿಕ್ಷನರಿಯಲ್ಲಿ ‘ಹಿಂದೂ ಪದದ ಅರ್ಥ ಕೆಟ್ಟದ್ದು’ ಅಂತ ಇದೆ. ಆ ಕುರಿತು ಚರ್ಚೆ ಆಗಬೇಕು. ಈ ವಿಚಾರ ವಿಕಿಪೀಡಿಯಾದಲ್ಲೂ ಇದೆ ಎಂಬುದು ನನ್ನ ಮಾತು. ಇಲ್ಲಿ ನಾನು ಹಿಂದು ಪದದ ಅರ್ಥ ಕೆಟ್ಟದಾಗಿದೆ ಎನ್ನುವ ಬದಲು ‘ಅಶ್ಲೀಲ’ ಅಂದಿದ್ದನ್ನೇ ಕೆಲವರು ಹಿಡಿದುಕೊಂಡು ಕೂತಿದ್ದಾರೆ ಎಂದು ಜಾರಕಿಹೊಳಿ ಕಿಡಿಕಾರಿದರು.

ಕುರಿಗಾರರಿಗೆ ತಲಾ 20 ಕುರಿ, 1 ಮೇಕೆ: ಸಿಎಂ ಬೊಮ್ಮಾಯಿ

ನಾನು ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನನ್ನ ಹೇಳಿಕೆ ಕುರಿತು ಯಾರು ಬೇಕಾದರೂ ಚರ್ಚೆಗೆ ಬರಲಿ. ತಪ್ಪಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಂದು ತಿಂಗಳಲ್ಲಿ ತನಿಖೆ ಮಾಡಿ ವರದಿ ಕೊಟ್ಟು ಸಾಬೀತು ಮಾಡಲಿ. ಕ್ಷಮೆ ಮಾತ್ರ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದು ಸವಾಲು ಹಾಕಿದರು.

Follow Us:
Download App:
  • android
  • ios