ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ: ರಾಜ್ಯಾದ್ಯಕ್ಷ, ವಿಪಕ್ಷ ನಾಯಕನ ವಿರುದ್ಧವೇ ತೊಡೆ ತಟ್ಟಿದ ಶಾಸಕರು.!
ರಾಜ್ಯ ಕೇಸರಿ ಪಾಳಯದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬುದು ಆಗಾಗ ಬಿಜೆಪಿ ನಾಯಕರೇ ಜಗಜ್ಜಾಹೀರು ಮಾಡುತ್ತಿರುತ್ತಾರೆ.
ಬೆಂಗಳೂರು (ಜು.18): ರಾಜ್ಯ ಕೇಸರಿ ಪಾಳಯದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬುದು ಆಗಾಗ ಬಿಜೆಪಿ ನಾಯಕರೇ ಜಗಜ್ಜಾಹೀರು ಮಾಡುತ್ತಿರುತ್ತಾರೆ. ಇತ್ತೀಚೆಗೆ ಹೈಕಮಾಂಡ್ ಖಡಕ್ ಸೂಚನೆ ಬಳಿಕ ಬಹಿರಂಗ ಹೇಳಿಕೆಗಳು ಕಡಿಮೆಯಾಗಿದ್ದರೂ ಪಕ್ಷದ ಆಂತರಿಕ ಸಭೆಗಳಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಲೇ ಇದೆ. ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಸಭೆ ಶಾಸಕರ ಭಿನ್ನಮತ ಸ್ಫೋಟಕ್ಕೆ ವೇದಿಕೆ ಮಾಡಿಕೊಟ್ಟಿದೆ.
ಲೋಕಸಭೆ ಚುನಾವಣೆಯ ಕೆಲವು ಕ್ಷೇತ್ರಗಳ ಸೋಲು ಅಲ್ಲಿನ ಬಿಜೆಪಿ ಶಾಸಕರಿಗೆ ಇನ್ನೂ ಕೂಡ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ದಾವಣಗೆರೆ ಸೋಲಿನಿಂದ ಆಘಾತಕ್ಕೆ ಒಳಗಾಗಿರೋ ಬಿಜೆಪಿ ಶಾಸಕ ಬಿ.ಪಿ ಹರೀಶ್, ಶಾಸಕಾಂಗ ಸಭೆಯಲ್ಲೇ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ. ದಾವಣಗೆರೆ ಲೋಕಸಭಾ ಸೋಲಿಗೆ ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬವೇ ಕಾರಣ ಎಂದು ಸಭೆಯಲ್ಲಿ ಕಿಡಿ ಕಾರಿದ್ದಾರೆ.
ವಾಲ್ಮೀಕಿ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು: ವಿಜಯೇಂದ್ರ
ಆಗ ಶಾಸಕ ಬಿ.ಪಿ. ಹರೀಶ್ ಮಾತಿಗೆ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿ, ‘ಯಡಿಯೂರಪ್ಪನವರ ಹೋರಾಟದ ಬಗ್ಗೆ ಗೊತ್ತಿದೆಯಾ?.. ಬಿ.ಎಸ್. ಯಡಿಯೂರಪ್ಪ ಬಗ್ಗೆ ನೀನೇನು ಮಾತನಾಡೋದು ಎಂದು ಪರಸ್ಪರ ವಾಗ್ಯುದ್ಧ ಮಾಡಿದ್ದಾರೆ. ಬಳಿಕ ಇಬ್ಬರು ನಾಯಕರು ಸಭೆ ಬಳಿಕ ಚರ್ಚೆ ಮಾಡೋಣ ಎಂದು ಶಾಂತವಾಗಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಅಸಮಾಧಾನ ಹೊರ ಹಾಕುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಲೇ ಹೋಗುತ್ತಿದೆ..
ಇದಾದ ಬಳಿಕ ಸಭೆಯಲ್ಲಿ ಆಕ್ರೋಶ ಹೊರಹಾಕಿದ ಶಾಸಕ ಎಸ್.ಆರ್ ವಿಶ್ವನಾಥ್, ರಾಜ್ಯ ಬಿಜೆಪಿಯಲ್ಲಿ 3 ಟೀಂ ಇದೆ ಎಂದು ಹೇಳುವ ಮೂಲಕ ಬಣ ಬಡಿದಾಟ ಪ್ರಸ್ತಾಪ ಮಾಡಿದ್ದಾರೆ. ಮುಡಾ ಹೋರಾಟ ಮಾಡುವಾಗ ನಮ್ಮ ಜೊತೆ ಚರ್ಚಿಸಿಲ್ಲ, ವಿಪಕ್ಷ ನಾಯಕರು ನಮ್ಮನ್ನ ವಿಶ್ವಾಸಕ್ಕೆ ಪಡೆಯಲ್ಲ ಎಂದು ಆಕ್ರೋಶ ಹಾಕಿದರು. ‘ನಾವೆಲ್ಲಾ 40 ವರ್ಷ ಪಾರ್ಟಿಗೆ ಕೆಲಸ ಮಾಡಿದವರು. ಮೊನ್ನೆ ಪಾದಯಾತ್ರೆ ಮಾಡುವಾಗ ಒಬ್ಬೊಬ್ಬರು ಒಂದು ಕಡೆ ಇದ್ದರು. ವಿಪಕ್ಷ ನಾಯಕರು ನಮ್ಮನ್ನ ವಿಶ್ವಾಸಕ್ಕೆ ಪಡೆಯಲ್ಲ, ಹೀಗೆ ಆದರೆ ನಾವು ಮಾಧ್ಯಮದ ಮುಂದೆ ಹೋಗುತ್ತೇವೆ. ವಿಪಕ್ಷ ನಾಯಕರು ಸದನದಲ್ಲಿ ಹೆಚ್ಚು ಹೊತ್ತು ಮಾತಾಡಿದರೆ ಆಗೋದಿಲ್ಲ. ಅಶೋಕ್ ಭಾಷಣ ಸಪ್ಪೆ ಆಗಿತ್ತು, ತೀಕ್ಷ್ಣವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವನಾಥ್ ದಾಟಿಯಲ್ಲೇ ಮಾತಾಡಿದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ, ನಮ್ಮ ನಮ್ಮಲ್ಲೇ ಎತ್ತಿಕಟ್ಟುವ ಕೆಲಸ ಆಗುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿರೋ ಬಣ ಬಡಿದಾಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
BJP ಅಲ್ಪಸಂಖ್ಯಾತ ಮೋರ್ಚಾ ಬೇಕಿಲ್ಲ.. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅವಶ್ಯಕತೆ ಇಲ್ಲ ಎಂದ ಸುವೇಂದು
ಇನ್ನು ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಸೆಡ್ಡು ಹೊಡೆದು, ತಮ್ಮ ತವರು ಕ್ಷೇತ್ರ ಬೆಂಗಳೂರಿನ ವಿಜಯನಗರ ಬಿಟ್ಟು ಚಾಮರಾಜನಗರ ಹಾಗೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದರು. ಇದಾದ ನಂತರೆ ಲೋಕಸಭಾ ಚುನಾವಣೆ ವೇಳೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆ ತಟ್ಟಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಆದರೆ, ಹೀನಾಯವಾಗಿ ಸೋಲು ಕಂಡು ಮನೆಯಲ್ಲಿದ್ದಾರೆ. ದಿನ ಕಳೆದಂತೆ ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ತೊಡೆ ತಟ್ಟುವವರ ಸಂಖ್ಯೆ ಹೆಚ್ಚಳ ಆಗುತ್ತಿದೆ..
ವರದಿ- -ಶಿವರಾಜ್ ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್