Asianet Suvarna News Asianet Suvarna News

ವಾಲ್ಮೀಕಿ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು: ವಿಜಯೇಂದ್ರ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಕೇವಲ ಹಗರಣವಲ್ಲ. ಅದೊಂದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ವಿಧಾನಸಭಾ ಸದಸ್ಯ ಬಿ.ವೈ.ವಿಜಯೇಂದ್ರ ಬಲವಾಗಿ ಒತ್ತಾಯಿಸಿದ್ದಾರೆ. 
 

CM Siddaramaiah should resign in Valmiki case Says BY Vijayendra gvd
Author
First Published Jul 18, 2024, 7:53 AM IST | Last Updated Jul 18, 2024, 11:06 AM IST

ಬೆಂಗಳೂರು (ಜು.18): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಕೇವಲ ಹಗರಣವಲ್ಲ. ಅದೊಂದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ವಿಧಾನಸಭಾ ಸದಸ್ಯ ಬಿ.ವೈ.ವಿಜಯೇಂದ್ರ ಬಲವಾಗಿ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ಕೆಲವರ ಬೆದರಿಕೆ ಮತ್ತು ಒತ್ತಡವೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣ ಎಂದು ಆಪಾದಿಸಿದರು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿಯನ್ನು ಹಗರಣಕ್ಕೆ ಬಳಸಿಕೊಂಡಿದ್ದಾರೆ. ಹಣವನ್ನು ಹೊರರಾಜ್ಯಕ್ಕೆ ಕಳುಹಿಸುವ ಕೆಲಸ ಮಾಡಿದ್ದಾರೆ. 

ಮುಖ್ಯಮಂತ್ರಿಗಳು ಹಣಕಾಸಿನ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಪ್ರತಿಪಾದಿಸಿದರು. ಯಾವುದೇ ಶಾಸಕರು, ಸಚಿವರು ಇದರಲ್ಲಿ ಇಲ್ಲ. ಕೇವಲ ಅಧಿಕಾರಿಗಳಿಂದ ಆದ ಹಗರಣ ಇದು ಎಂಬ ಹೇಳಿಕೆನ್ನು ಸಚಿವರು ನೀಡಿದ್ದು ಅಕ್ಷಮ್ಯ ಅಪರಾಧ. ಈ ಸರ್ಕಾರವು ಅಧಿಕಾರಕ್ಕೆ ಬಂದಾಗ ವಿರೋಧ ಪಕ್ಷ ಮಾತ್ರವಲ್ಲ; ರಾಜ್ಯದ ಜನತೆಯೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಿಂದ ರಾಜ್ಯ ಸರ್ಕಾರವು ಶೋಷಿತ, ಪೀಡಿತ ಮತ್ತು ದಲಿತರ ಧ್ವನಿಯಾಗಿ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್ ಪ್ರಾಯೋಗಿಕ ಸಂಚಾರಕ್ಕೆ ಡಿ.ಕೆ.ಶಿವಕುಮಾರ್‌ ಚಾಲನೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ರಾಜ್ಯಾದ್ಯಂತ ಹೋರಾಟವನ್ನೂ ನಡೆಸಿದೆ. ರಾಜಕೀಯ ಕಾರಣಕ್ಕಾಗಿ ಸದನದಲ್ಲಿ ಈ ಹಗರಣವನ್ನು ಪ್ರಸ್ತಾಪ ಮಾಡುತ್ತಿಲ್ಲ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ದುರುಪಯೋಗ ಆಗಿದೆ; ಸಾಕಷ್ಟು ಅಧಿಕಾರಿಗಳು, ಸಚಿವರು, ಶಾಸಕರ ಹೆಸರು ಕೂಡ ಇದರಲ್ಲಿ ಕೇಳಿ ಬರುತ್ತಿದೆ. ಜನತೆಗೆ ಆದ ಅನ್ಯಾಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು. ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಹಾಡಹಗಲೇ ದರೋಡೆ, ಲೂಟಿ ಮಾಡಿ, ಈ ಸರ್ಕಾರವು ಕಣ್ಮುಚ್ಚಿ ಕುಳಿತಿದೆ. 

ಇಂಥ ಅನುಭವಿ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದಾಗ, ಅವರೇ ಹಣಕಾಸು ಇಲಾಖೆ ನಿರ್ವಹಿಸುವ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಕರಣ ನಡೆದಿದೆ; ನನಗೇನೂ ಗೊತ್ತಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಸಿಎಂ ಅವರು ರಾಜ್ಯದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು. ತಮ್ಮ ಅವಧಿಯಲ್ಲಿ ದಲಿತರಿಗೆ, ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಆಗಿದೆ. ತಾವು ಮುಖ್ಯಮಂತ್ರಿಯಾಗಿ ಅಸಹಾಯಕನಾಗಿ ಕುಳಿತಿದ್ದೆನಲ್ಲವೇ ಎಂಬ ಪಾಪಪ್ರಜ್ಞೆ ಮುಖ್ಯಮಂತ್ರಿಗಳನ್ನು ಕಾಡಬಾರದು ಎಂದೇ ಈ ವಿಚಾರದ ಕುರಿತು ಗಮನ ಸೆಳೆದಿದ್ದೇವೆ. ನಿಗಮದ ಹಣ ಪಕ್ಕದ ರಾಜ್ಯಕ್ಕೆ ಹೋದದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವರೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. 48 ಗಂಟೆಗಳಲ್ಲಿ 187 ಕೋಟಿ ಹಿಂಪಡೆಯಲಾಗುವುದು ಎಂದೂ ತಿಳಿಸಿದ್ದರು. ಇದೀಗ ಸಚಿವರ ನೇತೃತ್ವದಲ್ಲೇ ಈ ಹಗರಣ ನಡೆದಿರುವುದು ಗೊತ್ತಾಗಿದೆ ಎಂದು ಹೇಳಿದರು.

ಎಚ್‌ಡಿಕೆ ಸಿಎಂ ಆಗಿದ್ದಾಗ ಅರ್ಜಿ ಸಲ್ಲಿಸಿ ಮುಡಾ ಬದಲಿ ನಿವೇಶನ ಪಡೆದಿದ್ದಾರೆ: ಕಾಂಗ್ರೆಸ್‌ ಆರೋಪ

ಇಷ್ಟು ದೊಡ್ಡ ಹಗರಣದ ಸಂದರ್ಭದಲ್ಲಿ ಅನುಭವಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನಡವಳಿಕೆಯನ್ನೂ ಜನರು ಗಮನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಆರ್ಥಿಕ ಶಿಸ್ತು ರೂಪಿಸುವಲ್ಲಿ ವಿಫಲವಾಗಿದ್ದಾರೆ. ಅವರಿಗೆ ನಿಜವಾಗಿ ಕಾಳಜಿ ಇದ್ದರೆ, ದಲಿತರು, ಹಿಂದುಳಿದವರು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಈ ನಿಗಮದ ಹಣದ ವಿಚಾರದಲ್ಲಿ ಗಮನ ಕೊಡಬೇಕಿತ್ತು. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆ ಮಾಡುವುದನ್ನು ನೋಡಿಕೊಂಡು ಸುಮ್ಮನೇ ಕುಳಿತಿರುವುದೂ ಅಪರಾಧವೇ ಆಗಿದೆ. ಇದನ್ನು ರಾಜ್ಯದ ಮುಖ್ಯಮಂತ್ರಿಗಳು ತಿಳಿದುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios