ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಹೆಚ್ಚೂ ಕಡಮೆ ಇನ್ನೂ ಒಂದು ತಿಂಗಳ ಕಾಲ ಮುಂದುವರೆಯುವ ಸಾಧ್ಯತೆ ಕಂಡು ಬರುತ್ತಿದೆ.  

ಬೆಂಗಳೂರು (ಫೆ.26): ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಹೆಚ್ಚೂ ಕಡಮೆ ಇನ್ನೂ ಒಂದು ತಿಂಗಳ ಕಾಲ ಮುಂದುವರೆಯುವ ಸಾಧ್ಯತೆ ಕಂಡು ಬರುತ್ತಿದೆ. ಮುಂದಿನ ವಾರ ಅಂದರೆ, ಬರುವ ಮಾ.3ರಿಂದ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಆರಂಭವಾಗಲಿದೆ. ಇದು ಬಜೆಟ್ ಅಧಿವೇಶನವೂ ಆಗಿರುವುದರಿಂದ ಮಹತ್ವದ್ದು ಕೂಡ ಹೌದು. ಈ ಅಧಿವೇಶನ ಮುಗಿಯುವುದೇ ಮಾರ್ಚ್ ಮೂರನೇ ವಾರದಲ್ಲಿ. 

ಹೀಗಾಗಿ, ಮಾರ್ಚ್‌ ಅಂತ್ಯದವರೆಗೆ ರಾಜ್ಯಾಧ್ಯಕ್ಷ ಸ್ಥಾನದ ಕುರಿತಂತೆ ಯಥಾಸ್ಥಿತಿ ಮುಂದುವರೆಯುವುದು ನಿಶ್ಚಿತ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ. ಸಹಜ ಪರಿಸ್ಥಿತಿ ಇದ್ದಿದ್ದರೆ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಇಷ್ಟು ವಿಳಂಬವಾಗುತ್ತಿರಲಿಲ್ಲ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಪಕ್ಷದ ವರಿಷ್ಠರೂ ಈ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಯಾವುದೇ ನಿರ್ಧಾರ ಕೈಗೊಂಡರೂ ರಾಜ್ಯ ಬಿಜೆಪಿಯಲ್ಲಿ ಒಂದು ಸುತ್ತಿನ ಸಮರವೇ ನಡೆಯಲಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮುಂದುವರೆಸುವ ನಿರ್ಧಾರ ಕೈಗೊಂಡರೂ ಅವರ ಸ್ವಪಕ್ಷೀಯ ವಿರೋಧಿಗಳು ತೀವ್ರ ವಿರೋಧ ಮಾಡಲಿದ್ದಾರೆ. 

ಇನ್ನು ವಿಜಯೇಂದ್ರ ಅವರನ್ನು ಬದಲಿಸಿ ಬೇರೊಬ್ಬರನ್ನು ನೇಮಕ ಮಾಡಿದರೂ ಪಕ್ಷದ ಅಗ್ರಗಣ್ಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಂಬಲಿಗರು ಆಕ್ರೋಶಗೊಳ್ಳುವುದು ನಿಶ್ಚಿತ. ಹೀಗಾಗಿ, ವಿಧಾನಮಂಡಲದ ಅಧಿವೇಶನ ಹೊತ್ತಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಕೈಗೆತ್ತಿಕೊಂಡು ಪಕ್ಷದಲ್ಲಿನ ಭಿನ್ನಮತೀಯ ಚಟುವಟಿಕೆಗಳು ಉಲ್ಬಣಗೊಂಡರೆ ಅದರಿಂದ ತೀವ್ರ ಮುಜುಗರ ಅನುಭವಿಸಬೇಕಾಗುತ್ತದೆ. ಅದರ ಬದಲು ಅಧಿವೇಶನ ಮುಗಿಯುವವರೆಗೆ ಈ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದೇ ಬೇಡ ಎಂಬ ಚಿಂತನೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗಿರಕಿ ಹೊಡೆಯೋರಿಗಿಲ್ಲ, ಕೆಲಸ ಮಾಡುವವರಿಗಷ್ಟೇ ಸ್ಥಾನ: ಡಿ.ಕೆ.ಶಿವಕುಮಾರ್

ಸರ್ಕಾರ ವಿರುದ್ಧ ಹೋರಾಟಕ್ಕೆ ಸಿದ್ಧತೆ: ಪಕ್ಷದಲ್ಲಿನ ಭಿನ್ನಮತೀಯ ಚಟುವಟಿಕೆಗಳ ನಡುವೆಯೂ ಅಧಿವೇಶನದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವೈಫಲ್ಯಗಳನ್ನು ಮುಂದಿಟ್ಟು ತರಾಟೆ ತೆಗೆದುಕೊಳ್ಳುವ ಸಂಬಂಧ ಭರದ ಸಿದ್ಧತೆ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿ ಎಲ್ಲ ಹಿರಿಯ ನಾಯಕರು ಸತತ ಸಭೆಗಳನ್ನು ನಡೆಸುವ ಮೂಲಕ ಸಿದ್ಧರಾಗುತ್ತಿದ್ದಾರೆ. ಇದನ್ನು ವರಿಷ್ಠರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ, ಈ ವೇಳೆ ಹೊಸದಾಗಿ ಗೊಂದಲ ಹುಟ್ಟುಹಾಕುವಂತೆ ಮಾಡುವುದು ಬೇಡ ಎಂಬ ದಿಕ್ಕಿನಲ್ಲಿ ವರಿಷ್ಠರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.