ಕಾಂಗ್ರೆಸ್‌ ಪ್ರಜಾಧ್ವನಿ ಬಸ್‌ ಯಾತ್ರೆ ಇಂದು ಪುನಾರಂಭ: ಹೊಸಪೇಟೆ, ಕೊಪ್ಪಳದಲ್ಲಿ ಬೃಹತ್‌ ಸಮಾವೇಶ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕೈಗೊಂಡಿರುವ ‘ಪ್ರಜಾಧ್ವನಿ’ ರಥಯಾತ್ರೆ ಮಂಗಳವಾರ ಪುನಾರಂಭಗೊಳ್ಳಲಿದ್ದು, ಇದಕ್ಕಾಗಿ ಹೊಸಪೇಟೆ ಹಾಗೂ ಕೊಪ್ಪಳದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. 

Congress Prajadwani Bus Yatra Resumes jan 17th gvd

ಹೊಸಪೇಟೆ (ಜ.17): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕೈಗೊಂಡಿರುವ ‘ಪ್ರಜಾಧ್ವನಿ’ ರಥಯಾತ್ರೆ ಮಂಗಳವಾರ ಪುನಾರಂಭಗೊಳ್ಳಲಿದ್ದು, ಇದಕ್ಕಾಗಿ ಹೊಸಪೇಟೆ ಹಾಗೂ ಕೊಪ್ಪಳದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಮುಂಜಾನೆ 11 ಗಂಟೆಗೆ ಹೊಸಪೇಟೆಯ ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣ ಹಾಗೂ ಮಧ್ಯಾಹ್ನ 4 ಗಂಟೆಗೆ ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಬೃಹತ್‌ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ‘ಕೈ’ ಪಡೆ ಮುಂದಾಗಿದೆ.

ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ 15 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕೈ ಪಡೆ ‘ಪ್ರಜಾಧ್ವನಿ’ ಯಾತ್ರೆಯ ಮೂಲಕ ಕಾಂಗ್ರೆಸ್‌ ಪರ ಅಲೆ ಸೃಷ್ಟಿಸುವ ಇರಾದೆ ಹೊಂದಿದೆ. ವಿಧಾನಸಭಾ ಚುನಾವಣೆಯ ಅಧಿಕೃತ ಪ್ರಚಾರಾಂದೋಲನಕ್ಕೆ ಜ.11ರಂದು ಚಾಲನೆ ನೀಡಿದ್ದ ಕಾಂಗ್ರೆಸ್‌, ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ತಂಗಿದ್ದ ಗಾಂಧಿ ಬಾವಿಯಲ್ಲಿ ‘ಪ್ರಜಾಧ್ವನಿ’ ರಥಯಾತ್ರೆಗೆ ಚಾಲನೆ ನೀಡಿತ್ತು. ಸಂಕ್ರಾಂತಿ ಹಿನ್ನೆಲೆಯಲ್ಲಿ ಯಾತ್ರೆಯನ್ನು 5 ದಿನಗಳ ಕಾಲ ಮುಂದೂಡಲಾಗಿತ್ತು. ಮಂಗಳವಾರ ಬೆಳಗ್ಗೆ ಹೊಸಪೇಟೆಯಿಂದ ಯಾತ್ರೆ ಪುನಾರಂಭಗೊಳ್ಳಲಿದೆ.

ಜ.17ರಂದು ಹೊಸಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ: ಶಾಸಕ ಪರಮೇಶ್ವರ ನಾಯ್ಕ

50 ಸಾವಿರ ಜನ ಆಗಮನ ನಿರೀಕ್ಷೆ: ಹೊಸಪೇಟೆಯಲ್ಲಿ ಸಮಾವೇಶಕ್ಕಾಗಿ ನಗರದ ಡಾ.ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ 80*40 ಅಡಿ ಅಳತೆಯ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಮುಖ್ಯ ವೇದಿಕೆಯಿಂದ 350-400 ಮೀಟರ್‌ ದೂರದವರೆಗೆ ಶಾಮಿಯಾನ ಹಾಕಲಾಗಿದ್ದು, 20 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ, ಮಧ್ಯಾಹ್ನ 4 ಗಂಟೆಗೆ ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ.

ಹೊಸಪೇಟೆ ಸಮಾವೇಶಕ್ಕೆ 50 ಸಾವಿರ, ಕೊಪ್ಪಳ ಸಮಾವೇಶಕ್ಕೆ 40 ಸಾವಿರಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆಯಿದ್ದು, ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ಕಾಂಗ್ರೆಸ್‌ನ ಫ್ಲೆಕ್ಸ್‌, ಬಾವುಟಗಳು ರಾರಾಜಿಸುತ್ತಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಧಾನ ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಎಂ.ಬಿ. ಪಾಟೀಲ್‌, ಈಶ್ವರ ಖಂಡ್ರೆ ಹಾಗೂ ಇತರ ನಾಯಕರು ಸಮಾವೇಶಧಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

2013ರಲ್ಲಿ ವಿಜಯನಗರ ನೆಲದಿಂದಲೇ ‘ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ’ ಪಾದಯಾತ್ರೆ ಆರಂಭಿಸಲಾಗಿತ್ತು. ಬಳಿಕ, ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈಗ ಅದೇ ನೆಲದಲ್ಲಿ ಕೈ ಪಾಳಯ ‘ಪ್ರಜಾಧ್ವನಿ’ ಬಸ್‌ ಯಾತ್ರೆ ಮೂಲಕ ಬಿಜೆಪಿಗೆ ಸಡ್ಡು ಹೊಡೆಯುವುದಕ್ಕೆ ಮುಂದಾಗಿದೆ. ಈ ಮಧ್ಯೆ, ಜ.18ರಂದು ಬಾಗಲಕೋಟೆ, ಗದಗ, 19ರಂದು ಹಾವೇರಿ, ದಾವಣಗೆರೆ, 21ರಂದು ಹಾಸನ, ಚಿಕ್ಕಮಗಳೂರು, 22ರಂದು ಉಡುಪಿ, ಮಂಗಳೂರು, 23ರಂದು ಕೋಲಾರ, ಚಿಕ್ಕಬಳ್ಳಾಪುರ, 24ರಂದು ಬೆಂಗಳೂರು ಗ್ರಾಮಾಂತರ, ತುಮಕೂರು, 25 ರಂದು ಚಾಮರಾಜನಗರ, ಮೈಸೂರು, 26ರಂದು ಮಂಡ್ಯ, ರಾಮನಗರ, 27ರಂದು ಕಲಬುರಗಿ, ಯಾದಗಿರಿಗಳಲ್ಲಿ ಯಾತ್ರೆ ನಡೆಯಲಿದೆ.

Latest Videos
Follow Us:
Download App:
  • android
  • ios