ಬೆಂಗಳೂರು(ಆ.29): ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಖಾಡಕ್ಕೆ ಧುಮುಕಿರುವ ಬಿಜೆಪಿಯು ಪಾಲಿಕೆಯ ಹಾಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರನ್ನು ಪಕ್ಷಕ್ಕೆ ಸೆಳೆಯಲು ಭರ್ಜರಿ ಪ್ಲಾನ್‌ ಮಾಡಿದೆ.

ಪ್ರಮುಖವಾಗಿ ವಿಧಾನಸಭಾ ಉಪಚುನಾವಣೆ ವೇಳೆ ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದ ಶಾಸಕರ ಆಪ್ತ ಕಾರ್ಪೊರೇಟರ್‌ಗಳನ್ನು ಕರೆತಂದು ಪಕ್ಷದ ಸದಸ್ಯತ್ವ ನೀಡಿ ಚುನಾವಣೆಯಲ್ಲಿ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ. ಈ ಶಾಸಕರ ಆಪ್ತ ವಲಯದಲ್ಲಿರುವ 20ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳು ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ಮಾಡಿ ಅಧಿಕೃತ ಈ ಕಾರ್ಪೊರೇಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಬಿಬಿಎಂಪಿ ಚುನಾವಣೆ ಅನುಮಾನ

ಅಂತೆಯೇ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆಯಿಂದ ಕೆಲವು ಕಾರ್ಪೊರೇಟರ್‌ಗಳಿಗೆ ವಾರ್ಡ್‌ ಕೈ ತಪ್ಪಿದೆ. ಹೀಗಾಗಿ ಅವರು ಸಹ ಬಿಜೆಪಿ ಸೇರಿ ಬಿಜೆಪಿ ಟಿಕೆಟ್‌ ಪಡೆದು ಹೊಸ ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಕಾರ್ಪೋರೇಟರ್‌ಗಳು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿರುವ ಜೆಡಿಎಸ್‌ನ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಹಾಗೂ ಕೆ.ದೇವದಾಸ್‌, ಕಾಂಗ್ರೆಸ್‌ನ ಕೊನೇನ ಅಗ್ರಹಾರ ವಾರ್ಡಿನ ಸದಸ್ಯ ಎಂ.ಚಂದ್ರಪ್ಪ ರೆಡ್ಡಿ ಮತ್ತು ಮಾರತಹಳ್ಳಿ ವಾರ್ಡಿನ ಎನ್‌.ರಮೇಶ್‌ ಮುಂದಿನ ಪಾಲಿಕೆ ಚುನಾವಣೆ ವೇಳೆಗೆ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಅಂತೆಯೇ ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಬೆಂಬಲಿಗರಾದ ಹೇರೋಹಳ್ಳಿ ವಾರ್ಡಿನ ರಾಜಣ್ಣ, ಹೆಮ್ಮಿಗೆಪುರ ವಾರ್ಡಿನ ಆರ್ಯ ಶ್ರೀನಿವಾಸ್‌ ಅವರು ಬಿಜೆಪಿಗೆ ಬೆಂಬಲವಾಗಿ ನಿಂತಿದ್ದಾರೆ. ಸಚಿವ ಕೆ.ಗೋಪಾಲಯ್ಯ ಅವರ ಬೆಂಬಲಿಗರಾದ ಮಾರಪ್ಪನಹಳ್ಳಿ ವಾರ್ಡಿನ ಮಹದೇವ್‌, ವೃಷಭಾವತಿನಗರ ವಾರ್ಡಿನ ಹೇಮಾವತಿ ಗೋಪಾಲಯ್ಯ ಅವರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ.

ಸಚಿವ ಬೈರತಿ ಬಸವರಾಜು ಅವರ ಬೆಂಬಲಿಗರಾದ ದೇವಸಂದ್ರ ವಾರ್ಡಿನ ಶ್ರೀಕಾಂತ್‌, ಬಸವನಪುರ ವಾರ್ಡಿನ ಜಯಪ್ರಕಾಶ್‌, ಎ.ನಾರಾಯಣಪುರ ವಾರ್ಡಿನ ಸುರೇಶ್‌, ವಿಜ್ಞಾನಗರ ವಾರ್ಡಿನ ಎಸ್‌.ಜಿ.ನಾಗರಾಜ್‌ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಇನ್ನು ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜ್‌ ಅವರ ಪುತ್ರ, ಗರುಡಾಚಾರ್‌ಪಾಳ್ಯ ವಾರ್ಡಿನ ಸದಸ್ಯ ನಿತೀಶ್‌ ಪುರುಷೋತ್ತಮ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.