ಬೆಂಗಳೂರು(ಆ.26):  ಬಿಬಿಎಂಪಿ ಅಧಿಕಾರವಧಿ ಇದೇ ಸೆ.10ಕ್ಕೆ ಅಂತ್ಯಗೊಳ್ಳುವ ನಡುವೆ ರಾಜ್ಯ ಸರ್ಕಾರ ಶಾಸಕ ಎಸ್‌.ರಘು ನೇತೃತ್ವದಲ್ಲಿ ಬಿಬಿಎಂಪಿ ವಿಧೇಯಕ ಸಮಿತಿ ರಚಿಸಿರುವುದರಿಂದ ಸದ್ಯಕ್ಕೆ ಬಿಬಿಎಂಪಿ ಚುನಾವಣೆ ಅನುಮಾನ ಎನ್ನಲಾಗಿದೆ.

ಬೆಂಗಳೂರು ವಿಸ್ತಾರವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರಚನೆ, ಮೇಯರ್‌ ಅವಧಿ, ಸೇವಾ ಸಂಸ್ಥೆಗಳ ಸೇರ್ಪಡೆ, ವಾರ್ಡ್‌ ಮರು ವಿಂಗಡಣೆ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಶಾಸಕ ಎಸ್‌.ರಘು ನೇತೃತ್ವದಲ್ಲಿ ಉಭಯ ಸದನಗಳ ಒಟ್ಟು 20 ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ. ಈ ಸಮಿತಿಯು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಅಲ್ಲದೆ, ಕೊರೋನಾದಿಂದ ಚುನಾವಣಾ ಪ್ರಕ್ರಿಯೆಯೂ ವಿಳಂಬವಾಗಿದೆ. ಈ ನಡುವೆ ಸಮಿತಿ ವರದಿ ಕೈಸೇರುವವರೆಗೂ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ: ಡಿ.ಕೆ. ಶಿವಕುಮಾರ್‌

ಸೋಮವಾರ ವಿಧಾನಸೌಧದಲ್ಲಿ ಶಾಸಕ ಎಸ್‌.ರಘು ನೇತೃತ್ವದ ಸಮಿತಿ ಪ್ರಥಮ ಸಭೆ ಮಾಡಿದ್ದು, ಈ ಸಭೆಯಲ್ಲಿ ಬಿಬಿಎಂಪಿಯ ಈಗಿನ 8 ವಲಯಗಳನ್ನು 15 ವಲಯಗಳಾಗಿ ಪುನರ್‌ ರಚಿಸುವ ಸಂಬಂಧ ಸಲಹೆಗಳು ಬಂದಿವೆ. ಇದರ ಜೊತೆಗೆ ಮೇಯರ್‌ ಅಧಿಕಾರದ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಅಂತೆಯೆ ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಿದ್ದು, ಕೆಲವೊಂದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಕಡಿಮೆ ವಾರ್ಡ್‌ಗಳು ಸೇರಿವೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯ ಸುತ್ತಮುತ್ತ ಅಭಿವೃದ್ಧಿಗೊಂಡಿರುವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು 224 ವಾರ್ಡ್‌ ರಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ.

ಸೆ.1ಕ್ಕೆ ಸಮಿತಿ ಸಭೆ:

ಈ ಸಮಿತಿಯು ಶೀಘ್ರದಲ್ಲೇ ಮುಂಬೈ, ಚೆನ್ನೈ ಸೇರಿದಂತೆ ನೆರೆ ರಾಜ್ಯಗಳ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಆಡಳಿತ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದೆ. ಅಂತೆಯೆ ನಗರದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಕಾಯ್ದೆ ರಚನೆ ಸಂಬಂಧ ಬಿಎಂಟಿಸಿ, ಬೆಸ್ಕಾಂ, ನಗರ ಸಂಚಾರ ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಸೆ.1ಕ್ಕೆ ಸಮಿತಿಯು ಮತ್ತೆ ಸಭೆ ಸೇರಿ ಪ್ರತ್ಯೇಕ ಕಾಯ್ದೆ ಹಾಗೂ ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲಿದೆ ಎಂದು ತಿಳಿದು ಬಂದಿದೆ.

ಚುನಾವಣೆ ಬಗ್ಗೆ ಸರ್ಕಾರ ನಿರ್ಧಾರ

ಇದೇ ಸೆ.10ಕ್ಕೆ ಬಿಬಿಎಂಪಿ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಈ ವೇಳೆಗೆ ಚುನಾವಣಾ ಅಧಿಸೂಚನೆ ಹೊರಬಿದ್ದು, ಸಿದ್ಧತೆಗಳು ಆರಂಭವಾಗಬೇಕಿತ್ತು. ಕೊರೋನಾದಿಂದಾಗಿ ವಿಳಂಬವಾಗಿದೆ. ಇದೀಗ ರಾಜ್ಯ ಸರ್ಕಾರ ಬಿಬಿಎಂಪಿ ವಿಧೇಯಕ ಸಮಿತಿ ರಚಿಸಿರುವುದರಿಂದ ಈ ಸಮಿತಿ ವರದಿ ಕೈಸೇರುವವರೆಗೂ ಬಿಬಿಎಂಪಿ ಚುನಾವಣೆ ಮುಂದಾಗುವುದು ಅನುಮಾನ ಎನ್ನಲಾಗಿದೆ.