ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮತ್ತೊಮ್ಮೆ ಶತಾಯಗತಾಯವಾಗಿ ಅಧಿಕಾರಿ ಹಿಡಿಯಲು ಬಿಜೆಪಿ ಕಾರ್ಯತಂತ್ರಗಳನ್ನ ಆರಂಭಿಸಿದೆ. ಇದೀಗ  ಚುನಾವಣೆ ಹೊಸ್ತಿಲಲ್ಲೇ ಸಚಿವರ ಮೌಲ್ಯಮಾಪನ ಸಭೆ ನಡೆಸಲು ಬಿಜೆಪಿ ಮುಂದಾಗಿದೆ. ಏನಿದರ ಉದ್ದೇಶ, ಲೆಕ್ಕಾಚಾರಗಳು?

ವರದಿ - ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು, (ಜುಲೈ.13):
ಸಾಮಾನ್ಯವಾಗಿ ಆಳುವ ಪಕ್ಷದ ಮೇಲೆ ಆಡಳಿತ ವಿರೋಧಿ ಅಲೆ ಇರುತ್ತದೆ ಎನ್ನೋದು ರಾಜಕೀಯ ಪಂಡಿತರ ಅಭಿಪ್ರಾಯ. ಆದ್ರೆ ಅದು ಎಲ್ಲಾ ಸಮಯದಲ್ಲೂ ಸತ್ಯ ಆಗುತ್ತದೆ ಎಂದೇನಲ್ಲ. ಕಾರಣ ಗುಜರಾತ್ ನಲ್ಲಿ ನರೇಂದ್ರ ಮೋದಿ ಸತತ ಮೂರು ಅವಧಿಗೆ ಸಿಎಂ ಆಗಿ ಪಕ್ಷವನ್ನು ಗೆಲ್ಲಿಸಿದವರು. ಬಳಿಕ ಪ್ರಧಾನಿ ಆಗಿ ಈಗ ಎರಡನೇ ಅವಧಿಗೆ ಮುಂದುವರಿದ್ದಾರೆ. ಹೀಗಾಗಿ ಕೆಲವೊಮ್ಮೆ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡುವ ಶಕ್ತಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಜನತೆಗೆ ಇದೆ‌. 

ಈಗ ಕರ್ನಾಟಕದ ವಿದ್ಯಮಾನಕ್ಕೆ ಬರೋದಾದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇನ್ನೇನು ಏಳೆಂಟು ತಿಂಗಳಲ್ಲಿ ಚುನಾವಣೆ. ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಮತ್ತು ಆಡಳಿತ ಪಕ್ಷ ಬಿಜೆಪಿ ಮೂವರು ಚುನಾವಣೆ ತಯಾರಿ ಆರಂಭ ಮಾಡಿದ್ದಾರೆ. ಹಾಗೆ ನೋಡಿದ್ರೆ ಚುನಾವಣೆ ತಯಾರಿ ಸಂಘಟನೆ ವಿಚಾರದಲ್ಲಿ ಬಿಜೆಪಿ ತುಸು ಮುಂದಿದೆ. ಆದ್ರೆ ಅಧಿಕಾರ ನಡೆಸುತ್ತಿರುವ ಬೊಮ್ಮಾಯಿ ಸರ್ಕಾರದ ವರ್ಚಸ್ಸು ಹಾಗೆ ಮುಂದಿದೆಯಾ ಎನ್ನುವ ಪ್ರಶ್ನೆ ಎದುರಾದರೆ ಬಿಜೆಪಿ ಪಕ್ಷದ ಸಂಘಟನೆಯ ವೇಗ ಸರ್ಕಾರಕ್ಕೆ ಇಲ್ಲ ಎಂಬ ಆರೋಪ ಇರೋದು ನಿಜ. ಹೀಗಾಗಿ ಸರ್ಕಾರದ ಓಟಕ್ಕೆ ವೇಗ ನೀಡಲು ಪಕ್ಷ ಮುಂದಾಗಿದೆ. ಅದರ ಭಾಗವೆಂಬಂತೆ ಸಚಿವರ ಮೌಲ್ಯ ಮಾಪನ.

ಎಲೆಕ್ಷನ್ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದತ್ತ ಸಂಸದರ ಒಲವು? ಏನಿದು ಲೆಕ್ಕಾಚಾರ?

ಬೊಮ್ಮಾಯಿ, ಕಟೀಲ್ ನೇತೃತ್ವದಲ್ಲಿ ಸಭೆ
ಇದೇ ತಿಂಗಳ 15ರಂದು ಸಚಿವರ ಮೌಲ್ಯ ಮಾಪನ ಸಭೆ ಮಾಡಲು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಬಯಸಿದ್ದಾರೆ. ಸಭೆಯನ್ನು ನಂದಿ ಹಿಲ್ಸ್ ಬಳಿಯ ರೆಸಾರ್ಟ್ ಒಂದರಲ್ಲಿ ಮಾಡುವ ಬಗ್ಗೆ ಚರ್ಚೆ ಆಗಿದ್ದು ಇನ್ನೂ ಅಧಿಕೃತ ಆಗಿಲ್ಲ.ಸ್ಥಳ ಇನ್ನೂ ನಿಗದಿಯಾಗಿಲ್ಲ.ಈ ಸಭೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಭಾಗಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಕೆಲ ಸಚಿವರಿಗೆ ನಿರ್ಮಲ್ ಕುಮಾರ್ ಸುರಾನ ಕರೆ ಮಾಡಿ ಸಭೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಭೆ ಈ ಮೊದಲೇ ನಿಗದಿ ಆಗಿತ್ತು..ಆದ್ರೆ ಕೋವಿಡ್ ಅಲೆ ಮೂರನೇ ಅಲೇ ಜೋರಾದ ಹಿನ್ನಲೆಯಲ್ಲಿ ಸಭೆಯನ್ನು ಕ್ಯಾನ್ಸಲ್ ಮಾಡಲಾಗಿತ್ತು. ಆದ್ರೆ ಈಗ ಸಭೆ ನಿಗದಿ ಮಾಡಲಾಗಿದೆ.

ಚಿಂತನ ಬೈಟಕ್ ಈಗ ಯಾಕೆ?
ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಆಗಬೇಕು ಎಂದು ಕೆಲ‌ ಪ್ರಮುಖ ಶಾಸಕರು ಬಯಸಿದ್ದರು.‌ ಆದ್ರೆ ಇಲ್ಲಿ ತನಕ ವಿಸ್ತರಣೆ ಆಗಿಲ್ಲ. ಪುನರ್ ರಚನೆ ಸದ್ದು ಕೂಡ ಬಹುತೇಕ ಅಡಗಿದ್ದು, ಶಾಸಕರು ತಮ್ಮ ತಮ್ಮ‌ ಕ್ಷೇತ್ರದಲ್ಲಿ ಚುನಾವಣೆ ಗೆಲುವಿನ ಬಗ್ಗೆ ಓಡಾಟ ಶುರು ಮಾಡಿದ್ದಾರೆ. ಈ ಮಧ್ಯೆ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷಿಯ ಶಾಸಕರಿಗೆ ಅಸಮಾಧಾನ ಇದೆ. ಶಾಸಕರು ಹೇಳಿದ ಕೆಲಸ ಮಾಡಿಕೊಡಲ್ಲ ಎನ್ನುವ ದೂರಿದೆ. ಶಾಸಕರ ಕಾಲ್ ರಿಸಿವ್ ಮಾಡಲ್ಲ ಎನ್ನುವ ಆರೋಪ ಬಹಿರಂಗವಾಗಿ ಇದೆ. ಮಾತ್ರವಲ್ಲ ಸಚಿವರು ಕಾರ್ಯಕರ್ತರಿಗೆ ಸಮಯ ನೀಡಲ್ಲ ದೂರು ಸಹ ಪಕ್ಷದ ಸಂಘಟನೆ ವಿಭಾಗಕ್ಕೆ ತಲುಪಿದೆ. ಶಾಸಕ ರೇಣುಕಾಚಾರ್ಯ, ಯತ್ನಾಳ್ ಇನ್ನು ಕೆಲ ಶಾಸಕರು ಸಚಿವರ ಕೆಲಸ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎಂಬ ಕೂಗು ಎದ್ದ ಹಿನ್ನಲೆಯಲ್ಲಿ ಈ ಮೌಲ್ಯ ಮಾಪನ ಸಭೆ ಮಹತ್ವ ಪಡೆದುಕೊಂಡಿದೆ.

Karnataka Assembly Election 2023; ಬೊಮ್ಮಾಯಿಗೆ ಬ್ರಾಂಡ್ ಸೆಟ್ ಮಾಡಲು ರಾಜ್ಯ ಬಿಜೆಪಿ ತಂತ್ರ!

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಕೊರತೆ
ಹೌದು... ಸರ್ಕಾರದ ಭಾಗವಾಗಿರುವ ಸಚಿವರು ಪಕ್ಷದ ಕಾರ್ಯ ಚಟುವಟಿಕೆಗೆ ಸಮಯ ನೀಡದೆ, ತಾವು ತಮ್ಮ‌ ಇಲಾಖೆ ಎಂದು ಸುಮ್ಮನೆ ಇರ್ತಾರೆ. ‌ಆದ್ರೆ ಸರ್ಕಾರದ ಮೇಲೆ ಬರುವ ಆರೋಪಕ್ಕೆ ಸಮರ್ಥ ಉತ್ತರ ನೀಡಲ್ಲ ಎಂಬ ಅಸಮಾಧಾನ ಪಕ್ಚದ ಸಂಘಟನೆ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿದೆ. ಈ ಹಿಂದೆ ಇದೇ ವಿಚಾರವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸಿಎಂಗೆ ದೂರು ಸಹ ನೀಡಿದ್ರು. ಸರ್ಕಾರ ಅಂದಮೇಲೆ ಒಂದು ಟೀಮ್ ಆಗಿ ಕೆಲಸ ಮಾಡ್ತಾ ಇಲ್ಲ ಎನ್ನುವ ಮಾಹಿತಿ ಹೈಕಮಾಂಡ್ ಅಂಗಳಕ್ಕೂ ಹೋಗಿದೆ.

ಕೇವಲ ತಮ್ಮ ತಮ್ಮ ಇಲಾಖೆಯನ್ನು ಮಾತ್ರ ಹೈಲೆಟ್ಸ್ ಮಾಡ್ತಾರೆ
ಬಹುತೇಕ ಸಚಿವರು ಒಂದು ಸರ್ಕಾರ ಎಂಬಂತೆ ಕೆಲಸ ಮಾಡದೇ, ತಮ್ಮ ತಮ್ಮ ಇಲಾಖೆಯನ್ನಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಹೈಲೆಟ್ ಮಾಡಿಕೊಳ್ತಾರೆ. ಬೊಮ್ಮಾಯಿ ನೇತೃತ್ವದಲ್ಲಿನ ಸರ್ಕಾರ ಎನ್ನೋದು ಬಲವಾಗಿ ಹೇಳುತ್ತಿಲ್ಲ ಎಂಬ ಬಗ್ಗೆ ಪಕ್ಷದಲ್ಲಿ ಬೇಸರ ಇದ್ದು, ಇತ್ತಿಚೆಗೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಕಟೀಲ್ ಸಚಿವರ ಮೀಡಿಯಾ ಸಲಹೆಗಾರರಿಗೆ ಬೊಮ್ಮಾಯಿ ಸರ್ಕಾರದ ನೇತೃತ್ವ ಎಂದು ವ್ಯಾಪಕವಾಗಿ ಬಳಕೆ ಮಾಡಲು ಸೂಚನೆ ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಅಂದಿನ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 

ವಿಧಾನಸಭೆ ಚುನಾವಣೆಗೆ ತಯಾರಿ
ಈ ಎಲ್ಲಾ ಗೊಂದಲದ ಮಧ್ಯೆ ಚುನಾವಣೆಗೆ ತಯಾರಿ ಆರಂಭ ಆಗಿದೆ. ಅದಕ್ಕೆ ವೇಗ ನೀಡಬೇಕಾದರೆ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಧಿಸಬೇಕಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವಲ್ಲಿ, ಮತ್ತು ಜಾರಿಗೆ ತಂದ ಜನಪರ ಯೋಜನೆ ಬಗ್ಗೆ ಜನರಿಗೆ ತಿಳಿಸಬೇಕಾದ, ಪ್ರಚಾರ ಮಾಡಬೇಕಾದ ಜವಬ್ದಾರಿ ಕೂಡ ಸರ್ಕಾರಕ್ಕೆ ಇದೆ. ಹಾಗೆ ಮಾಡಬೇಕಾದಲ್ಲಿ ಸಂಘಟನೆ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಬಹು ಮುಖ್ಯ. ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಸಚಿವರು ನಿರ್ವಹಿಸಬೇಕಾದ ಜವಬ್ದಾರಿ, ಇಲಾಖಾವಾರು ಪ್ರಗತಿ, ಇಲಾಖೆಯ ಪ್ಲಸ್ ,ಮೈನಸ್ ವಿಚಾರಗಳ ಬಗ್ಗೆ ಅಂದಿನ ಸಭೆಯಲ್ಲಿ ವಿಸ್ತೃತ ಚರ್ಚೆ ಆಗುವ ಸಂಭವ ಇದೆ.‌

ವಿಪಕ್ಷಗಳ ಆರೋಪಕ್ಕೆ ಸರ್ಕಾರದ ಉತ್ತರ ಕಿರುದನಿಯಲ್ಲಿದೆ
ಹೌದು... ವಿಪಕ್ಷಗಳ ಪ್ರತಿದಿನ ಮಾಡುವ ಆರೋಪಕ್ಕೆ ಸರಕಾರ ಮತ್ತು ಸಂಘಟನೆ ಇಂದ ಒಂದುಗೂಡಿ ಉತ್ತರ ಬರುತ್ತಿಲ್ಲ ಎನ್ನುವ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ಆಗಿದೆ. ಉತ್ತರ ನೀಡುವ ಜೊತೆಗೆ ಸರ್ಕಾರ ತನ್ನ ಕಾರ್ಯದ ಮೂಲಕ ಉತ್ತರ ನೀಡಬೇಕಿದೆ.‌ಅದು ಪಕ್ಷದಲ್ಲಿ ಫಾಲೊ‌ ಆಗ್ತಿಲ್ಲ ಎನ್ನುವ ಬಗ್ಗೆ ಆಂತರಿಕವಾಗಿ ಈಗಾಗಲೇ ಚರ್ಚೆ ಆಗಿದೆ. ಈ ಬಗ್ಗೆ ಸಂಘಟನಾ ಪ್ರಮುಖರು ಸಚಿವರಿಗೆ ಪಾಠ ಮಾಡಬಹುದು ಎನ್ನುವ ಮಾಹಿತಿ ಇದೆ.

ವಿವಾದಿತ ಹೇಳಿಕೆಗೆ ಕಡಿವಾಣ
ಕೆಲವೊಮ್ಮೆ ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗ ಬಾಯ್ ತಪ್ಪಿನಿಂದೊ ಅಥವಾ ಉದ್ದೇಶ ಪೂರ್ವಕವಾಗಿಯೆ ಹೇಳಿಕೆ ನೀಡುತ್ತಾರೆ. ಅದು ವಿಪಕ್ಷಗಳ‌ ಬಾಯಿಗೆ ಆಹಾರವಾಗಿ, ಜನರ ಮುಂದೆ ಒಂದು ಅಭಿಪ್ರಾಯ ರೂಪಿಸಲು ಅನುಕೂಲ ಆಗುತ್ತದೆ. ಉದಾಹರಣೆಗೆ ಶಿಕ್ಷಣ ಮಂತ್ರಿ ನಾಗೇಶ್ ಮಕ್ಕಳಿಗೆ ಶೂ ನೀಡುವ ವಿಚಾರದಲ್ಲಿ, " ಶೂ ಸಾಕ್ಸ್ ಗೆ ಬರಲ್ಲ" ಎಂಬ ಸೂಕ್ಷ್ಮ ಸಂವೇದನೆಯ ಹೇಳಿಕೆ ನೀಡಿ ವಿಪಕ್ಷಗಳ ಬಾಯಿಗೆ ಆಹಾರವಾಗಿ, ಕಾಂಗ್ರೆಸ್ ಪಕ್ಷ ಮಕ್ಕಳಿಗೆ ಶೂ ನಾವು ಕೊಡ್ತೇವೆ ಎಂಬ ಅಭಿಯಾನ ಶುರು ಮಾಡಿದ್ರು. ಸಚಿವರ ಹೇಳಿಕೆ ಬಗ್ಗೆ ಪಕ್ಷದೊಳಗೆ ಬೇಸರಕ್ಕೆ ಕಾರಣಾವಗಿತ್ತು. ಚುನಾವಣೆ ಸಮಯದಲ್ಲಿ ಮಾತಾಡುವ ಪ್ರತಿ ಶಬ್ದವೂ ವಿಪಕ್ಷಗಳು ಗ್ರಹಿಸುತ್ತಿರುತ್ತವೆ. ಅದರ ಬಗ್ಗೆ ಸಚಿವರಿಗೆ ಗಮನಕ್ಕೆ ಇರಬೇಕಾಗುತ್ತದೆ ಎಂಬ ಪಾಠವನ್ನು ಸಂಘಟನೆ ಪ್ರಮುಖರು ಅಂದಿನ ಸಭೆಯಲ್ಲಿ ಪಾಠ ಮಾಡುವ ಸಾಧ್ಯತೆ ಇದೆ. 

ಒಟ್ಟಾರೆ ನಾಡಿದ್ದು ನಡೆಯಲಿರಯವ ಸಚಿವರ ಮೌಲ್ಯ ಮಾಪನ ಸಭೆ ಮಹತ್ವ ಪಡೆದಿದೆ..