ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರ್ತಾ ಇದ್ದಂತೆ, ಬಿಜೆಪಿಯ ಪ್ರಮುಖ ಸಂಸದರು , ಸಚಿವರ ಚಿತ್ತ ರಾಜ್ಯ ರಾಜಕಾರಣದತ್ತ ನೆಟ್ಟಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದ್ರೆ, ಕೇಂದ್ರಕ್ಕೆ ಹೋದವರು ರಾಜ್ಯಕ್ಕೆ ಮರಳು ಒಲವು ವ್ಯಕ್ತಪಡಿಸಿದ್ದಾರೆ ಎನ್ನುವ ವಿಶ್ಲೇಷಣೆ ಇಲ್ಲಿದೆ ನೋಡಿದೆ.
ವರದಿ - ರವಿಶಿವರಾಮ್ ಏಷ್ಯಾ ನೆಟ್ ಸುವರ್ಣ ನ್ಯೂಸ್
ಬೆಂಗಳೂರು, (ಜುಲೈ.13): 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ರಂಗು ಏರತೊಡಗಿದೆ. ಒಂದೊಂದು ಪಕ್ಷದದ್ದು ಒಂದೊಂದು ಥಿಯರಿ. ಆಡಳಿತಾರೂಢ ಬಿಜೆಪಿ 150+ ಗುರಿ ಹೊಂದಿದ್ರೆ, ಕಾಂಗ್ರೆಸ್ ಪಕ್ಷವಂತೂ ಅಧಿಕಾರಕ್ಕೆ ಬಂದೇ ಬಿಟ್ವಿ ಎನ್ನುವ ಉಮುದು ತೋರುತ್ತಿದೆ. ಆದ್ರೆ ಅಂತಿಮವಾಗಿ ಜನಾಭಿಪ್ರಾಯ ಹೇಗಿರಲಿದೆ, ಯಾರು ಅಧಿಕಾರಕ್ಕೆ ಏರ್ತಾರೆ ಯಾವ ಪಕ್ಷಕ್ಕೆ ಎಷ್ಟು ಸೀಟ್ ಗೆಲ್ತಾರೆ, ಕೊನೆ ಹಂತದ ಪ್ರಚಾರದಲ್ಲಿ ಯಾವ ಪಕ್ಷ ಜನರ ಮನಸ್ಸು ಗೆಲ್ಲಲಿದೆ ಎನ್ನುವುದರ ಮೇಲೆ ರಾಜಕೀಯ ಪಕ್ಷಗಳ ಭವಿಷ್ಯ ನಿಂತಿದೆ. ಅದೇನೆ ಇರಲಿ, ಆದ್ರೆ ವಿಧಾನಸಭೆ ಚುನಾವಣೆ ಹತ್ತಿರ ಬರ್ತಾ ಇದ್ದಂತೆ, ಬಿಜೆಪಿಯ ಪ್ರಮುಖ ಸಂಸದರು , ಸಚಿವರು ರಾಜ್ಯ ರಾಜಕಾರಣದತ್ತ ದೃಷ್ಟಿ ನೆಟ್ಟಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದೆ.
ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣದತ್ತ?!
ಶೋಭಾ ಕರಂದ್ಲಾಜೆ ಬಿಜೆಪಿಯ ಪ್ರಮುಖ ನಾಯಕರ ಸಾಲಿನಲ್ಲಿ ಇದ್ದವರು. ಈ ಹಿಂದೆ ರಾಜ್ಯದಲ್ಲಿ ಪವರ್ ಮಿನಿಸ್ಟರ್ ಆಗಿ, ಗ್ರಾಮೀಣ ಅಭಿವೃದ್ಧಿ ಖಾತೆ ನಿಭಾಯಿಸಿರುವ ಪಕ್ಷದ ಹಿರಿಯ ನಾಯಕಿ. ಈಗ ಸದ್ಯ ಕೇಂದ್ರ ಮಂತ್ರಿ ಆಗಿದ್ದಾರೆ. ಈಗ ಚರ್ಚೆ ಆಗುತ್ತಿರುವ ಲೆಟೆಸ್ಟ್ ವಿಷಯ ಅಂದ್ರೆ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಮರಳಲು ಒಲವು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ. ವಿಶೇಷ ಅಂದ್ರೆ 2018 ರ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಶೋಭಾ ಕರಂದ್ಲಾಜೆ ಸಂಸದೆ ಆಗಿದ್ದರು. ವಿಧಾನಸಭೆ ಚುನಾವಣೆ ವೇಳೆ ಸ್ಪರ್ಧೆಗೆ ಅಪೇಕ್ಷೆ ಪಟ್ಟಿದ್ದರು ಕೂಡ ಹೈಕಮಾಂಡ್, ಅಂದು ಸಂಸದರಾಗಿದ್ದ ಯಡಿಯೂರಪ್ಪ, ಶ್ರೀರಾಮಲು ಹೊರತುಪಡಿಸಿ ಮತ್ಯಾರಿಗೂ ವಿಧಾನಸಭೆಗೆ ಟಿಕೆಟ್ ನೀಡಿರಲಿಲ್ಲ. ಆದ್ರೆ ಈಗ ಮತ್ತೆ ಶೋಭಾ ಕರಂದ್ಲಾಜೆ 2023 ರ ವಿಧಾನಸಭೆ ಚುನಾವಣೆಗೆ ರಾಜ್ಯದತ್ತ ಆಸಕ್ತಿ ತೋರಿದ್ದಾರೆ ಎನ್ನುತ್ತಿವೆ ಆಪ್ತ ಮೂಲಗಳು..
2024ರ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್: ಏನದು ಹೊಸ ಕಾರ್ಯತಂತ್ರ?
ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷ ಆಗ್ತಾರಾ?
ಈಗ ಶೋಭಾ ಕರಂದ್ಲಾಜೆ ಯಾಕೆ ರಾಜ್ಯ ರಾಜಕೀಯದತ್ತ ಬರ್ತಾರಾ ಎನ್ನುವ ಚರ್ಚೆ ಜೋರಾಗಲು ಕಾರಣ ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಅವಧಿ ಮುಂದಿನ ತಿಂಗಳು ಮುಕ್ತಾಯ ಆಗಲಿದೆ. ಸಂಸದೆ ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷ ಆಗ್ತಾರೆ ಎನ್ನುವ ಮಾತುಗಳು ಕೂಡ ಪಕ್ಷದ ವಲಯದಲ್ಲಿ ಹಬ್ಬಿದೆ. ಈ ಬಾರಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸೋದಾಗಿ ಹೈಕಮಾಂಡ್ ಹೇಳಿದೆ.
ರಾಜ್ಯದಲ್ಲಿ ಬಿಜೆಪಿಯನ್ನು ತಳದಿಂದ ಕಟ್ಟಿದ್ದ ಯಡಿಯೂರಪ್ಪರ ಪವರ್ ಪಾಲಿಟಿಕ್ಸ್ ನಿಂದ ನಿಧಾನಕ್ಕೆ ಹಿಂದೆ ಸರಿಯುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವ ಇಲ್ಲದ ಚುನಾವಣೆ ಇದು. 2013ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೆಜೆಪಿ ಕಟ್ಟಿ ಚುನಾವಣೆ ಎದುರಿಸಿದ್ದ ಯಡಿಯೂರಪ್ಪ, ಬಳಿಕ ಬಿಜೆಪಿ ಸೇರಿದ್ದು ಇತಿಹಾಸ. ಹೀಗಾಗಿ ಯಡಿಯೂರಪ್ಪ ನೇತೃತ್ವದ ಚುನಾವಣೆಯನ್ನು ಬಿಜೆಪಿ ಈ ಹಿಂದೆಯೆ ಎದುರಿಸಿ ಆಗಿದೆ. ಆದ್ರೆ ಆ ಸಮಯ ಸಂದರ್ಭ ಬೇರೆ. ಈಗಿನ ಪರಿಸ್ಥಿತಿ ಬೇರೆ.
ಯಡಿಯೂರಪ್ಪ ನೇತೃತ್ವ ಇಲ್ಲದ ರಾಜ್ಯ ಬಿಜೆಪಿಯ ನೇತೃತ್ವವನ್ನು ಬೊಮ್ಮಾಯಿ ವಹಿಸಿಕೊಂಡಿದ್ದರಾದರೂ ಸಹಜವಾಗಿ ಯಡಿಯೂರಪ್ಪರಿಗೆ ಹೋಲಿಕೆ ಮಾಡಿ ನೋಡಲು ರಾಜಕೀಯವಾಗಿ ಅಸಾಧ್ಯದ ಮಾತು. ಇಂತ ಸಮಯದಲ್ಲಿ ಶೋಭಾ ಕರಂದ್ಲಾಜೆ ರಾಜ್ಯ ರಾಜಕೀಯದ ಮೇಲೆ ಮತ್ತೆ ಒಲವು ಹೊಂದಿದ್ದಾರೆ ಎನ್ನೋದರ ಒಳ ಅರ್ಥ ಗಮನಿಸಿದ್ರೆ ಸಹಜವಾಗಿ ಲೀಡರ್ ಶಿಪ್ ವಿಚಾರ ಚರ್ಚೆಗೆ ಬರುತ್ತದೆ. ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷ ಆಗಿ ರಾಜ್ಯ ರಾಜಕೀಯಕ್ಕೆ ಬರ್ತಾರೆ ಎನ್ನೋ ಚರ್ಚೆಯ ಮಧ್ಯೆ, ಶೋಭಾ ಕರಂದ್ಲಾಜೆಗೆ ರಾಜ್ಯ ರಾಜಕೀಯಕ್ಕೆ ಮರಳಲು ಹೈಕಮಾಂಡ್ ಅನುವು ಮಾಡಿಕೊಟ್ರೆ, ಬೇಡ ಎನ್ನುವ ಸ್ಥಿತಿಯಲ್ಲಿ ಖಂಡಿತ ಇರೋದಿಲ್ಲ. ಆದ್ರೆ ಹೈಕಮಾಂಡ್ ಯೋಚನೆ ಹೇಗಿರಲಿದೆ ಎನ್ನೋದು ಈಗಿರುವ ಪ್ರಶ್ನೆ..
ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣಗೂ ರಾಜ್ಯದ ಮೇಲೆ ಒಲವು?
ಇನ್ನು ಸಂಸದರಾದ ಶಿವಕುಮಾರ್ ಉದಾಸಿ ಮತ್ತು ಕೊಪ್ಪಳ ಸಂಸದ ಕರಡಿ ಸಂಗಣ್ಣ ಕೂಡ ರಾಜ್ಯ ರಾಜಕೀಯದತ್ತ ಒಲವು ಹೊಂದಿದ್ದಾರೆ ಎನ್ನುವ ಮಾಹಿಯನ್ನು ಮೂಲಗಳು ನೀಡಿವೆ. ಹಾನಗಲ್ ನಲ್ಲಿ ನಡೆದ ಬೈ ಎಲೆಕ್ಷನ್ ವೇಳೆ ಟಿಕೆಟ್ ಬಯಸಿದ್ದ ಶಿವಕುಮಾರ್ ಉದಾಸಿ, ತಮಗೆ ನೀಡಿಲ್ಲವಾದರೂ ತನ್ನ ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡಿದ್ರು ಎನ್ನೋದು ಗೊತ್ತಿರುವ ವಿಚಾರ. ಆದ್ರೆ ಪಕ್ಷ ಶಿವಕುಮಾರ್ ಉದಾಸಿಗಾಗಲಿ ಅವರ ಪತ್ನಿಗಾಗಲಿ ಟಿಕೆಟ್ ನೀಡದೆ ಶಿವರಾಜ್ ಸಜ್ಜನ್ ಗೆ ಟಿಕೆಟ್ ನೀಡಿತ್ತು. ಆದ್ರೆ ಗೆದ್ದದ್ದು ಕಾಂಗ್ರೆಸ್ ಪಾರ್ಟಿ.
ಅಂತೇಯೆ ಕರಡಿ ಸಂಗಣ್ಣ ಸಹ ಕೊಪ್ಪಳದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ ಎನ್ನುವ ಮಾತನ್ನು ಅವರ ಆಪ್ತವಲಯ ಹೇಳುತ್ತಿದೆ. ವಿಶೇಷ ಅಂದ್ರೆ ಕರಡಿ ಸಂಗಣ್ಣ ಸಹ 2018 ರ ವಿಧಾನಸಭೆ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡಲು ಬಯಸಿದ್ದರು. ಆದ್ರೆ ಹಾಲಿ ಸಂಸದರಾಗಿದ್ದ ಅವರಿಗೆ ಪಕ್ಷ. ವಿಧಾನಸಭೆಗೆ ಟಿಕೆಟ್ ನೀಡಿರಲಿಲ್ಲ..ಈಗ ಮತ್ತೊಮ್ಮೆ ವಿಧಾನಸಭೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ..
